ಲಾಕ್‌ಡೌನ್ ಉಲ್ಲಂಘಿಸಿ ಅಕ್ರಮ ವಾಸಿಗಳ ತೆರವು: ನಿರಾಶ್ರಿತರ ಕೇಂದ್ರ-ಲೇಡಿಗೋಶನ್ ಆಸ್ಪತ್ರೆಗೆ ಸೇರ್ಪಡೆ
ಗುರುಪುರ, ಎ. 23:ಲಾಕ್‌ಡೌನ್ ಉಲ್ಲಂಘಿಸಿ ವ್ಯಕ್ತಿಯೊಬ್ಬರು ಸ್ಥಳೀಯ ಗ್ರಾಪಂ ಅಥವಾ ಸಂಬಂಧಪಟ್ಟ ಇಲಾಖೆಯ ಅನುಮತಿ ಇಲ್ಲದೆ ನಿರಾಶ್ರಿತ ಮೂವರ ಕುಟುಂಬವೊಂದಕ್ಕೆ ಗುರುಪುರ ಗ್ರಾಪಂ ವ್ಯಾಪ್ತಿಯ ಮೂಳೂರು ಮಠದಗುಡ್ಡೆ ಸೈಟ್‌ನ ಮುರುಕಲು ಮನೆಯಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿದ ಬಳಿಕ ಸ್ಥಳೀಯರಲ್ಲಿ ಉಂಟಾಗಿರುವ ಆತಂಕದ ಹಿನ್ನೆಲೆಯಲ್ಲಿ ಗುರುವಾರ ಸ್ಥಳಕ್ಕಾಗಮಿಸಿದ ಅಧಿಕಾರಿಗಳ ತಂಡವು ಮೂವರಲ್ಲಿ ಇಬ್ಬರನ್ನು ಮಂಗಳೂರಿನ ನಿರಾಶ್ರಿತರ ಕೇಂದ್ರ ಹಾಗೂ ಮಹಿಳೆಯನ್ನು ಲೇಡಿಗೋಶನ್ ಆಸ್ಪತ್ರೆಗೆ ದಾಖಲಿಸಿತು.
ಎರಡು ತಿಂಗಳ ಹಿಂದೆ ಪೊಳಲಿ ದ್ವಾರದ ಬಳಿ ಟೆಂಟ್ ಹಾಕಿಕೊಂಡು ವಾಸಿಸುತ್ತಿದ್ದ ಮತಾಂತರಗೊಂಡಿದ್ದಾನೆ ಎನ್ನಲಾದ ಡ್ಯಾನಿಶ್ ಯಾನೆ ದಿನೇಶ್ ಹಾಗೂ ಆತನ ಪತ್ನಿ ಆಶಾ ಮತ್ತವರ ಗಂಡು ಮಗುವಿಗೆ ಈ ವ್ಯಕ್ತಿಯು ಕೊರೋನ ಲಾಕ್‌ಡೌನ್ ಅವಧಿಯಲ್ಲೇ ಮಠದಗುಡ್ಡೆ ಸೈಟಿನ ಪುಷ್ಪಾಕಣ್ಣನ್ ಎಂಬವರ ಮನೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಟ್ಟಿದ್ದರು ಎನ್ನಲಾಗಿದೆ. ಈ ಕುಟುಂಬದ ಮೇಲೆ ಸಂಶಯ ವ್ಯಕ್ತಪಡಿ ಸಿದ ಸ್ಥಳೀಯರು ಗ್ರಾಪಂ, ಆರೋಗ್ಯಾಧಿಕಾರಿಗಳಿಗೆ ನೀಡಿದ ದೂರಿನ ಮೇರಗೆ ಕೆಲವು ದಿನಗಳ ಹಿಂದೆ ನೋಡೆಲ್ ಅಧಿಕಾರಿ ರಾಜಲಕ್ಷ್ಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕುಟುಂಬಕ್ಕೆ ಎಚ್ಚರಿಕೆ ನೀಡಿ ತೆರಳಿದ್ದರು.
ಬಳಿಕ ಗುರುಪುರ ಗ್ರಾಪಂನ ಗ್ರಾಮೀಣ ಕಾರ್ಯಪಡೆ ತುರ್ತು ಸಭೆ ಕರೆದು, ಅನಧಿಕೃತವಾಗಿ ವಾಸಿಸುತ್ತಿದ್ದ ಸದ್ರಿ ಅಜ್ಞಾತ ಕುಟುಂಬವನ್ನು ನಿರಾಶ್ರಿತ ಕೇಂದ್ರಕ್ಕೆ ಸ್ಥಳಾಂತರಿಸಬೇಕು ಮತ್ತು ಆರೋಗ್ಯ ತಪಾಸಣೆ ಮಾಡಬೇಕೆಂದು ನಿರ್ಣಯ ಕೈಗೊಂಡಿತ್ತು. ಕಾರ್ಯಪಡೆಯ ಸದಸ್ಯ ಡಾ. ಅಮಿತ್‌ರಾಜ್ ಗ್ರಾಪಂ ವರದಿ ಪಡೆದು ಉಪತಹಶೀಲ್ದಾರರ ಮೂಲಕ ತಹಶೀಲ್ದಾರರಿಗೆ ಕಳುಹಿಸಿದ್ದರು. ಗುರುವಾರ ಬೆಳಗ್ಗೆ ಸ್ಥಳಕ್ಕಾಗಮಿಸಿದದ ಉಪತಹಶೀಲ್ದಾರ್, ಪಿಡಿಒ, ಕೋವಿಡ್ ವಿಶೇಷ ಅಧಿಕಾರಿ, ಆಶಾ ಕಾರ್ಯಕರ್ತೆಯರ ತಂಡ ಮೂವರನ್ನು ವಶಕ್ಕೆ ಪಡೆದು ಡ್ಯಾನಿಶ್ ಹಾಗೂ ಮಗುವನ್ನು ಮಂಗಳೂರು ಪುರಭವನದ ನಿರಾಶ್ರಿತ ಕೇಂದ್ರ ಹಾಗೂ ಮಹಿಳೆಯನ್ನು ಲೇಡಿಗೋಶನ್ ಆಸ್ಪತ್ರೆಗೆ ದಾಖಲಿಸಿತು.