×
Ad

ಪತ್ರಕರ್ತರೂ ಕೊರೋನ ವಾರಿಯರ್ಸ್‍ಗಳು: ಶಾಸಕ ಸಂಜೀವ ಮಠಂದೂರು

Update: 2020-04-23 17:27 IST

ಪುತ್ತೂರು : ಕೊರೋನ ಸೋಂಕು ನಿವಾರಣೆಗಾಗಿ ಸದಾ ಶ್ರಮಿಸುತ್ತಿರುವ ಇಲಾಖೆಗಳ ಸಿಬ್ಬಂದಿಗಳ ಹಾಗೆಯೇ ಮಾಧ್ಯಮದ ಪತ್ರಕರ್ತರೂ ಈ ಕೊರೋನ ವಾರಿಯರ್ಸ್‍ನ ಪ್ರಮುಖ ಅಂಗವಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಜೀವ ಒತ್ತೆ ಇಟ್ಟು ಮನೆ ಮನೆಗೆ ಮಾಹಿತಿ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಆಶಾ ಕಾರ್ಯಕರ್ತೆಯರ ಹಾಗೇ ತಳ ಮಟ್ಟದಲ್ಲಿರುವ ಪತ್ರಕರ್ತರು ಪ್ರಾಮಾಣಿಕ ಸೇವೆಯ ಮೂಲಕ ಸಮಾಜ ರಕ್ಷಣೆಯ ಕೆಲಸದಲ್ಲಿ ಬದ್ಧತೆ ಪ್ರದರ್ಶಿಸುತ್ತಿದ್ದಾರೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಅವರು ಬುಧವಾರ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಸದಸ್ಯರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. 

ಇಂದು ದೇಶದಲ್ಲಿ ಕೊರೋನ ವಿರುದ್ಧ ನಿರ್ಣಾಯಕ ಸಮರ ನಡೆಯುತ್ತಿದೆ. ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪೊಲೀಸರು, ನಾನಾ ಇಲಾಖೆಗಳು, ಸ್ವಚ್ಛತಾ ವಿಭಾಗದವರನ್ನು ಈ ಸಂದರ್ಭದಲ್ಲಿ ನಾವು ಕೊರೊನಾ ಯೋಧರು ಎಂದು ಕರೆಯುತ್ತಿದ್ದೇವೆ. ಪತ್ರಕರ್ತರು ಕೂಡ ಕೊರೋನ ವಾರಿಯರ್ಸ್ ಆಗಿದ್ದಾರೆ ಎಂದರು. ಸಂಕಷ್ಟದ ಮಧ್ಯೆಯೂ ಪತ್ರಕರ್ತರು ದಿನವಿಡೀ ಮಾಡುತ್ತಿರುವ ಸೇವೆ ಅವರ್ಣನೀಯ. ಎಸ್‍ಸಿಡಿಸಿಸಿ ಬ್ಯಾಂಕ್ ಪತ್ರಕರ್ತರನ್ನು ಗೌರವಿಸುವ ರೂಪದಲ್ಲಿ ಈ ಕಿಟ್ ನೀಡುತ್ತಿದೆ. ಶಾಸಕರ ವಾರ್ ರೂಂ ಮೂಲಕ ಇದನ್ನು ವ್ಯವಸ್ಥೆ ಮಾಡಿರುವುದು ಶ್ಲಾಘನೀಯ ಎಂದರು.

ಎಸ್‍ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಎಸ್. ಬಿ. ಜಯರಾಂ ರೈ, ಶಾಸಕರ ವಾರ್‍ರೂಂ ಸಂಯೋಜಕರಾದ ಸಾಜ ರಾಧಾಕೃಷ್ಣ ಆಳ್ವಾ ಉಪಸ್ಥಿತರಿದ್ದರು. ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಸಂಶುದ್ದೀನ್ ಸಂಪ್ಯ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಮೇಘಾ ಪಾಲೆತ್ತಾಡಿ ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News