×
Ad

ಉಡುಪಿ: ಜಿಲ್ಲೆಯಲ್ಲಿ ಮತ್ತೆ 14 ಮಂದಿಯ ಮಾದರಿ ಸಂಗ್ರಹ

Update: 2020-04-23 19:21 IST

ಉಡುಪಿ, ಎ.23: ನೋವೆಲ್ ಕೊರೋನ ವೈರಸ್ (ಕೋವಿಡ್-19)ನ ಗುಣಲಕ್ಷಣಗಳೊಂದಿಗೆ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ದಾಖಲಾದ ಇನ್ನೂ 14 ಮಂದಿಯ ಗಂಟಲು ದ್ರವ ಮಾದರಿಯನ್ನು ಗುರುವಾರ ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ‌ಚಂದ್ರ ಸೂಡ ತಿಳಿಸಿದ್ದಾರೆ.

ಇಂದು ಕಳುಹಿಸಿದ 14 ಗಂಟಲು ದ್ರವ ಸ್ಯಾಂಪಲ್‌ಗಳಲ್ಲಿ ಎರಡು ಕೋವಿಡ್ ಶಂಕಿತರದ್ದು ಹಾಗೂ ನಾಲ್ಕು ತೀವ್ರ ಉಸಿರಾಟ ತೊಂದರೆಯ ವರದ್ದು. ಉಳಿದ ಎಂಟು ಮಾದರಿಗಳು ಶೀತಜ್ವರದಿಂದ ಬಳಲುತ್ತಿರುವವರ್ದಾಗಿದೆ ಎಂದು ಅವರು ಹೇಳಿದರು. ಗುರುವಾರ ಒಟ್ಟು 26 ಮಾದರಿಗಳ ಫಲಿತಾಂಶ ಬಂದಿದ್ದು, ಇವೆಲ್ಲವೂ ನೆಗೆಟಿವ್ ಆಗಿವೆ. ಹೀಗಾಗಿ ಗುರುವಾರ ಪರೀಕ್ಷೆಗೆ ಕಳುಹಿಸಿದ 26 ಮಾದರಿಗಳು ಸೇರಿದಂತೆ ಇನ್ನು ಒಟ್ಟು 98ರ ವರದಿ ಇನ್ನು ಬರಬೇಕಾಗಿದೆ ಎಂದರು.

ಜಿಲ್ಲೆಯಿಂದ ಇದುವರೆಗೆ ಒಟ್ಟು 1007 ಮಂದಿಯ ಸ್ಯಾಂಪಲ್‌ಗಳನ್ನು ಸೋಂಕಿನ ಪರೀಕ್ಷೆಗಾಗಿ ಪಡೆಯಲಾಗಿದೆ. ಇವುಗಳಲ್ಲಿ 906 ಮಾದರಿ ನೆಗೆಟಿವ್ ಆಗಿದ್ದರೆ, ಮೂರು ಮಾತ್ರ ಪಾಸಿಟಿವ್ ಆಗಿವೆ. ಇವರೆಲ್ಲರೂ ಚಿಕಿತ್ಸೆ ಪಡೆದು ಈಗಾಗಲೇ ಆ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
7 ಮಂದಿ ಐಸೋಲೇಷನ್ ವಾರ್ಡಿಗೆ: ಇಂದು ಮತ್ತೆ ಹೊಸದಾಗಿ 7 ಮಂದಿ ಕೋವಿಡ್-19 ರೋಗಲಕ್ಷಣದೊಂದಿಗೆ ಐಸೋಲೇಷನ್ ವಾರ್ಡಿಗೆ ಸೇರ್ಪಡೆಗೊಂಡಿದ್ದಾರೆ. ಇವರಲ್ಲಿ ಆರು ಮಂದಿ ಪುರುಷರು ಹಾಗೂ ಓರ್ವ ಮಹಿಳೆಯಿದ್ದಾರೆ. ಐವರು ತೀವ್ರ ಉಸಿರಾಟದ ತೊಂದರೆಗೆ ಹಾಗೂ ಉಳಿದಿ ಬ್ಬರು ಶೀತಜ್ವರ ಬಾಧೆಗೆ ದಾಖಲಾಗಿದ್ದಾರೆ. ಇಂದು 9 ಮಂದಿ ಐಸೋಲೇಷನ್ ವಾರ್ಡಿನಿಂದ ಬಿಡುಗಡೆಗೊಂಡಿದ್ದು, ಒಟ್ಟಾರೆಯಾಗಿ 263 ಮಂದಿ ಈವರೆಗೆ ಬಿಡುಗಡೆಗೊಂಡಿದ್ದಾರೆ. ಸದ್ಯ 50 ಮಂದಿ ಐಸೋಲೇಷನ್ ವಾರ್ಡಿನಲ್ಲಿ ನಿಗಾ ದಲ್ಲಿದ್ದಾರೆ ಎಂದು ಡಾ.ಸೂಡ ತಿಳಿಸಿದರು.

ಜಿಲ್ಲೆಯಲ್ಲಿ ಉಸಿರಾಟದ ತೊಂದರೆ, ಹೊರಜಿಲ್ಲೆ, ಹೊರರಾಜ್ಯಗಳಿಂದ ಬಂದವರು ಹಾಗೂ ಕೋವಿಡ್ ಶಂಕಿತರ ಸಂಪರ್ಕಕ್ಕೆ ಬಂದವರು ಸೇರಿದಂತೆ ಇಂದು ಮತ್ತೆ 62 ಮಂದಿ ಹೊಸದಾಗಿ ನೋಂದಣಿಗೊಂಡಿದ್ದಾರೆ. ಈ ಮೂಲಕ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 3162 ಮಂದಿ ತಪಾಸಣೆಗಾಗಿ ನೋಂದಣಿ ಮಾಡಿಕೊಂಡಂತಾಗಿದೆ. ಇವರಲ್ಲಿ 1892 ಮಂದಿ 28 ದಿನಗಳ ನಿಗಾ ಪೂರೈಸಿ ದ್ದರೆ, 2371 (ಇಂದು 46) ಮಂದಿ 14 ದಿನಗಳ ನಿಗಾವನ್ನು ಪೂರ್ಣ ಗೊಳಿಸಿದ್ದಾರೆ. ಒಟ್ಟು 709 ಮಂದಿ ಇನ್ನೂ ಹೋಮ್ ಕ್ವಾರಂಟೈನ್ ಹಾಗೂ 32 ಮಂದಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಡಾ. ಸುಧೀರ್‌ಚಂದ್ರ ಸೂಡ ವಿವರಿಸಿದರು.

ನಗರದ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಶಂಕಿತ ನೋವೆಲ್ ಕೊರೋನ ವೈರಸ್ (ಕೋವಿಡ್-19) ಸೋಂಕಿನೊಂದಿಗೆ ತೀವ್ರ ಉಸಿರಾಟದ ತೊಂದರೆಗಾಗಿ ಚಿಕಿತ್ಸೆ ಪಡೆಯುತ್ತಿರುವ ಭಟ್ಕಳದ 26ರ ಹರೆಯದ ಗರ್ಭಿಣಿ ಮಹಿಳೆಯ ಎರಡನೇ ಸ್ಯಾಂಪಲ್ ವರದಿ ಗುರುವಾರವೂ ಬಂದಿಲ್ಲ ಎಂದು ಡಾ.ಸೂಡ ತಿಳಿಸಿದ್ದಾರೆ. ಅವರ ಮೊದಲ ಸ್ಯಾಂಪಲ್ ವರದಿ ನೆಗೆಟಿವ್ ಆಗಿದೆ.

ಆರೋಗ್ಯ ಇಲಾಖೆಯ ಆರೋಗ್ಯ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಇಂದು ಕಾರ್ಕಳದ ಹೆಬ್ರಿ, ಬೆಳ್ಮಣ್, ಇರ್ವತ್ತೂರು ಹಾಗೂ ಕುಂದಾಪುರದ ಕಿರಿಮಂಜೇಶ್ವರ ಗ್ರಾಮಗಳ ಮನೆ ಮನೆಗೆ ಭೇಟಿ ನೀಡಿ, ಕೋವಿಡ್-19ರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಕೊರೋನ ಕುರಿತ ಮಾಹಿತಿ, ಕರಪತ್ರಗಳನ್ನು ನೀಡಿದರು. ಅಲ್ಲದೇ ಕ್ವಾರಂಟೈನ್‌ನಲ್ಲಿರುವವರ ಮನೆಗಳಿಗೂ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News