ನೆಹರೂ ಮೈದಾನದ ಪುಟ್ಬಾಲ್ ಗ್ರೌಂಡ್ ಬಳಿ ಮಾರುಕಟ್ಟೆ ನಿರ್ಮಿಸದಂತೆ ಮನವಿ
ಮಂಗಳೂರು, ಎ.22: ನಗರದ ನೆಹರೂ ಮೈದಾನದ ಫುಟ್ಬಾಲ್ ಗ್ರೌಂಡ್ ಬಳಿ ಮಾರುಕಟ್ಟೆ ನಿರ್ಮಿಸದಂತೆ ದ.ಕ.ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್‌ನ ಅಧ್ಯಕ್ಷ ಡಿಎಂ ಅಸ್ಲಂ ಅವರ ಅಧ್ಯಕ್ಷತೆಯ ನಿಯೋಗವೊಂದು ಬುಧವಾರ ದ.ಕ.ಜಿಲ್ಲಾಧಿಕಾರಿ, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದೆ.
ಮಂಗಳೂರು ಕೇಂದ್ರ ಭಾಗದಲ್ಲಿ ಒಂದೆರೆಡು ಮೈದಾನ ಮಾತ್ರ ಕ್ರೀಡಾ ಚಟುವಟಿಕೆ ಲಭ್ಯವಿರುವುದು. ನೆಹರೂ ಮೈದಾನದ ಪಕ್ಕದಲ್ಲಿರುವ ಪುಟ್ಬಾಲ್ ಗ್ರೌಂಡ್‌ನಲ್ಲಿ ಅಸೋಸಿಯೇಶನ್ ಕಳೆದ 50 ವರ್ಷಕ್ಕೂ ಮಿಕ್ಕಿ ಸ್ಥಳೀಯ, ರಾಜ್ಯ, ರಾಷ್ಟ್ರ ಮಟ್ಟದ ಪುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸುತ್ತಾ ಬಂದಿದೆ. ಈ ಮೈದಾನಕ್ಕೆ ಈಗಾಗಲೇ ಕರ್ನಾಟಕ ಸರಕಾರದಿಂದ ಹುಲ್ಲು ಹಾಸು ಹಾಕಿ ಬೇಲಿ ನಿರ್ಮಿಸುವ ಯೋಜನೆ ರೂಪಿಸಿ ಮಂಜೂರಾತಿ ನೀಡಿದೆ. ಈ ಮಧ್ಯೆ ಇಲ್ಲಿ ಮಾರುಕಟ್ಟೆಗೆ ವ್ಯವಸ್ಥೆ ಮಾಡುವುದನ್ನು ಸಂಸ್ಥೆಯು ಬಲವಾಗಿ ವಿರೋಧಿಸುತ್ತಿದೆ. ರಾಜ್ಯ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲೂ ಕೂಡ ಮೈದಾನದ ಕುರಿತು ಆದೇಶ ಬಂದಿದೆ. ಇಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆ ಮಾಡಲು ಅವಕಾಶವಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಮೈದಾನದ ಪಕ್ಕದಲ್ಲೇ ಹಾಕಿ ಮೈದಾನದಲ್ಲಿ ನಿರ್ಮಿಸಿರುವ ಬಸ್‌ಸ್ಟಾಂಡ್ ಅನ್ನು ತೆರವುಗೊಳಿಸಬೇಕು ಎಂದು ಕೋರ್ಟ್ ಈಗಾಗಲೇ ಆದೇಶವನ್ನು ನೀಡಿದೆ. ಈ ಮೈದಾನದ ಸುತ್ತಮುತ್ತ ಈಗಾಗಲೇ ಹೆಚ್ಚಿನ ಪ್ರದೇಶವನ್ನು ಅಕ್ರಮ ಮಾಡಲಾಗಿದೆ. ಈಗ ಪುಟ್ಬಾಲ್ ಮತ್ತು ಕ್ರಿಕೆಟ್ ಮೈದಾನ ಮಾತ್ರ ಉಳಿದಿದ್ದು, ಇಲ್ಲಿ ಮಾರುಕಟ್ಟೆ ನಿರ್ಮಿಸಿದರೆ ಕ್ರೀಡಾಪ್ರೇಮಿಗಳಿಗೆ ಕ್ರೀಡಾಚಟುವಟಿಕೆ ಮಾಡುವುದರಿಂದ ವಂಚಿತರಾಗಲಿ ದ್ದಾರೆ. ಈ ಮೈದಾನಕ್ಕೆ ಹುಲ್ಲು ಹಾಸು ಹಾಕಿದರೆ ಕ್ರೀಡಾಪಟುಗಳಿಗೆ ತರಬೇತಿ ನೀಡಲು ಈ ಮೈದಾನ ಮಾತ್ರವಿದೆ. ಅಲ್ಲದೆ ಕ್ರೀಡಾ ಪಟುಗಳಿಗೆ ಮತ್ತು ಪ್ರೇಕ್ಷಕರಿಗೆ ವಾಕಿಂಗ್ ಮಾಡಲು ಈ ಸ್ಥಳ ಮಾತ್ರವಿರುವುದರಿಂದ ಪುಟ್ಬಾಲ್ ಮೈದಾನದ ಬಳಿ ಮಾರುಕಟ್ಟೆ ನಿರ್ಮಿಸಿದರೆ ಆ ಪರಿಸರಕ್ಕೆ ಹಾನಿಯಾಗಬಹುದು. ಹಾಗಾಗಿ ಈ ಯೋಜನೆಯನ್ನು ಕೈ ಬಿಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.