ವಿದೇಶಗಳಿಂದ ಭಾರತಕ್ಕೆ ಬರುವ ಹಣದಲ್ಲಿ ಭಾರೀ ಕುಸಿತ: ವಿಶ್ವಬ್ಯಾಂಕ್

Update: 2020-04-23 16:36 GMT

ನ್ಯೂಯಾರ್ಕ್, ಎ. 23: ಕೊರೋನ ವೈರಸ್‌ನಿಂದಾಗಿ ಹೇರಲಾಗಿರುವ ಬೀಗಮುದ್ರೆಯಿಂದಾಗಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ವರ್ಷ ಜಾಗತಿಕ ಮಟ್ಟದಲ್ಲಿ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹಣ ರವಾನೆಯಾಗುವ ಪ್ರಮಾಣ 20 ಶೇಕಡದಷ್ಟು ಕಡಿತವಾಗಲಿದೆ ಎಂದು ವಿಶ್ವಬ್ಯಾಂಕ್‌ನ ವರದಿಯೊಂದು ಹೇಳಿದೆ.

ಅದೇ ವೇಳೆ, ಭಾರತಕ್ಕೆ ರವಾನೆಯಾಗಲಿರುವ ಹಣದ ಪ್ರಮಾಣ 23 ಶೇಕಡದಷ್ಟು ಕಡಿತವಾಗಲಿದ್ದು, ಕಳೆದ ವರ್ಷವಿದ್ದ 83 ಬಿಲಿಯ ಡಾಲರ್ (ಸುಮಾರು 6.31 ಲಕ್ಷ ಕೋಟಿ ರೂಪಾಯಿ)ನಿಂದ 64 ಬಿಲಿಯ ಡಾಲರ್ (ಸುಮಾರು 4.86 ಲಕ್ಷ ಕೋಟಿ ರೂಪಾಯಿ)ಗೆ ಇಳಿಯಲಿದೆ ವಿಶ್ವಬ್ಯಾಂಕ್ ತಿಳಿಸಿದೆ.

ಹಣ ರವಾನೆಯಲ್ಲಿನ ನಿರೀಕ್ಷಿತ ಕಡಿತವು ಇತ್ತೀಚಿನ ಇತಿಹಾಸದಲ್ಲಿಯೇ ಅಧಿಕವಾಗಿದೆ. ಮುಖ್ಯವಾಗಿ ವಲಸೆ ಕೆಲಸಗಾರರ ವೇತನ ಮತ್ತು ಉದ್ಯೋಗಗಳಲ್ಲಿ ಕಡಿತವಾಗಿರುವ ಹಿನ್ನೆಲೆಯಲ್ಲಿ ಹಣ ರವಾನೆಯಲ್ಲಿ ಕಡಿತ ಉಂಟಾಗಿದೆ. ಇನ್ನೊಂದು ದೇಶದಲ್ಲಿ ಕೆಲಸ ಮಾಡುತ್ತಿರುವ ವಲಸೆ ಕೆಲಸಗಾರರು ಉದ್ಯೋಗ ಮತ್ತು ವೇತನ ಕಡಿತಕ್ಕೆ ಬೇಗನೇ ಒಳಗಾಗುತ್ತಾರೆ.

‘‘ಭಾರತಕ್ಕೆ ವಿದೇಶದಿಂದ ರವಾನೆಯಾಗುವ ಹಣದ ಪ್ರಮಾಣವು 2020ರಲ್ಲಿ ಸುಮಾರು 23 ಶೇಕಡದಷ್ಟು ಕುಸಿದು 64 ಬಿಲಿಯ ಡಾಲರ್‌ಗೆ ಬರುತ್ತದೆ. ಇದು 2019ರ 83 ಬಿಲಿಯ ಡಾಲರ್‌ಗೆ ಹೋಲಿಸಿದರೆ ತೀರಾ ಕಡಿಮೆಯಾಗಿದೆ ಹಾಗೂ 5.5 ಶೇಕಡ ಆರ್ಥಿಕ ಬೆಳವಣಿಗೆಯ ಗುರಿಗೆ ಹೋಲಿಸಿದರೆ ತುಂಬಾ ಕಡಿಮೆಯಾಗಿದೆ’’ ಎಂದು ವರದಿ ತಿಳಿಸಿದೆ.

ವಿದೇಶದಿಂದ ರವಾನೆಯಾಗುವ ಹಣವು ಅಭಿವೃದ್ಧಿಶೀಲ ದೇಶಗಳಲ್ಲಿ ಪ್ರಮುಖ ಆದಾಯ ಮೂಲವಾಗಿದೆ ಎಂದು ವಿಶ್ವಬ್ಯಾಂಕ್‌ನ ಗ್ರೂಪ್ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News