ಚಿನ್ನದ ಕುಸುರಿ ಕಲೆಗೆ ವಿದಾಯ ಕೋರುವ ಅನಿವಾರ್ಯತೆಯಲ್ಲಿ ಕುಶಲಕರ್ಮಿಗಳು !
ಮಂಗಳೂರು, ಎ.23: ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ಸ್ವರ್ಣೋದ್ಯಮ ಎಕ್ಕುಟ್ಟಿ ಹೋಗಿವೆ. ಕಳೆದೊಂದು ತಿಂಗಳಿನಿಂದ ಚಿನ್ನಾಭರಣಕ್ಕೆ ಬೇಡಿಕೆಗಿಂತಲೂ ಕೂಡ ಮಳಿಗೆಗಳಿಗೆ ಬಾಗಿಲು ತೆರೆಯಲು ಅವಕಾಶವಿಲ್ಲದ ಕಾರಣ ಎಲ್ಲವೂ ಏರುಪೇರಾಗಿವೆ. ಈ ಮಧ್ಯೆ ಕೆಲವು ದಿನ ದಿಂದೀಚೆಗೆ ಕೆಲವು ಮಳಿಗೆಗಳು ಆನ್‌ಲೈನ್ ವ್ಯವಹಾರಕ್ಕೆ ಇಳಿದಿದೆ. ವೈರಸ್ ದೂರವಾಗುತ್ತಲೇ ಚಿನ್ನಾಭರಣದ ಬೆಲೆಯಲ್ಲಿ ಏರಿಕೆ ಕಂಡು ಬಂದರೂ ಅಚ್ಚರಿ ಇಲ್ಲ ಎಂಬ ಮಾತು ಕೇಳಿ ಬರುತ್ತಿವೆ. ಆದರೆ ಚಿನ್ನದ ಕುಸುರಿ ಕೆಲಸವನ್ನು ನಂಬಿ ಬದುಕು ಕಟ್ಟಿಕೊಂಡವರ ಬದುಕು ಮಾತ್ರ ಕೊರೋನ-ಲಾಕ್‌ಡೌನ್‌ನಿಂದ ಅಯೋಮಯವಾಗಿದೆ.
ತಿಂಗಳ ಹಿಂದೆ ಅಂದರೆ ಲಾಕ್‌ಡೌನ್ ವಿಧಿಸಲ್ಪಡುವ ಮುನ್ನ ನಗರದ ವಿವಿಧ ಮಾಲ್‌ಗಳ ಸಹಿತ ಪ್ರಮುಖ ಸ್ಥಳಗಳಲ್ಲಿ ಬೃಹತ್ ಚಿನ್ನಾಭರಣ ಮಳಿಗೆಗಳಲ್ಲಿ ಬಿರುಸಿನ ವ್ಯಾಪಾರವಿತ್ತು. ಚಿನ್ನಾಭರಣ ಮಳಿಗೆಗಳ ಸಂಖ್ಯೆ ಹೆಚ್ಚುತ್ತಲೇ ಸಾಂಪ್ರದಾಯಿಕ ಚಿನ್ನದ ಕುಸುರಿ ಕೆಲಸಗಾರರನ್ನು ಕೇಳುವವರು ಇಲ್ಲದಂತಾಗಿತ್ತು. ಇದೀಗ ಲಾಕ್‌ಡೌನ್‌ನಿಂದಾಗಿ ಕುಸುರಿ ಕೆಲಸಗಾರರ ಬದುಕು ಮತ್ತಷ್ಟು ಶೋಚನೀಯವಾಗಿದೆ. ಅಂದರೆ ದಿನವಿಡೀ ಆಭರಣ ತಯಾರಿಯ ಕುಸುರಿ ಕಲೆಯಲ್ಲಿ ತಲ್ಲೀನರಾಗಿದ್ದ ಸಾಂಪ್ರದಾಯಿಕ ಚಿನ್ನ ಮತ್ತು ಬೆಳ್ಳಿ ಕುಶಲಕರ್ಮಿಗಳು ದಯನೀಯ ಸ್ಥಿತಿಗೆ ತಲುಪಿದ್ದಾರೆ. ಬದುಕಿಗೆ ಆಧಾರವಾಗಿದ್ದ ಕುಲ ಕಸುಬುಗಳಿಲ್ಲದೆ ಕಂಗಾಲಾಗಿರುವ ನೂರಾರು ಕುಶಲಕರ್ಮಿಗಳು ಇದೀಗ ಉಪಾಯವಿಲ್ಲದೆ ದಿನಗೂಲಿ ಕಾರ್ಮಿಕರಾಗಿ ಬದಲಾಗುತ್ತಿದ್ದರೂ ಕೂಡ ಸದ್ಯ ಅದಕ್ಕೂ ಅವಕಾಶ ಇಲ್ಲವಾಗಿದೆ.
ಸಂಬಳ, ಕೂಲಿ, ವಿಮೆ ಇತ್ಯಾದಿ ಕಾರ್ಮಿಕ ಸೌಲಭ್ಯವಿಲ್ಲದ ಕುಶಲಕರ್ಮಿಗಳಿಗೆ ಈಗ ಕೆಲಸವೂ ಇಲ್ಲವಾಗಿದೆ. ಪ್ರತಿ ವರ್ಷ ಮಾರ್ಚ್‌ನಿಂದ ಮೇ ತನಕ ಶುಭ ಕಾರ್ಯಗಳು ನಡೆಯುತ್ತಿದ್ದು, ವರ್ಷದ ಬಹುತೇಕ ದುಡಿಮೆಯನ್ನು ಗಳಿಸಲು ಸಾಧ್ಯವಾಗುತ್ತಿತ್ತು. ಇದೀಗ ಈ ಅವಧಿಯಲ್ಲೇ ಭಾರೀ ಹೊಡೆತ ಬಿದ್ದಿದ್ದು, ಅಕ್ಟೋಬರ್ ತನಕ ಚೇತರಿಕೆ ಕಷ್ಟಸಾಧ್ಯ ಎಂಬ ಮಾತು ಕೇಳಿ ಬರುತ್ತಿದೆ.
ಜಾಗತೀಕರಣದ ಬಳಿಕ ಚಿನ್ನ ಬೆಳ್ಳಿಯ ಕುಸುರಿ ಕೆಲಸ ದುಸ್ತರವಾಗಿತ್ತು. ಸಿಕ್ಕ ಕೆಲಸಕ್ಕೆ ನೀಡುವ ಮಜೂರಿ ಮತ್ತು ನಷ್ಟ ಪ್ರಮಾಣ (ವೇಸ್ಟೇಜ್)ವು ತೀವ್ರ ಕಡಿಮೆಯಾಗಿತ್ತು. ಇನ್ನೊಂದೆಡೆ ಜೀವನಾವಶ್ಯಕ ವಸ್ತುಗಳ ಬೆಲೆಯೇರಿಕೆ ಉಂಟಾಗಿ ಹಲವು ಕುಶಲಕರ್ಮಿಗಳು ಆತ್ಮಹತ್ಯೆ ಹಾದಿ ಹಿಡಿದಿದ್ದರು. ವಂಶಪಾರಂಪರ್ಯವಾಗಿ ಚಿನ್ನಬೆಳ್ಳಿ ಕೆಲಸ ಮಾಡಿಕೊಂಡು ಬಂದಿರುವ ಜಿಲ್ಲೆಯ ಸುಮಾರು 10 ಸಾವಿರದಷ್ಟು ಕುಶಲಕರ್ಮಿಗಳು ಇದೀಗ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಬೃಹತ್ ಚಿನ್ನಾಭರಣ ಮಳಿಗೆಗಳ ಪೈಪೋಟಿಯನ್ನು ಎದುರಿಸಲಾಗದೆ ಸಣ್ಣ ಪುಟ್ಟ ಜ್ಯುವೆಲ್ಲರಿ ಹೊಂದಿದ್ದ ಅಕ್ಕಸಾಲಿಗರು ಗ್ರಾಹಕರ ಕೊರತೆಯಿಂದಾಗಿ ಅಂಗಡಿ ಮುಚ್ಚುತ್ತಿದ್ದುದು ಸಾಮಾನ್ಯವಾಗಿತ್ತು. ಹಲವು ವರ್ಷಗಳಿಂದ ಬದುಕಿಗೆ ಆಸರೆಯಾಗಿದ್ದ ಜ್ಯುವೆಲ್ಲರಿ ಕೆಲಸವನ್ನು ಬಿಟ್ಟು ವಾಚ್‌ಮ್ಯಾನ್, ಡೆಲಿವರಿ ಬಾಯ್, ಕ್ಯಾಟರಿಂಗ್ ಮತ್ತು ಕಾರ್ಖಾನೆಗಳಲ್ಲಿ ಕಾರ್ಮಿಕರಾಗಿ ಪರಿವರ್ತನೆಗೊಂಡಿರುವುದು ಕೂಡ ಗುಟ್ಟಾಗಿ ಉಳಿದಿರಲಿಲ್ಲ. ಇದೀಗ ಅದಕ್ಕೂ ಕೊರೋನ ವೈರಸ್ ಅಡ್ಡಿಯಾಗಿವೆ.
‘5 ವರ್ಷದ ಕೋರ್ಸ್ ಮಾಡಿ ಸತತ 25 ವರ್ಷಗಳಿಂದ ಸಾಂಪ್ರದಾಯಿಕ ಚಿನ್ನ-ಬೆಳ್ಳಿ ಕೆಲಸ ಮಾಡಿಕೊಂಡು ಬಂದಿದ್ದೆ. ಕುಲಕಸುಬನ್ನೇ ನಂಬಿ ಬದುಕಿದವ. ಆದರೆ ಇದೀಗ ಕುಲಕಸುಬಿಗೆ ಹೊಡೆತ ಬಿದ್ದಿದೆ. ಕುಟುಂಬದ ನಿರ್ವಹಣೆ, ಬ್ಯಾಂಕ್ ಸಾಲ ಇತ್ಯಾದಿ ಸಮಸ್ಯೆಗಳಿಂದ ತತ್ತರಿಸಿದ್ದೇನೆ. ಆದರೂ ಬದುಕಿಗಾಗಿ ದಿನಗೂಲಿಗೆ ಇಳಿಯಬೇಕಾದ ಸ್ಥಿತಿಯೊದಗಿ ಬಂದಿದೆ. ಈ ವಯಸ್ಸಿನಲ್ಲಿ ಬೇರೆ ಯಾವ ಉದ್ಯೋಗ ಸಿಗಲು ಸಾಧ್ಯ?’ ಎಂದು ವಾಮಂಜೂರಿನ ಸುರೇಶ್ ನೋವಿನಿಂದ ಪ್ರಶ್ನಿಸುತ್ತಾರೆ.
‘ಕಳೆದ 15 ವರ್ಷಗಳಿಂದ ಬದುಕಿಗೆ ಆಧಾರವಾಗಿದ್ದ ಸಾಂಪ್ರದಾಯಿಕ ಚಿನ್ನ ಬೆಳ್ಳಿ ಆಭರಣ ತಯಾರಿ ಕೆಲಸವನ್ನು ಬಿಟ್ಟಿದ್ದೇನೆ. ದಿನದಿಂದ ದಿನಕ್ಕೆ ಗ್ರಾಹಕರ ಸಂಖ್ಯೆ ಕಡಿಮೆಯಾದ ಕಾರಣ ಕುಟುಂಬ ಸಾಗಿಸಲೂ ಕಷ್ಟಕರವಾದ ಸ್ಥಿತಿ ಎದುರಾಯಿತು. ಕೆಲಸವಿಲ್ಲದೆ ಮನೆಯಲ್ಲೇ ಇದ್ದೆ. ಬದುಕಿನ ಅನಿವಾರ್ಯತೆಯಿಂದ ಇಷ್ಟಪಟ್ಟು ಕಲಿತ ಕೆಲಸವನ್ನು ಬಿಟ್ಟು ಇದೀಗ ಕಂಪೆನಿಯೊಂದರಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ಸೇರಿಕೊಂಡರೂ ಕೊರೋನ-ಲಾಕ್‌ಡೌನ್‌ನಿಂದ ಮತ್ತಷ್ಟು ಸಮಸ್ಯೆಯಾಗಿದೆ’ ಎಂದು ಸುರತ್ಕಲ್‌ನ ಪ್ರಸಾದ್ ಆಚಾರ್ಯ ಹೇಳುತ್ತಾರೆ.
‘ಚಿನ್ನ ಬೆಳ್ಳಿಯ ಕುಸುರಿ ಕಲೆಯ ಕಲಾವಿದರ ಕೈಗಳನ್ನು ಅತ್ಯಾಧುನಿಕ ಯಂತ್ರಗಳು ಕಟ್ಟಿಹಾಕಿವೆ. ಕಳೆದ 10 ವರ್ಷಗಳಿಂದ ಯಾರೂ ಕೂಡ ಹೊಸತಾಗಿ ಈ ಕುಸುರಿಯನ್ನು ಕಲಿಯುವ ಉತ್ಸಾಹ ತೋರಿಸಿಲ್ಲ. ನಿಗಮ ಮಂಡಳಿ ರಚನೆಯಾದರೆ ಈ ಕ್ಷೇತ್ರಕ್ಕೆ ಒಂದಷ್ಟು ಅನುಕೂಲ ವಾದೀತು’ ಎಂದು ಸಾಂಪ್ರದಾಯಿಕ ಚಿನ್ನ-ಬೆಳ್ಳಿ ಕೆಲಸಗಾರ ಅರುಣ್ ಜಿ. ಶೇಟ್ ಅಭಿಪ್ರಾಯಪಡುತ್ತಾರೆ.
‘ಚಿನ್ನದ ಕುಸುರಿ ಕೆಲಸ ಕಲಿಯುವುದು ಸುಲಭವಲ್ಲ. ಅದಕ್ಕೆ ತಾಳ್ಮೆ ಬೇಕು. ಐದಾರು ವರ್ಷ ಪಳಗಿದ ಬಳಿಕವಷ್ಟೇ ಈ ಕುಸುರಿ ಕೆಲಸದಲ್ಲಿ ನಿಷ್ಣಾತರಾಗಲು ಸಾಧ್ಯ. ಆದರೆ ಹಲವು ವರ್ಷ ಈ ಕೆಲಸ ಕಲಿತು ಬದುಕು ರೂಪಿಸಿಕೊಂಡಿದ್ದವರು ಈಗ ಕೆಲಸವಿಲ್ಲದೆ ಕೂಲಿ ಕೆಲಸಕ್ಕೂ ಹೋಗುವ ಸ್ಥಿತಿ ಇಲ್ಲವಾಗಿದೆ. ಸಾಂಪ್ರದಾಯಿಕ ಚಿನ್ನ ಬೆಳ್ಳಿ ಕುಶಲಕರ್ಮಿಗಳು ಪರಂಪರಾಗತ ಕುಸುರಿ ಕೆಲಸವನ್ನು ಮುಂದುವರಿಸಲು ಅನುಕೂಲವಾಗುವಂತೆ ಸರಕಾರ ಅಭಿವೃದ್ಧಿ ನಿಗಮ ಅಥವಾ ಮಂಡಳಿ ಸ್ಥಾಪಿಸಬೇಕು. ಇದರಿಂದ ಅಕ್ಕಸಾಲಿಗರ ಬದುಕು ಸುಧಾರಿಸಬಹುದು. ಈ ಬಗ್ಗೆ ಶಾಸಕರ ಗಮನ ಸೆಳೆಯಲಾಗಿದೆ’ ಎಂದು ದ.ಕ.ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ಅಧ್ಯಕ್ಷ ಕೆ.ಎಲ್.ಹರೀಶ್ ಹೇಳಿದ್ದಾರೆ.
‘ದ.ಕ.ಜಿಲ್ಲೆಯಲ್ಲಿ ಶೇ.70ರಷ್ಟು ಚಿನ್ನದ ಕೆಲಸಗಾರರು ಈ ಕೆಲಸದಿಂದ ವಿಮುಖರಾಗುತ್ತಿದ್ದಾರೆ. 45-50 ವರ್ಷ ದಾಟಿದವರು ಬೇರೆ ಉದ್ಯೋಗಕ್ಕೆ ಹೋಗಲಾಗದೆ ಅನಿವಾರ್ಯತೆಯಿಂದ ಇದನ್ನು ಮುಂದುವರಿಸಿದ್ದಾರೆ. ಪರಿಶ್ರಮಪಟ್ಟು ಆಭರಣ ತಯಾರಿಯ ನಾಜೂಕಿನ ಕೆಲಸ ಕಲಿತರೂ ಇದೀಗ ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಆಚಾರ್ಯ ಅಸಮಧಾನ ವ್ಯಕ್ತಪಡಿಸುತ್ತಾರೆ.
ಲಾಕ್‌ಡೌನ್ ಬಳಿಕ ಕೆಲಸವೇ ಇಲ್ಲ. ಅಲ್ಲದೆ ಇದು ಜೀವನಾವಶ್ಯಕ ವಸ್ತುವಲ್ಲದ ಕಾರಣ ಮುಂದಿನ ದಿನಗಳಲ್ಲಿ ಚೇತರಿಕೆ ಕಷ್ಟಸಾಧ್ಯ. ಆದರೆ ಒಂದು ಸರಳ ಸಿದ್ಧ ಆಭರಣ (ಕಂಠಿ) ತಯಾರಿಗೆ ಕನಿಷ್ಠ 1 ಲಕ್ಷ (ಚಿನ್ನ ಖರೀದಿ) ಬಂಡವಾಳ ಬೇಕು. ಇತ್ತ ಮನೆ, ಕೆಲಸದ ಕೊಠಡಿಯ ಬಾಡಿಗೆ, ವಿದ್ಯುತ್ ಬಿಲ್ ಇತ್ಯಾದಿ ಕಟ್ಟಲೇ ಬೇಕು. ಕುಟುಂಬದ ದೈನಂದಿನ ಖರ್ಚು ವೆಚ್ಚ ಸರಿದೂಗಿಸಬೇಕು. ಬದುಕು ಅಡಕತ್ತರಿಗೆ ಸಿಲುಕಿದೆ ಎಂದು ಸಂಘದ ಬಿ.ಎಂ. ರವೀಂದ್ರ ಹೇಳುತ್ತಾರೆ.
ಹಿಂದೆ ಅಕ್ಕಸಾಲಿಗರಿಗೆ ತುಂಬಾ ಬೇಡಿಕೆ ಇತ್ತು. ಚಿನ್ನ ಮಾಡಿಸಲು ತಿಂಗಳುಗಟ್ಟಲೆ ಕಾಯಬೇಕಿತ್ತು. ಗಲ್ಲಿಗೊಂದರಂತೆ ಸಣ್ಣ ಪುಟ್ಟ ಜ್ಯುವೆಲ್ಲರಿ ಅಂಗಡಿಗಳಿತ್ತು. ಅಕ್ಕಸಾಲಿಗರು ರಾತ್ರಿ ಹಗಲೆನ್ನದೆ ಚಿನ್ನದ ಕುಸುರಿ ಕೆಲಸದಲ್ಲಿ ತೊಡಗಿಸಿಕೊಂಡು ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಮಂಗಳ ಸೂತ್ರ, ಕಿವಿಯೋಲೆ, ಉಂಗುರ ಇತ್ಯಾದಿಗಳನ್ನು ತಯಾರಿಸಿಕೊಡುತ್ತಿದ್ದರು. ಆದರೆ ಆ ಕಾಲ ಬದಲಾಗಿದೆ. ಚಿನ್ನಾಭರಣಗಳ ಬೃಹತ್ ಶೋ ರೂಂಗಳತ್ತ ಗ್ರಾಹಕರು ಆಸಕ್ತರಾಗುತ್ತಿದ್ದು, ಅಕ್ಕಸಾಲಿಗರ ಬಳಿಗೆ ಸುಳಿದಾಡುವವರು ಇಲ್ಲವಾಗಿದೆ.
ಸರಕಾರವು ಪಾರಂಪರಿಕ ಕೌಶಲ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ಆದರೆ ತಲೆತಲಾಂತರದಿಂದ ಸಾಂಪ್ರದಾಯಿಕವಾಗಿ ಚಿನ್ನ ಬೆಳ್ಳಿ ಕುಸುರಿ ಮಾಡುವ ಕುಶಲಕರ್ಮಿಗಳ ಬದುಕು ಬೀದಿಗೆ ಬರುತ್ತಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಪ್ರತಿ ಕುಶಲಕರ್ಮಿ ಕುಟುಂಬಕ್ಕೂ 10 ಸಾವಿರ ರೂ. ಪರಿಹಾರ, ಚಿನ್ನ ಖರೀದಿಗಾಗಿ ಕನಿಷ್ಠ 1 ಲಕ್ಷ ರೂ. ಭದ್ರತೆ ಮತ್ತು ಬಡ್ಡಿ ರಹಿತ ಸಾಲ ಹಾಗೂ ಮಕ್ಕಳ ಶಿಕ್ಷಣಕ್ಕೆ ನೆರವು ಕಲ್ಪಿಸಬೇಕು. ಅಲ್ಲದೆ ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳಿಗೆ ಜೀವನಾವಶ್ಯಕ ವಸ್ತುಗಳನ್ನು ತಕ್ಷಣವೇ ತಲುಪಿಸಬೇಕು. ನಮ್ಮೆಲ್ಲಾ ಸಂಕಷ್ಟಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ಜಿಲ್ಲಾಧಿಕಾರಿಗೆ ತಿಳಿಸಿದ್ದೇವೆ ಎಂದು ಸಂಘದ ಅಧ್ಯಕ್ಷ ಕೆ.ಎಲ್. ಹರೀಶ್ ತಿಳಿಸಿದ್ದಾರೆ.
ಮರ,ಶಿಲ್ಪ,ಲೋಹದ ಕುಶಲಕರ್ಮಿಗಳ ಬದುಕೂ ಇದಕ್ಕೆ ಭಿನ್ನವಾಗಿಲ್ಲ. ಲಾಕ್‌ಡೌನ್ ಬಳಿಕ ತೀವ್ರ ಸಂಕಷ್ಟಕ್ಕೆ ಈಡಾಗಿದ್ದು, ಕೆಲಸವಿಲ್ಲದೆ ತತ್ತರಿಸಿದ್ದಾರೆ. ಹಾಗಾಗಿ ಸರಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಪ್ರಕಾಶ್ ಆಚಾರ್ಯ ಹೇಳಿದರು.