ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘದಿಂದ ಉಸ್ತುವಾರಿ ಸಚಿವರಿಗೆ ಮನವಿ
ಉಡುಪಿ, ಎ. 23: ಕೊರೋನ ಲಾಕ್‌ಡೌನ್‌ನಿಂದ ಹಲವು ಸಮಸ್ಯೆಗಳಿಂದ ಬಳಲುತ್ತಿರುವ ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರು ಹಾಗೂ ನೌಕರರಿಗೆ ಸರಕಾರದ ಸಹಾಯ ಹಸ್ತ ಚಾಚುವಂತೆ ಹಾಗೂ ವಿವಿಧ ಸೌಲಭ್ಯ ಗಳನ್ನು ಒದಗಿಸಿಕೊಡುವಂತೆ ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘದ ಪದಾಧಿಕಾರಿಗಳು ಇಂದು ಉಡುಪಿ ಶಾಸಕ ರಘುಪತಿ ಭಟ್ ಮೂಲಕ ರಾಜ್ಯದ ಗೃಹ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಸಂಘದ ಜಿಲ್ಲಾಧ್ಯಕ್ಷ ಮಹೇಶ್ ಕುಮಾರ್ ಹಾಗೂ ಜಿಲ್ಲಾ ಕಾರ್ಯದರ್ಶಿ ಮನೋಜ್ ಕಡಬ ಸಚಿವರು ಇಂದು ಉಡುಪಿಗೆ ಭೇಟಿ ನೀಡಿದ ವೇಳೆ ಈ ಮನವಿ ಸಲ್ಲಿಸಿದರು.
ಸಂಘದಲ್ಲಿ ನೊಂದಾವಣೆಗೊಂಡಿರುವ 180ರಷ್ಟು ಮುದ್ರಣಾಲಯಗಳು ಇಂದು ಉಡುಪಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತಿದ್ದು, ಸುಮಾರು 1200ಕ್ಕೂ ಅಧಿಕ ಸಿಬ್ಬಂದಿಗಳು ಇಲ್ಲಿ ಕೆಲಸ ಮಾಡುತಿದ್ದಾರೆ. ಆಯ್ದ ಕೆಲವೇ ಕೆಲವು ಪ್ರೆಸ್ ಗಳಲ್ಲಿ ಇಲಾಖೆಯಲ್ಲಿ ನೊಂದಾಯಿತ ಸಿಬ್ಬಂದಿ ಇದ್ದು, ಉಳಿದ ಹೆಚ್ಚಿನೆಡೆ ಸಣ್ಣ ಪ್ರೆಸ್‌ಗಳಲ್ಲಿ ತಾತ್ಕಾಲಿಕ ನೆಲೆಯಲ್ಲಿ ನೌಕರರು ಕೆಲಸ ನಿರ್ವಹಿಸುತಿದ್ದಾರೆ. ಇವರಿಗೆ ಪಿಎಫ್, ಇಎಸ್‌ಐ ಸೌಲಭ್ಯವೂ ಇರುವುದಿಲ್ಲ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಹೆಚ್ಚಿನ ಮುದ್ರಣಾಲಯ ಮಾಲಕರು ಬಾಡಿಗೆಯ ಕಟ್ಟಡದಲ್ಲಿ ಬ್ಯಾಂಕುಗಳಿಂದ ದೊಡ್ಡ ಮೊತ್ತದ ಸಾಲ ಪಡೆದು ವ್ಯವಹಾರ ಮಾಡುವವರಾ ಗಿದ್ದಾರೆ. ಹೀಗಾಗಿ ಸರಕಾರದ ಲಾಕ್‌ಡೌನ್‌ನಿಂದ ಹೆಚ್ಚಿನ ಪ್ರೆಸ್‌ಗಳಿಗೆ ಸಮಸ್ಯೆಯಾಗಿದ್ದು, ಇಡೀ ಉದ್ಯಮವೇ ಸಂಕಷ್ಟಕ್ಕೆ ಸಿಲುಕಿದೆ ಎಂದು ಹೇಳಲಾಗಿದೆ.
ಇಂಥ ಸಂದರ್ಭದಲ್ಲಿ ನಮ್ಮ ಸಿಬ್ಬಂದಿಗಳಿಗೆ ಕೆಲವು ಸೌಲಭ್ಯಗಳನ್ನು ನೀಡುವಂತೆ ಮನವಿ ಮಾಡಲಾಗಿದೆ. ಇವುಗಳಲ್ಲಿ ಸಿಬ್ಬಂದಿಗಳಿಗೆ ಆಹಾರ ಕಿಟ್, ಕನಿಷ್ಠ ಒಂದು ವರ್ಷ ಬ್ಯಾಂಕುಗಳಲ್ಲಿರುವ ಸಾಲ ಹಾಗೂ ಓಡಿಯ ಬಡ್ಡಿ ಮನ್ನಾ, ಈಗಿರುವ ಸಾಲವನ್ನು ದೀರ್ಘಾವಧಿ ಸಾಲವಾಗಿ ಹಾಗೂ ಬಡ್ಡಿ ರಹಿತವಾಗಿ ನೀಡುವುದು. ಬಾಡಿಗೆ ಕಟ್ಟಡಗಳ ಪ್ರೆಸ್‌ಗಳಿಗೆ ಕನಿಷ್ಠ ಮೂರು ತಿಂಗಳ ಬಾಡಿಗೆ ಮನ್ನಾ ಮಾಡುವಂತೆ ಕಟ್ಟಡ ಮಾಲಕರಿಗೆ ಸೂಚಿಸುವುದು ಹಾಗೂ ನಮ್ಮ ನೌಕರ ರಿಗೆ ಕೊರೋನಾ ಕಾಲದಲ್ಲಿ ವೇತನ ನೀಡಲು ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.