​ಪತಿಯ ಕೊನೆ ಆಸೆ ಈಡೇರಿಸಿ: ಕೊರೋನ ಸೋಂಕಿನಿಂದ ಮೃತಪಟ್ಟ ಚೆನ್ನೈ ವೈದ್ಯನ ಪತ್ನಿ ಮೊರೆ

Update: 2020-04-23 05:33 GMT
ಸಾಂದರ್ಭಿಕ ಚಿತ್ರ

ಚೆನ್ನೈ : ಕ್ರಿಶ್ಚಿಯನ್ ಸಂಪ್ರದಾಯದಂತೆ ಪತಿಯ ಅಂತ್ಯಸಂಸ್ಕಾರ ನೆರವೇರಿಸಲು ಅವಕಾಶ ನೀಡುವ ಮೂಲಕ ಪತಿಯ ಕೊನೆಯ ಆಸೆ ಈಡೇರಿಸಿ ಎಂದು ಕೊರೋನ ವೈರಸ್ ಸೋಂಕಿಗೆ ಬಲಿಯಾದ ನಗರದ ವೈದ್ಯರೊಬ್ಬರ ಪತ್ನಿ ತಮಿಳುನಾಡಿನ ಮುಖ್ಯಮಂತ್ರಿಗೆ ಮನವಿ ಮಾಡಿಕೊಂಡಿದ್ದಾರೆ.

ಚೆನ್ನೈನ ನರರೋಗ ತಜ್ಞ ಡಾ. ಸೈಮನ್ ಹರ್ಕ್ಯೂಲಸ್ (55) ಅವರ ಪತ್ನಿ ಮುಖ್ಯಮಂತ್ರಿಗೆ ಕಳುಹಿಸಿರುವ ವೀಡಿಯೊ ಸಂದೇಶವೊಂದರಲ್ಲಿ ಈ ಮನವಿ ಮಾಡಿದ್ದಾರೆ. ಸೈಮನ್ ಅವರಿಗೆ ರೋಗಿಗಳಿಂದ ಸೋಂಕು ಹರಡಿರಬೇಕು ಎಂದು ಶಂಕಿಸಲಾಗಿತ್ತು. ಅವರು ಮೃತಪಟ್ಟ ಬಳಿಕ ಶವವನ್ನು ನಗರದ ಶವಾಗಾರಕ್ಕೆ ತರುತ್ತಿದ್ದ ವೇಳೆ ಸ್ಥಳೀಯ ನಾಗರಿಕರ ಗುಂಪೊಂದು ಆ್ಯಂಬುಲೆನ್ಸ್ ತಡೆದು, ಇಲ್ಲಿ ಅಂತ್ಯಸಂಸ್ಕಾರ ನಡೆಸಿದರೆ ಸೋಂಕು ಹರಡುವ ಸಾಧ್ಯತೆ ಇದೆ ಎಂಬ ಭೀತಿ ವ್ಯಕ್ತಪಡಿಸಿ ಶವಸಂಸ್ಕಾರಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿತ್ತು.
ಬಳಿಕ ಅವರ ಸಹೋದ್ಯೋಗಿಗಳು, ಇಬ್ಬರು ವಾರ್ಡ್‌ಬಾಯ್‌ಗಳ ನೆರವಿನಿಂದ ಸೈಮನ್ ಅವರ ಶವವನ್ನು ಶಾಲಿನಲ್ಲಿ ಸುತ್ತಿ  ರವಿವಾರ ರಾತ್ರಿ ಹೂತಿದ್ದರು.

ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿಯವರಿಗೆ ವೀಡಿಯೊ ಸಂದೇಶದಲ್ಲಿ ಮನವಿ ಮಾಡಿರುವ ಪತ್ನಿ, ನನ್ನ ಪತಿ ಕೋವಿಡ್-19ನಿಂದ ಮೃತಪಟ್ಟಿದ್ದಾರೆ. ಅಂತಿಮ ಕ್ಷಣದಲ್ಲಿ ಅವರು, ನಾನು ಬದುಕಿ ಉಳಿಯದಿದ್ದರೆ ನಮ್ಮ ಸಂಪ್ರದಾಯಕ್ಕೆ ಅನುಗುಣವಾಗಿ ಶವ ದಫನ ಮಾಡಬೇಕು ಎಂದು ಕೋರಿದ್ದರು. ಮುಖ್ಯಮಂತ್ರಿಗಳು ವೈರಸ್ ಸೋಂಕು ಹರಡುವುದು ತಡೆಯಲು ಒಳ್ಳೆಯ ಕೆಲಸ ಮಾಡುತ್ತಿದ್ದು, ಈ ಬಗ್ಗೆ ಗಮನ ಹರಿಸಬೇಕು ಎಂದು ಕೋರಿದ್ದಾರೆ.

ಚೆನ್ನೈ ಮಹಾನಗರ ಪಾಲಿಕೆಯ ಸ್ಮಶಾನದಲ್ಲಿ ಹೂತಿರುವ ಶವವನ್ನು ಹೊರತೆಗೆದು ಕಲ್ಪಕದಲ್ಲಿರುವ ಕ್ರಿಶ್ಚಿಯನ್ ಸ್ಮಶಾನದಲ್ಲಿ ಹೂಳಬೇಕು ಎಂದು ಅವರು ಮನವಿ ಮಾಡಿದ್ದಾರೆ. ಆದರೆ ಈ ಸ್ಮಶಾನ ಭರ್ತಿಯಾಗಿರುವುದರಿಂದ ಇಲ್ಲಿ ಹೊಸ ಶವ ಸಂಸ್ಕಾರಕ್ಕೆ ಅವಕಾಶವಿಲ್ಲ ಎಂದು ಸಂಬಂಧಪಟ್ಟವರು ಹೇಳಿದ್ದಾರೆ.

ಮುಚ್ಚಿದ ಕವರ್‌ನಲ್ಲಿ ಪತಿಯ ಶವವನ್ನು ದಫನ ಮಾಡಲಾಗಿದೆ. ಅದನ್ನು ಹೊರತೆಗೆದು ಕಿಲ್ಪಕ ಸ್ಮಶಾನದಲ್ಲಿ ಹೂಳುವುದರಿಂದ ವೈರಸ್ ಹರಡಲು ಸಾಧ್ಯವಿಲ್ಲ. ನಾನು ಎರಡು ಮಕ್ಕಳನ್ನು ಹೊಂದಿದ ವಿಧವೆ. ಮುಖ್ಯಮಂತ್ರಿ ನನ್ನ ಪತಿಯ ಕೊನೆ ಆಸೆ ಈಡೇರಿಸಬೇಕು ಎಂದು ಮೊರೆ ಇಟ್ಟಿದ್ದಾರೆ.

ರವಿವಾರದ ಘಟನೆಗೆ ಸಂಬಂಧಿಸಿದಂತೆ ಚೆನ್ನೈ ಪೊಲೀಸರು 21 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News