ಕೊರೋನ ವೈರಸ್: ದ.ಕ. ಜಿಲ್ಲೆಯಲ್ಲಿ ಎರಡನೇ ಬಲಿ
ಬಂಟ್ವಾಳ, ಎ. 23: ಕೋವಿಡ್ - 19 (ಕೊರೋನ) ವೈರಸ್ ಸೋಂಕು ದೃಢಪಟ್ಟಿದ್ದ ತಾಲೂಕಿನ ಬಿ.ಕಸಬ ಗ್ರಾಮದ ಬಂಟ್ವಾಳ ಪೇಟೆಯ 75 ವರ್ಷದ ಮಹಿಳೆ ಗುರುವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ.
ಕೊರೋನ ವೈರಸ್‍ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಬ್ಬರು ಬಲಿಯಾಗಿದ್ದು ಇಬ್ಬರೂ ಒಂದೇ ಮನೆಯವರಾಗಿದ್ದಾರೆ. ಇಂದು ಮೃತಪಟ್ಟ ಮಹಿಳೆ ಅನಾರೋಗ್ಯದ ಕಾರಣ ಒಂದು ತಿಂಗಳ ಹಿಂದೆ ಮಂಗಳೂರು ಹೊರ ವಲಯದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೂ ಕೊರೋನ ವೈರಸ್ ಸೋಂಕು ತಗುಲಿರುವುದು ಜಿಲ್ಲೆಯಲ್ಲಿ ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.
ಮೃತ ಮಹಿಳೆ ಎ. 19ರಂದು ಕೊರೋನ ಸೋಂಕಿನಿಂದ ಮೃತರಾದ ಬಂಟ್ವಾಳ ಪೇಟೆಯ ವೆಂಕಟರಮನ ದೇವಸ್ಥಾನದ ಬಳಿಕ ಕಾಮತ್ ಲೇನ್‍ನ ಮಹಿಳೆಯ ಅತ್ತೆ (ಪತಿಯ ತಾಯಿ)ಯಾಗಿದ್ದಾರೆ. ಎ.19ರಂದು ಮೃತರಾದ ಮಹಿಳೆಯ ಪುತ್ರ ಫೆಬ್ರವರಿಯಲ್ಲಿ ದುಬೈಯಿಂದ ಬಂದಿದ್ದು ಆತನ ಮೂಲಕ ಮನೆ ಮಂದಿಗೆ ವೈರಸ್ ಹರಡಿದೆ ಎಂದು ಶಂಕಿಸಲಾಗಿದೆ. ಆದರೆ ಪುತ್ರನ ಆರೋಗ್ಯ ಸ್ಥಿರವಾಗಿದ್ದು ಆತನನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.
ಮಹಿಳೆಯ ಸಾವಿನ ಬಗ್ಗೆ ಗುರವಾರ ರಾತ್ರಿ ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿರುವ ಜಿಲ್ಲಾಧಿಕಾರಿ, ಪಾರ್ಶ್ವವಾಯು (ಸ್ಟ್ರೋಕ್)ಗೆ ಒಳಗಾದ ಈ ಮಹಿಳೆಯನ್ನು ಮಾರ್ಚ್ 18ರಂದು ಮಂಗಳೂರು ಹೊರ ವಲಯದ ಅಡ್ಯಾರ್ ಕಣ್ಣೂರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಎರಡು ದಿನಗಳ ಹಿಂದೆ ಮಹಿಳೆಗೆ ಜ್ವರ, ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಯಿಂದ ಮಂಗಳೂರು ಕೋವಿಡ್ ಆಸ್ಪತ್ರೆಗೆ ದಾಖಲಿಸಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಗಂಟಲ ದ್ರವ ಮಾದರಿಯ ಪರೀಕ್ಷಾ ವರದಿ ಸ್ವೀಕೃತವಾಗಿದ್ದು ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಗುರುವಾರ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.