×
Ad

50 ಲಕ್ಷ ಜೀವವಿಮೆ ಖಾಸಗಿ ವೈದ್ಯರು, ಪೊಲೀಸರಿಗೆ ವಿಸ್ತರಣೆ ಬಗ್ಗೆ ಪರಿಶೀಲನೆ: ಬೊಮ್ಮಾಯಿ

Update: 2020-04-23 22:08 IST

ಉಡುಪಿ, ಎ.23: ಸರಕಾರಿ ವೈದ್ಯರಿಗೆ ಇರುವ 50ಲಕ್ಷ ರೂ. ಮೊತ್ತದ ಜೀವ ವಿಮೆಯನ್ನು ಖಾಸಗಿ ವೈದ್ಯರು ಹಾಗೂ ಪೊಲೀಸರಿಗೂ ವಿಸ್ತರಿಸಬೇಕೆಂಬ ಬೇಡಿಕೆ ಇದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಉಡುಪಿ ಜಿಪಂ ಸಭಾಂಗಣದಲ್ಲಿ ಇಂದು ನಡೆದ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಮತ್ತು ಕೋವಿಡ್-19ರ ಬಗ್ಗೆ ಜಿಲ್ಲಾ ತಜ್ಞರ ಸಮಿತಿಯ ವೈದ್ಯರೊಂದಿಗೆ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡುತಿದ್ದರು.

ಹೊರದೇಶ, ರಾಜ್ಯ ಹಾಗೂ ಜಿಲ್ಲೆಗಳಲ್ಲಿ ಉಡುಪಿ ಜಿಲ್ಲೆಯ ಸುಮಾರು 10000 ಮಂದಿ ಇದ್ದಾರೆ. ಲಾಕ್‌ಡೌನ್ ಮುಗಿದ ಬಳಿಕ ಕೋವಿಡ್ ಪೀಡಿತ ರಾಜ್ಯ ಹಾಗೂ ಜಿಲ್ಲೆಗಳಲ್ಲಿರುವವರು ಉಡುಪಿಗೆ ಆಗಮಿಸಿದರೆ ಸಮಸ್ಯೆಯಾಗ ಬಹುದು. ಇವರನ್ನು ನಿಯಂತ್ರಣ ಮಾಡುವುದು ದೊಡ್ಡ ಸವಾಲು ಆಗಿದೆ. ಬಂತ ನಂತರ ಎಲ್ಲರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕಾಗುತ್ತದೆ ಎಂದರು.

ಐಎಂಎ ಮಾಜಿ ಅಧ್ಯಕ್ಷ ಡಾ.ಸುದರ್ಶನ್ ರಾವ್ ಮಾತನಾಡಿ, ಹೊರ ರಾಜ್ಯದಿಂದ ಉಡುಪಿಗೆ ಬಂದವರನ್ನು ಕ್ವಾರಂಟೇನ್‌ನಲ್ಲಿ ಇರಿಸುವು ದೊಂದನ್ನು ಬಿಟ್ಟು ಬೇರೆ ದಾರಿಯೇ ಇಲ್ಲ. ಅದು ಕೂಡ ಹೋಮ್ ಕ್ವಾರಂಟೇನ್ ಬದಲು ಆಸ್ಪತ್ರೆ, ಲಾಡ್ಜ್‌ಗಳಲ್ಲಿ ಅವರನ್ನು ಇರಿಸಬೇಕು. ಕ್ವಾರಂಟೇನ್‌ನಲ್ಲಿ ಇರಲು ಬಯಸುವವರು ಮಾತ್ರ ಜಿಲ್ಲೆಗೆ ಆಗಮಿಸಬೇಕು ಎಂಬ ನಿಯಮ ಮಾಡಬೇಕು ಎಂದು ತಿಳಿಸಿದರು.

ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಮಾತನಾಡಿ, ಕೆಎಂಸಿ ಆಸ್ಪತ್ರೆಗೆ ರಾಜ್ಯದ 17 ಜಿಲ್ಲೆಗಳಿಂದ ರೋಗಿಗಳು ಬರು ತ್ತಿದ್ದಾರೆ. ಮೇ 3ರ ನಂತರ ಲಾಕ್‌ಡೌನ್ ಮುಗಿದರೆ ಕೊರೋನ ಪೀಡಿತ ಸಹಿತ ಬೇರೆ ಬೇರೆ ಜಿಲ್ಲೆಗಳಿಂದ ಸಾವಿರಾರು ಮಂದಿ ರೋಗಿಗಳು ಬರುವ ಸಾಧ್ಯತೆ ಇದೆ. ಆದುದರಿಂದ ಈ ಬಗ್ಗೆ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಈಗಲೇ ಚಿಂತನೆ ಮಾಡಬೇಕಾಗಿದೆ ಎಂದು ಹೇಳಿದರು.

ಐಎಂಎ ಅಧ್ಯಕ್ಷ ಡಾ.ಉಮೇಶ್ ಪ್ರಭು ಮಾತನಾಡಿ, ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಫಿವರ್ ಕ್ಲಿನಿಕ್ ಕಡ್ಡಾಯ ಮಾಡಬೇಕು. ಅದೇ ರೀತಿ ರೋಗಿಗಳ ಮನೆ ಹೋಗಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ವೈದ್ಯರು ನರ್ಸ್‌ಗಳನ್ನು ಒಳಗೊಂಡ ಮೊಬೈಲ್ ಕ್ಲಿನಿಕ್ ಆರಂಭಿಸಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಪಂ ಸಿಇಓ ಪ್ರೀತಿ ಗೆಹ್ಲೋಟ್, ಎಸ್ಪಿ ವಿಷ್ಣುವರ್ಧನ್, ಜಿಪಂ ಅಧ್ಯಕ್ಷ ದಿನಕರ ಬಾಬು, ಡಾ.ಪಿ.ವಿ. ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News