ಶ್ರೀಮಂತರನ್ನು ಗುರುತಿಸಲು ಎಸ್ಸಿ/ಎಸ್ಟಿ ಪಟ್ಟಿ ಪರಿಷ್ಕರಣೆ ಅಗತ್ಯ: ಸುಪ್ರೀಂ ಕೋರ್ಟ್

Update: 2020-04-23 15:39 GMT

 ಹೊಸದಿಲ್ಲಿ, ಎ.23: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ(ಎಸ್ಸಿ/ಎಸ್ಟಿ)ದಲ್ಲಿ ಇರುವ ಶ್ರೀಮಂತರಿಂದಾಗಿ ಅಗತ್ಯವಿರುವವರಿಗೆ ಸೌಲಭ್ಯಗಳ ಪ್ರಯೋಜನ ದಕ್ಕುವುದಿಲ್ಲ ಎಂಬುದನ್ನು ಗಮನಿಸಿದ್ದು, ಈ ಹಿನ್ನೆಲೆಯಲ್ಲಿ ಎಸ್ಸಿ/ಎಸ್ಟಿ ಪಟ್ಟಿಯನ್ನು ಪರಿಷ್ಕರಿಸುವುದು ಸರಕಾರದ ಕರ್ತವ್ಯವಾಗಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಹಿಂದಿನ ಆಂಧ್ರಪ್ರದೇಶ ಸರಕಾರ ಅನುಸೂಚಿತ ಪ್ರದೇಶಗಳ ಶಾಲೆಯಲ್ಲಿ ಶಿಕ್ಷಕರ ಹುದ್ದೆಗೆ ಪರಿಶಿಷ್ಟ ಪಂಗಡದವರಿಗೆ 100% ಮೀಸಲಾತಿ ಒದಗಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಸಂದರ್ಭ ನ್ಯಾಯಾಧೀಶರಾದ ಅರುಣ್ ಮಿಶ್ರಾ, ಇಂದಿರಾ ಬ್ಯಾನರ್ಜಿ, ವಿನೀತ್ ಶರಣ್, ಎಂಆರ್ ಶಾ ಮತ್ತು ಅನಿರುದ್ಧ ಬೋಸ್ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಈಗ ಪರಿಶಿಷ್ಟ ಜಾತಿ/ವರ್ಗದಲ್ಲಿಯೂ ಶ್ರೀಮಂತರು, ಸಾಮಾಜಿಕ ಮತ್ತು ಆರ್ಥಿಕವಾಗಿ ಮುಂದುವರಿದ ವರ್ಗದವರಿದ್ದಾರೆ. ಹಾಗಾಗಿ ಈಗ ಯೋಜನೆಯ ಸೌಲಭ್ಯ ಪಡೆಯುವ ಅರ್ಹತೆಯ ಕುರಿತು ಅವರೊಳಗೇ ಹೆಣಗಾಟವಿದೆ. ಸರಕಾರದ ಯೋಜನೆಯ ಸೌಲಭ್ಯ ಅಗತ್ಯವಿರುವವರಿಗೆ ದಕ್ಕಬೇಕು. ಕಳೆದ 70 ವರ್ಷದಿಂದ ಈ ಪಟ್ಟಿಯಲ್ಲಿದ್ದು ಸೌಲಭ್ಯದ ಲಾಭ ಪಡೆದು ಈಗ ಶ್ರೀಮಂತರಾಗಿರುವವರನ್ನು ಗುರುತಿಸಬೇಕಾಗಿದೆ. ಈ ನಿಟ್ಟಿನಲ್ಲಿ ಎಸ್ಸಿ/ಎಸ್ಟಿ ಪಟ್ಟಿ ಪರಿಷ್ಕರಿಸುವುದು ಸರಕಾರದ ಕರ್ತವ್ಯವಾಗಿದ್ದು ಸರಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ನ್ಯಾಯಪೀಠ ತಿಳಿಸಿದೆ. ಸಂವಿಧಾನದ 341(1) ಪರಿಚ್ಛೇದದ ಪ್ರಕಾರ, ಸಂಬಂಧಿತ ರಾಜ್ಯಪಾಲರೊಂದಿಗೆ ಚರ್ಚಿಸಿದ ಬಳಿಕ ಅನುಸೂಚಿತ ವರ್ಗದಲ್ಲಿ ಯಾವುದೇ ಸೇರ್ಪಡೆ ಅಥವಾ ಬಿಟ್ಟುಬಿಡುವ ಬಗ್ಗೆ ರಾಷ್ಟ್ರಪತಿಯವರು ಸೂಚನೆ ನೀಡಬಹುದಾಗಿದೆ. 341(2) ಪರಿಚ್ಛೇದದ ಪ್ರಕಾರ ಸಂಸತ್ತು ಈ ಸೂಚನೆ ನೀಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News