ಕೊರೋನ ವಾರಿಯರ್ಸ್ ಮೇಲೆ ದಾಳಿ ನಡೆಸಿದರೆ ಮುಲಾಜಿಲ್ಲದೆ ಕಠಿಣ ಕ್ರಮ: ಗೃಹ ಸಚಿವ ಬೊಮ್ಮಾಯಿ
ಉಡುಪಿ, ಎ.23: ಕೊರೋನ ವಾರಿಯರ್ಸ್ ಮೇಲಿನ ದಾಳಿ, ನಿರ್ಬಂಧ, ಅಡಚಣೆಯಂತಹ ಪ್ರಕರಣಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಎಷ್ಟೆ ಪ್ರಭಾವಿ ವ್ಯಕ್ತಿಯಾಗಿದ್ದರೂ ಯಾವುದೇ ಮುಲಾಜಿಲ್ಲದೇ ಕೂಡಲೇ ಕಠಿಣ ಕ್ರಮ ಜರಗಿಸಿ, ಬಂಧಿಸುವ ಕಾರ್ಯ ಮಾಡಲಾ ಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣಗಳ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸುಗ್ರಿವಾಜ್ಞೆ ಹೊರಡಿಸಿವೆ. ಇದನ್ನು ಕೂಡಲೇ ಅನುಷ್ಠಾನಕ್ಕೆ ತಂದು, ಆ ಪ್ರಕಾರ ಪ್ರಕರಣ ದಾಖಲಿಸಿ, ಶಿಕ್ಷೆಯನ್ನು ವಿಧಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸ್ಪಷ್ಟವಾದ ನಿರ್ದೇಶನ ನೀಡಲಾಗಿದೆ ಎಂದರು.
ಇದೇ ರೀತಿಯ ಪ್ರಕರಣ ಉಡುಪಿ ಜಿಲ್ಲೆಯಲ್ಲಿ ನಡೆದಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಆರೋಗ್ಯ ಕಾರ್ಯ ಕರ್ತರು ಹಾಗೂ ಪೊಲೀಸರ ಮೇಲೆ ನಡೆಯುವ ಹಲ್ಲೆ ವಿಚಾರದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಎಸ್ಪಿ ಜೊತೆ ಮಾತನಾಡಿ ಕ್ರಮ ತೆಗೆದುಕೊಳ್ಳ ಲಾುವುದು ಎಂದು ಅವರು ತಿಳಿಸಿದರು.
ಜಮೀರ್‌ಗೆ ಆರೋಗ್ಯ ತಪಾಸಣೆ
ಶಾಸಕ ಜಮೀರ್ ಅಹ್ಮದ್‌ರನ್ನು ಆರೋಗ್ಯ ತಪಾಸಣೆಗೆ ಒಳಪಡಿಸುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಆ ಕಾರ್ಯವನ್ನು ಆರೋಗ್ಯ ಸಚಿವರು ಮಾಡಲಿದ್ದಾರೆ. ಈ ಸಂಬಂಧ ಸಚಿವರೊಂದಿಗೆ ಮಾತನಾಡಿದ್ದು, ಅವರು ಈ ಬಗ್ಗೆ ಕ್ರಮ ತೆಗೆುಕೊಳ್ಳಲಿದ್ದಾರೆ ಎಂದು ಹೇಳಿದರು.
ಪಾದರಾಯಣಪುರ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 126 ಮಂದಿಯನ್ನು ಬಂಧಿಸಿ, ರಾಮನಗರ ಜೈಲಿನಲ್ಲಿ ಕಳುಹಿಸಲಾಗಿದೆ. ಇದರಲ್ಲಿ ಓರ್ವ ಪ್ರಮುಖ ಆರೋಪಿಯ ಬಂಧನಕ್ಕೆ ಬಾಕಿದ್ದು, ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು. ಈ ಪ್ರಕರಣದ ಬಗ್ಗೆ ಇನ್ನು ಜಾರ್ಜ್‌ಶೀಟ್ ಸಲ್ಲಿಸಿಲ್ಲ. ಆದುದರಿಂದ ಈ ಪ್ರಕರಣಕ್ಕೆ ಹೊಸ ಸುಗ್ರಿವಾಜ್ಞೆ ಆದೇಶದಲ್ಲಿರುವ ಸೆಕ್ಷನ್‌ಗಳನ್ನು ಸೇರಿಸುವ ಬಗ್ಗೆ ಪ್ರಯತ್ನ ಮಾಡಲಾಗುವುದು ಎಂದರು.
ಕೇಂದ್ರ ಸರಕಾರದ ಆದೇಶದಂತೆ ಆರ್ಥಿಕ ಚಟುವಟಿಕೆಗಳಿಗೆ ಅನುಕೂಲ ವಾಗುವ ಉದ್ದೇಶದಿಂದ ಕೆಲವು ಸಡಿಲಿಕೆಯನ್ನು ಮಾಡಲಾಗಿದೆ. ಆದರೆ ಇದ ರಿಂದಾಗಿ ಕೊರೋನ ಭೀತಿ ಹೆಚ್ಚಾದರೆ ಮತ್ತು ಇತರ ನಿರ್ಬಂಧಗಳ ಉಲ್ಲಂಘನೆಗಳಾದರೆ ಈ ಸಡಿಲಿಕೆಯನ್ನು ಕೈಬಿಡಲಾಗುತ್ತದೆ. ಆದುದರಿಂದ ಜನ ಎಚ್ಚರ ವಹಿಸಬೇಕು. ಅನವಶ್ಯಕವಾಗಿ ತಿರುಗಾಬಾರದೆಂದು ಸಚಿವರು ತಿಳಿಸಿದರು.
ಪೊಲೀಸರಿಗೆ ಆರೋಗ್ಯ ತಪಾಸಣೆ
ಕೊರೋನ ಭೀತಿಯ ಹಿನ್ನೆಲೆಯಲ್ಲಿ ಕರ್ತವ್ಯ ನಿರತ ಎಲ್ಲ ಪೊಲೀಸರಿಗೆ ಆರೋಗ್ಯ ತಪಾಸಣೆ ಮಾಡಲು ಸೂಚನೆ ಮಾಡಲಾಗಿದೆ. ಅದೇ ರೀತಿ ಮಾಸ್ಕ್, ಸ್ಯಾನಿಟೈಜರ್ ಹಾಗೂ ಶೀಲ್ಡ್‌ಗಳನ್ನು ಪೂರೈಕೆ ಮಾಡಲಾಗುತ್ತಿದೆ. ಆರೋಗ್ಯ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಸಂಪೂರ್ಣ ವಾದ ರಕ್ಷಣೆ ಮತ್ತು ಪೊಲೀಸರಿಗೆ ಆರೋಗ್ಯದ ಸುರಕ್ಷತೆಯನ್ನು ಕಾಪಾಡಲು ಸರಕಾರ ಬದ್ಧವಾಗಿದೆ ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸುಗ್ರಿವಾಜ್ಞೆಯಲ್ಲಿ ಯಾವುದನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರ್ನಾಟಕ, ಕೇರಳ ಹಾಗೂ ಉತ್ತರ ಪ್ರದೇಶ ಸರಕಾರಗಳು ಕೇಂದ್ರ ಆದೇಶ ಹೊರಡಿಸುವ ಮೊದಲೇ ಇದನ್ನು ಜಾರಿಗೆ ತಂದಿದ್ದವು. ಆದುರಿಂದ ಈ ಬಗ್ಗೆ ಸ್ಪಷ್ಟತೆಯನ್ನು ಕೇಳಿಕೊಳ್ಳಲಾಗುವುದು ಎಂದರು.