×
Ad

ಹೇಳೋದು ಶಾಸ್ತ್ರ.............

Update: 2020-04-23 21:26 IST

ಮಣಿಪಾಲ, ಎ.23: ಕೋವಿಡ್-19ರ ಈ ವಿಷಮ ಪರಿಸ್ಥಿತಿಯಲ್ಲಿ ಸರಕಾರ, ಜನರ ಆರೋಗ್ಯದ ದೃಷ್ಟಿಯಿಂದ ಹಲವು ಕಾನೂನುಗಳನ್ನು ರೂಪಿಸುತ್ತೆ. ಹಲವು ನಿಯಮ, ನಿಬಂಧನೆಗಳನ್ನು ವಿಧಿಸುತ್ತೆ. ಆದರೆ ಅನುಷ್ಠಾನಗೊಳ್ಳುವಾಗ ಮಾತ್ರ ಅದನ್ನು ಜನಸಾಮಾನ್ಯರಿಗೆ ಒಂದು ರೀತಿ (ಕಟ್ಟುನಿಟ್ಟಾಗಿ) ಹಾಗೂ ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತವರ ಹಿಂಬಾಲಕರಿಗೆ ಮತ್ತೊಂದು ರೀತಿಯಲ್ಲಿ ಜಾರಿಗೊಳಿಸ ಲಾಗುತ್ತದೆ.

ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಬಸವರಾಜ ಬೊಮ್ಮಾಯಿ ಅವರು ಮೂರು ತಿಂಗಳ ಬಳಿಕ ಉಡುಪಿ ಜಿಲ್ಲೆಗೆ ಗುರುವಾರ ಕಾಲಿರಿಸಿದರು. ಅದೂ ಕೋವಿಡ್ ಕುರಿತು ಸಭೆ ನಡೆಸಲು. ಬೆಂಗಳೂರಿನಿಂದ ತನ್ನ ಹಿಂಬಾಲಕರ ಜೊತೆ ಬಂದ ಸಚಿವರು ಸಭೆ ನಡೆಸಿದ್ದು ಮಾತ್ರ ಜಿಪಂನ ಸೆಂಟ್ರಲೈಸ್ಡ್ ಎಸಿ ಇರುವ ಜಿಪಂನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ.

ರಾಜ್ಯದಲ್ಲಿ ಕೊರೋನ ಅಟ್ಟಹಾಸ ಇದೆ, ಎಸಿ ವ್ಯವಸ್ಥೆ ಇರುವಲ್ಲಿ ಕೊರೋನಾ ವೈರಸ್ ವೇಗವಾಗಿ ಹರಡುತ್ತದೆ. ಆದ್ದರಿಂದ ಎಸಿ ಉಪಯೋಗ ಮಾಡಬೇಡಿ ಎಂದು ಸರಕಾರ ಅದಕ್ಕೆ ನಿಷೇಧ ಹೇರಿದೆ. ಇದಕ್ಕಾಗಿ ಎಸಿ ಇರುವ ಮಾಲ್, ಬಿಗ್‌ಬಝಾರ್, ಸಿನಿಮಾ ಮಂದಿರ, ಜ್ಯುವೆಲ್ಲರ್ಸ್‌ಗಳನ್ನು ಯಾವುದೇ ಮುಲಾಜೂ ಇಲ್ಲದೆ ಅನಿರ್ದಿಷ್ಟಾವಧಿಗೆ ಮುಚ್ಚಿಸಿದೆ. ಆದರೆ ಹವಾನಿಯಂತ್ರಿತ ಸಭಾಂಗಣದಲ್ಲಿ ಜಿಲ್ಲಾಧಿಕಾರಿ, ಎಸ್ಪಿ, ಶಾಸಕರು, ವೈದ್ಯಾಧಿಕಾರಿಗಳು, ಜಿಲ್ಲಾಡಳಿತದ ಅಧಿಕಾರಿ ಗಳು, ಪೊಲೀಸ್ ಅಧಿಕಾರಿಗಳ ಜೊತೆ ಸಚಿವರು ಸುಮಾರು ಮೂರು ಗಂಟೆಗಳ ಕಾಲ ಸಭೆ ನಡೆಸುತ್ತಾರೆ.

ಹವಾನಿಯಂತ್ರಿತ (ಎಸಿ) ವ್ಯವಸ್ಥೆಯಲ್ಲಿ ಕೊರೋನ ವೇಗವಾಗಿ ಹರಡುತ್ತದೆ ಎಂದು ಗೊತ್ತಿದ್ದೂ ಸಚಿವರು, ಜಿಲ್ಲಾಧಿಕಾರಿಗಳು, ವೈದ್ಯರು ಸಭೆ ನಡೆಸಿದ್ದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಈಗ ಜನಸಾಮಾನ್ಯರು ಕೇಳುವಂತಾಗಿದೆ. ಹಾಗಾದರೆ ಜನರಿಗೊಂದು ನೀತಿ... ಸಚಿವರಿಗೊಂದು ನೀತಿಯಾ ಎಂಬುದು ಜನರ ಪ್ರಶ್ನೆ........

ಇದಕ್ಕೆ ಹಿರಿಯರು ಹೇಳಿದ್ದು: ಹೇಳೋದು ಶಾಸ್ತ್ರ, ತಿನ್ನೋದು ಬದನೆಕಾಯಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News