×
Ad

ಬಂಟ್ವಾಳದ ಮಹಿಳೆ ಸಾವು ವಿಷಾದನೀಯ : ರಮಾನಾಥ ರೈ

Update: 2020-04-23 21:15 IST

ಬಂಟ್ವಾಳ, ಎ.23: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವರಿಗೆ ಕೊರೋನ ಸೋಂಕು ದೃಢಪಟ್ಟಿದ್ದು ಅದರಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಂಟ್ವಾಳ ಪೇಟೆಯ ಮಹಿಳೆಯೊಬ್ಬರು ಮೃತಪಟ್ಟಿರುವುದು ನೋವು ತಂದಿದೆ ಎಂದು ದಕ್ಷಿಣ ಕನ್ನಡ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ವಿಷಾಧ ವ್ಯಕ್ತಪಡಿಸಿದರು.

ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಜಿಲ್ಲೆಯಲ್ಲಿ ಮುಂದಕ್ಕೆ ಕೊರೋನ ಸೋಂಕಿನಿಂದ ಯಾವುದೇ ಸಾವು ಆಗಬಾರದು. ಅದಕ್ಕಾಗಿ ಸರಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಕೊರೋನ ವೈರಸ್ ಹರಡುವುದನ್ನು ನಿಯಂತ್ರಿಸಲು ಲಾಕ್‍ಡೌನ್ ಮಾತ್ರವಷ್ಟೇ ಪರಿಹಾರವಲ್ಲ. ವೈರಸ್ ಸಮುದಾಯಕ್ಕೆ ಹರಡದಂತೆ ಮುತುವರ್ಜಿ ವಹಿಸಬೇಕು. ಅದಕ್ಕಾಗಿ ಸಮುದಾಯ ಪರೀಕ್ಷೆಯ ಅಗತ್ಯವಿದೆ. ರೋಗ ಪತ್ತೆ ಹಚ್ಚಲು ಸರಕಾರ ಕೂಡಲೇ ರ್ಯಾಪಿಡ್ ಪರೀಕ್ಷೆಗಳನ್ನು ಆರಂಭಿಸಬೇಕು. ಜನರು ಕೂಡಾ ವೈರಸ್ ನಿಯಂತ್ರಣಕ್ಕೆ ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತೀ  ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ನೆಲೆಸಿದ್ದಾರೆ. ಲಾಕ್‍ಡೌನ್‍ನಿಂದ ಅವರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರಕಾರ ವಲಸೆ ಕಾರ್ಮಿಕರಿಗೆ 5 ಕೆ.ಜಿ. ಅಕ್ಕಿ, 5 ಕೆ.ಜಿ. ಗೋಧಿ ಒದಗಿಸುವುದಾಗಿ ಘೋಷಿಸಿದೆ. ಒಂದನೇ ಹಂತದ ಲಾಕ್‍ಡೌನ್ ಮುಗಿದು ಎರಡನೇ ಹಂತದ ಲಾಕ್‍ಡೌನ್ ಮುಗಿಯುವ ಹಂತಕ್ಕೆ ಬಂದಿದೆ. ಆದರೆ ಈವರೆಗೆ ನಮ್ಮ ಜಿಲ್ಲೆಯಲ್ಲಿರುವ ಕಾರ್ಮಿಕರಿಗೆ ಸರಕಾರದ ಅಕ್ಕಿ, ಗೋಧಿ ತಲುಪಿಲ್ಲ. ಇದಕ್ಕೆ ಸರಕಾರ ಉತ್ತರಿಸಬೇಕು ಎಂದು ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ರಮಾನಾಥ ರೈ, ವಲಸೆ ಕಾರ್ಮಿಕರ ಬಗ್ಗೆ ಗ್ರಾಮ ಪಂಚಾಯತ್‍ಗೆ ಸ್ಪಷ್ಟ ಮಾಹಿತಿ ಇರಲಿದ್ದು ಹಾಗಾಗಿ ಪ್ರತೀ ಗ್ರಾಮ ಪಂಚಾಯತ್‍ನಿಂದ ಕೂಡಲೇ ಗಂಜಿ ಕೇಂದ್ರವನ್ನು ಆರಂಭಿಸಿ ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರಿಗೆ ಸರಕಾರ ನೆರವಾಗಬೇಕು ಎಂದು ಅವರು ಸಲಹೆ ನೀಡಿದರು.  

ಕೊರೋನ ವೈರಸ್ ನಿಯಂತ್ರಿಸಲು ಸುರಕ್ಷಿತ ಅಂತರ ಕಾಪಾಡುವುದು ಮುಖ್ಯ ಅಂಶವಾಗಿದೆ. ಇದಕ್ಕೆ ಜನರು ಮನೆಯಿಂದ ಹೊರ ಬಾರದಂತೆ ಮನೆ ಮನೆಗೆ ಪಡಿತರ ಸಹಿತ ಅಗತ್ಯ ವಸ್ತುಗಳನ್ನು ತಲುಪಿಸುವ ಕೆಲಸ ರಾಜ್ಯ ಸರಕಾರದಿಂದ ಆಗಬೇಕಿತ್ತು. ಪ್ರತೀ ಗ್ರಾಮ ಪಂಚಾಯತ್ ಅನ್ನು ಒಂದು ಯುನಿಟ್ ಮಾಡಿ ಈ ಕೆಲಸವನ್ನು ನಡೆಸುವಂತೆ ವಿರೋಧ ಪಕ್ಷದ ವ್ಯಕ್ತಿಯಾಗಿ ಸಲಹೆ ನೀಡಿದ್ದೆ. ಇಂತಹ ಕೆಲಸಗಳನ್ನು ಮಾಡಲು ಇಚ್ಛಾಶಕ್ತಿ ಬೇಕು. ನೆರೆಯ ಕೇರಳದಲ್ಲಿ ಈ ಕೆಲಸ ಭಾರೀ ಅಚ್ಚುಕಟ್ಟಾಗಿ ಆಗಿದೆ ಎಂದು ರಮಾನಾಥ ರೈ ಹೇಳಿದರು. 

ಲಾಕ್‍ಡೌನ್‍ನಿಂದ ವಿದೇಶದಲ್ಲಿ ಸಂಕಷ್ಟದಲ್ಲಿರುವ ಅನಿವಾಸಿ ಭಾರತೀಯರಿಗೆ ಸರಕಾರ ನೆರವಾಗಬೇಕು. ಇತರ ಜಿಲ್ಲೆಗೆ ಹೋಲಿಸಿದೆ ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಸಂಖ್ಯೆಯ ಜನರು ವಿದೇಶದಲ್ಲಿ ದುಡಿಯುತ್ತಿದ್ದು ಅವರನ್ನು ಇಲ್ಲಿಗೆ ಸುರಕ್ಷಿತವಾಗಿ ಕರೆ ತರಲು ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿದ ರಮಾನಾಥ ರೈ, ಲಾಕ್‍ಡೌನ್‍ನ ಹಿನ್ನೆಲೆಯಲ್ಲಿ 2 ವರ್ಷಗಳ ಹಿಂದೆ ನೋಂದಣಿಯಾದ ಕೂಲಿ ಕಾರ್ಮಿಕರಿಗೆ 2 ಸಾವಿರ ರೂ. ನೀಡುವುದಾಗಿ ಕೇಂದ್ರ ಸರಕಾರ ಘೋಷಣೆ ಮಾಡಿದೆ. ಈ ನಿಬಂಧನೆಯನ್ನು ಸಡಿಲಗೊಳಿಸಿ ಎಲ್ಲಾ ಕೂಲಿ ಕಾರ್ಮಿಕರಿಗೆ ಹಣ ಪಾವತಿಸಬೇಕು ಎಂದು ಒತ್ತಾಯಿಸಿದರು.

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News