ಏರಿಕೆಯಾಗಿದ್ದ ನೌಕರರ ಭತ್ಯೆಯನ್ನು ಸ್ಥಗಿತಗೊಳಿಸಿದ ಕೇಂದ್ರ ಸರಕಾರ
ಹೊಸದಿಲ್ಲಿ, ಎ.23: ಕೊರೋನ ವೈರಸ್ ಸೋಂಕಿನ ಕಾರಣದಿಂದ ದೇಶದ ಆರ್ಥಿಕತೆಗೆ ಭಾರೀ ಹೊಡೆತ ಬಿದ್ದಿರುವ ಹಿನ್ನೆಲೆಯಲ್ಲಿ, ಕಳೆದ ತಿಂಗಳು ಹೆಚ್ಚಳ ಮಾಡಲಾಗಿದ್ದ ಕೇಂದ್ರ ಸರಕಾರಿ ನೌಕರರ ತುಟ್ಟಿಭತ್ಯೆ/ತುಟ್ಟಿ ಪರಿಹಾರವನ್ನು 2021ರ ಜೂನ್‌ವರೆಗೆ ಸ್ಥಗಿತಗೊಳಿಸಲು ಸರಕಾರ ನಿರ್ಧರಿಸಿದೆ.
2020ರ ಜನವರಿಯಿಂದ 2021ರ ಜೂನ್‌ವರೆಗೆ ಈ ನಿರ್ಧಾರ ಅನ್ವಯಿಸಲಿದ್ದು ಇದೇ ಕ್ರಮವನ್ನು ರಾಜ್ಯ ಸರಕಾರಗಳೂ ಅನುಸರಿಸಿದರೆ 1.20 ಲಕ್ಷ ಕೋಟಿ ಉಳಿಕೆಯಾಗಲಿದ್ದು ಕೊರೋನ ವಿರುದ್ಧದ ಸಮರಕ್ಕೆ ಇದರಿಂದ ಸಹಾಯವಾಗಲಿದೆ ಎಂದು ಸರಕಾರ ತಿಳಿಸಿದೆ.
ಹಣದುಬ್ಬರ ವೆಚ್ಚವನ್ನು ಸರಿದೂಗಿಸಲು ಸರಕಾರಿ ನೌಕರರು/ ಪಿಂಚಣಿದಾರರಿಗೆ ತುಟ್ಟಿ ಭತ್ಯೆ/ತುಟ್ಟಿ ಪರಿಹಾರ ನೀಡಲಾಗುತ್ತಿದೆ. ಸರಕಾರದ ನಿರ್ಧಾರದಿಂದ ಸುಮಾರು 48.34 ಲಕ್ಷ ಕೇಂದ್ರ ಸರಕಾರಿ ನೌಕರರು, 65.26 ಲಕ್ಷ ನಿವೃತ್ತ ನೌಕರರ ಮೇಲೆ ಪರಿಣಾಮ ಬೀರಲಿದೆ. ಕಳೆದ ತಿಂಗಳು(ಮಾರ್ಚ್‌ನಲ್ಲಿ) ಕೇಂದ್ರ ಸರಕಾರ ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರವನ್ನು 4% ಹೆಚ್ಚಿಸಿತ್ತು. ಈ ಹೆಚ್ಚಳವನ್ನು ಇದೀಗ ಸ್ಥಗಿತಗೊಳಿಸಲಾಗಿದೆ.
ಬಡವರು ಮತ್ತು ಅವಕಾಶವಂಚಿತರ ಸಹಿತ ಸಮಾಜದ ವಿವಿಧ ಕ್ಷೇತ್ರಗಳ ಜನರ ಆರೋಗ್ಯ ಮತ್ತು ಕ್ಷೇಮಾಭ್ಯುದಯ ಕಾರ್ಯದ ವೆಚ್ಚ ಸರಿದೂಗಿಸಲು ಹೆಚ್ಚುವರಿ ಆರ್ಥಿಕ ಸಂಪನ್ಮೂಲದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರಿ ನೌಕರರ ತುಟ್ಟಿಭತ್ಯೆ ಮತ್ತು ಪಿಂಚಣಿದಾರರಿಗೆ ನೀಡುವ ತುಟ್ಟಿ ಪರಿಹಾರದ ಹೆಚ್ಚಳದ ಕಂತನ್ನು 2020ರ ಜನವರಿಯಿಂದ 2021ರ ಜೂನ್‌ವರೆಗೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. 2021ರ ಜುಲೈ 1ರಿಂದ ನಿರೀಕ್ಷಿತ ಪರಿಣಾಮದೊಂದಿಗೆ ಮರುಸ್ಥಾಪಿಸಲಾಗುತ್ತದೆ ಮತ್ತು ಈಗಿರುವ ದರದಲ್ಲಿ ತುಟ್ಟಿಭತ್ಯೆ/ತುಟ್ಟಿ ಪರಿಹಾರ ಮುಂದುವರಿಯಲಿದೆ ಎಂದು ಸರಕಾರದ ಅಧಿಸೂಚನೆ ತಿಳಿಸಿದೆ.
ಈ ಕ್ರಮದಿಂದ 2020-21 ಮತ್ತು 2021-22ರ ವಿತ್ತವರ್ಷದಲ್ಲಿ 37,350 ಕೋಟಿ ರೂ. ಉಳಿಕೆಯಾಗಲಿದ್ದು ಇದೇ ಮಾದರಿ ಅನಸರಿಸಿದರೆ ರಾಜ್ಯ ಸರಕಾರಗಳೂ 82,566 ಕೋಟಿ ರೂ. ಉಳಿಸಬಹುದು. ಇದರಿಂದ ಒಟ್ಟು 1.20 ಲಕ್ಷ ಕೋಟಿ ರೂ. ಉಳಿಸಬಹುದು. ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ಅಂತಿಮಗೊಳಿಸಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.