ಈ 3 ರಾಜ್ಯಗಳಲ್ಲಿ ದೇಶದ 48 ಶೇ.ದಷ್ಟು ಕೊರೋನ ಪ್ರಕರಣಗಳು

Update: 2020-04-23 15:33 GMT

ಹೊಸದಿಲ್ಲಿ, ಎ.23: ದೇಶದ ಕೊರೋನ ಸೋಂಕಿತ ಪ್ರಕರಣದಲ್ಲಿ ಶೇ.48ರಷ್ಟು ಪ್ರಕರಣ ಮಹಾರಾಷ್ಟ್ರ, ಗುಜರಾತ್ ಮತ್ತು ದಿಲ್ಲಿ ರಾಜ್ಯಗಳಲ್ಲೇ ದಾಖಲಾಗಿದೆ. ಇದರಲ್ಲಿ ಮಹಾರಾಷ್ಟ್ರ ರಾಜ್ಯದಲ್ಲೇ 5,500ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

ಗುರುವಾರ ಮಧ್ಯಾಹ್ನದವರೆಗಿನ ವರದಿಯಂತೆ, ದೇಶದ 32 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ 430 ಜಿಲ್ಲೆಗಳಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣ ದಾಖಲಾಗಿದ್ದರೆ, 6 ಪ್ರಮುಖ ನಗರಗಳಾದ ಮುಂಬೈ, ದಿಲ್ಲಿ, ಅಹ್ಮದಾಬಾದ್, ಇಂದೋರ್, ಪುಣೆ ಮತ್ತು ಜೈಪುರದಲ್ಲಿ ತಲಾ 500ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. ಈ ಪಟ್ಟಿಯಲ್ಲಿ 3000ಕ್ಕೂ ಹೆಚ್ಚು ಪ್ರಕರಣಗಳೊಂದಿಗೆ ಮುಂಬೈ ಅಗ್ರಸ್ಥಾನದಲ್ಲಿದ್ದು, ದಿಲ್ಲಿ 2000ಕ್ಕೂ ಹೆಚ್ಚು, ಅಹ್ಮದಾಬಾದ್ 1000ಕ್ಕೂ ಹೆಚ್ಚು ಪ್ರಕರಣದೊಂದಿಗೆ ಆ ಬಳಿಕದ ಸ್ಥಾನದಲ್ಲಿವೆ.

ದೇಶದ ಒಟ್ಟು ಪ್ರಕರಣದ 60% ಪ್ರಕರಣ ಮಹಾರಾಷ್ಟ್ರ, ಗುಜರಾತ್, ದಿಲ್ಲಿ, ರಾಜಸ್ತಾನ , ಮಧ್ಯಪ್ರದೇಶ, ಉತ್ತರಪ್ರದೇಶ ಮತ್ತು ತಮಿಳುನಾಡು- ಈ ಏಳು ರಾಜ್ಯಗಳಲ್ಲೇ ದಾಖಲಾಗಿದೆ.

ದೇಶದಲ್ಲಿ ಕೊರೋನ ಸೋಂಕು ಪ್ರಕರಣ ಹೆಚ್ಚುತ್ತಿರುವಂತೆಯೇ, ಸೋಂಕಿನಿಂದ ಗುಣಮುಖರಾಗುತ್ತಿರುವ ಪ್ರಕರಣಗಳೂ ಹೆಚ್ಚುತ್ತಿದೆ. ಗುಣಮುಖರಾಗುವ ಪ್ರಮಾಣ ಕಳೆದ ವಾರ 9.99% ಇದ್ದರೆ ಮಂಗಳವಾರ 17.48%ಕ್ಕೆ ತಲುಪಿದೆ. ಜನಸಾಂದ್ರತೆಯಿರುವ ಪ್ರದೇಶದಲ್ಲಿ ಸೋಂಕಿನ ಪ್ರಕರಣ ಹೆಚ್ಚಿರುವುದು ಆತಂಕಕ್ಕೆ ಕಾರಣವಾಗಿದ್ದರೂ, ಕೊರೋನ ವೈರಸ್‌ನ ಅಸಮ ಹರಡುವಿಕೆಯಿಂದ ಕೆಂಪು, ಕಿತ್ತಳೆ, ಹಸಿರು ವಲಯಗಳನ್ನು ಗುರುತಿಸಲು ಅನುಕೂಲವಾಗಿದ್ದು ಅತೀ ಹೆಚ್ಚು ಬಾಧಿತ ಪ್ರದೇಶಗಳಿಗೆ ಅಧಿಕ ಗಮನ ಹರಿಸಲು ಮತ್ತು ಹಸಿರು ವಲಯದ ಪ್ರದೇಶಗಳಲ್ಲಿ ಲಾಕ್‌ಡೌನ್ ಸಡಿಲಿಸಲು ಸಾಧ್ಯವಾಗಿದೆ ಎಂದು ಸರಕಾರ ತಿಳಿಸಿದೆ.

ಈ ವರ್ಷ ಭಾರತದ ಆರ್ಥಿಕತೆ ಕೇವಲ 1.9% ದರದಲ್ಲಿ ಅಭಿವೃದ್ಧಿಯಾಗಲಿದೆ ಮತ್ತು ಕೊರೋನ ಸೋಂಕನ್ನು ಈ ವರ್ಷ ಯಶಸ್ವಿಯಾಗಿ ನಿಗ್ರಹಿಸಲು ಸಾಧ್ಯವಾದಲ್ಲಿ ಮುಂದಿನ ವರ್ಷ ಭಾರತದ ಆರ್ಥಿಕತೆ 7.4% ದರದಲ್ಲಿ ಅಭಿವೃದ್ಧಿಯಾಗಲಿದೆ ಎಂದು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್) ಮುನ್ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News