×
Ad

ಕೊರೋನ ಸೋಂಕಿತೆಯ ಶವ ಸಂಸ್ಕಾರಕ್ಕೆ ಹರಸಾಹಸ: ಎಲ್ಲಿಯೂ ಅವಕಾಶ ನೀಡದಿದ್ದರೆ ನನ್ನ ಜಮೀನಿನಲ್ಲಿ ನಡೆಸಿ-ರಾಜೇಶ್ ನಾಯ್ಕ್

Update: 2020-04-24 22:19 IST

ಬಂಟ್ವಾಳ, ಎ.24: ಕೋವಿಡ್ - 19 (ಕೊರೋನ) ಸೋಂಕಿನಿಂದ ಮೃತಪಟ್ಟ ಬಂಟ್ವಾಳದ ಮಹಿಳೆಯ ಶವ ಸಂಸ್ಕಾರಕ್ಕೆ ಎಲ್ಲಿಯೂ ಅವಕಾಶ ಕೊಡದಿದ್ದರೆ ನನ್ನ ಸ್ವಂತ ಜಮೀನಿನಲ್ಲಿ ಮಾಡಿ ಎಂದು ಜಿಲ್ಲಾಡಳಿತಕ್ಕೆ ಹೇಳುವ ಮೂಲಕ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಮಾನವೀಯತೆ ಮೆರೆದಿದ್ದಾರೆ.

ಎಪ್ರಿಲ್ 19ರಂದು ಕೊರೋನ ಸೋಂಕಿನಿಂದ ಮೃತರಾದ ಬಂಟ್ವಾಳದ ಮಹಿಳೆಯ ಶವ ಸಂಸ್ಕಾರ ಮಂಗಳೂರಿನ ಬೋಳಾರದಲ್ಲಿ ನಡೆದಿದೆ. ಆದರೆ ಶವ ಸಂಸ್ಕಾರದ ವೇಳೆ ಸ್ಥಳಿಯರಿಂದ ಭಾರೀ ಆಕ್ಷೇಪ ವ್ಯಕ್ತವಾಗಿತ್ತು. ಅಲ್ಲದೆ ಇನ್ನು ಮುಂದೆ ಇಲ್ಲಿ ಕೊರೋನ ಸೋಂಕಿನಿಂದ ಮೃತರಾ ದವರ ಶವ ಸಂಸ್ಕಾರ ಮಾಡಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದರು ಎನ್ನಲಾಗಿದೆ. ಹಾಗಾಗಿ ಕೊರೋನ ಸೋಂಕಿನಿಂದ ಗುರುವಾರ ಮೃತರಾದ ಬಂಟ್ವಾಳ ಪೇಟೆಯ ಮಹಿಳೆಯ ಶವ ಸಂಸ್ಕಾರ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಭಾರೀ ತಲೆ ನೋವಾಗಿ ಪರಿಣಮಿಸಿತ್ತು.

ಕೊರೋನ ಸೋಂಕಿತ ಮಹಿಳೆಯ ಶವ ಸಂಸ್ಕಾರಕ್ಕೆ ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯ ಮೂರು, ನಾಲ್ಕು ಸ್ಮಶಾನದಲ್ಲಿ ನಡೆಸಲು ತೀರ್ಮಾನಿಸಲಾಗಿತ್ತಾದರೂ, ಸ್ಥಳೀಯರ ವಿರೋಧದಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಈ ನಡುವೆ ವಾಮಂಜೂರಿನ ಪಚ್ಚನಾಡಿ ಹಿಂದೂ ರುದ್ರ ಭೂಮಿಯಲ್ಲಿ ಶವ ಸಂಸ್ಕಾರಕ್ಕೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದರಿಂದ ಪಚ್ಚನಾಡಿ ರುದ್ರ ಭೂಮಿಯ ಎದುರು ಸ್ಥಳೀಯರು ಜಮಾಯಿಸಿ ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪಚ್ಚನಾಡಿಗೆ ಬಂದ ಸ್ಥಳೀಯ ಶಾಸಕ ಡಾ. ಭರತ್ ಶೆಟ್ಟಿ ಅಲ್ಲಿ ಜಮಾಯಿಸಿದ ಜನರ ಮನವೊಲಿಸಿ ಶವ ಸಂಸ್ಕಾರಕ್ಕೆ ಅವಕಾಶ ಮಾಡಿಕೊಡುವ ಬದಲು, ಸ್ಥಳೀಯರ ಅನುಮತಿ ಇಲ್ಲದಿದ್ದರೆ ಶವ ಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದಿರುವುದು ಭಾರೀ ಟೀಕೆಗೆ ಕಾರಣವಾಗಿತ್ತು.

ಬಳಿಕ ಜಿಲ್ಲಾಡಳಿತ ಮೃತ ಮಹಿಳೆಯ ಊರಾದ ಬಂಟ್ವಾಳ ಕೆಳಗಿನ ಪೇಟೆಯ ಬಡ್ಡಕಟ್ಟೆಯ ಹಿಂದೂ ರುದ್ರ ಭೂಮಿಯಲ್ಲಿ ಶವ ಸಂಸ್ಕಾರಕ್ಕೆ ಮುಂದಾಗಿತ್ತು ಎನ್ನಲಾಗಿದೆ. ಆದರೆ ಅಲ್ಲಿಯೂ ಅನುಮತಿ ಸಿಕ್ಕಿರಲಿಲ್ಲ. ತದನಂತರ ಸಜಿಪ ನಡು ಗ್ರಾಮದ ಕಂಚಿನಡ್ಕ ಪದವು ಹಿಂದೂ ರುದ್ರ ಭೂಮಿಯಲ್ಲಿ ಶವ ಸಂಸ್ಕಾರಕ್ಕೆ ಸ್ಥಳೀಯ ಗ್ರಾಮ ಪಂಚಾಯತ್‍ನಿಂದ ಅನುಮತಿ ಸಿಕ್ಕಿದರೂ ರುದ್ರ ಭೂಮಿ ಸಮಿತಿಯಿಂದ ಅನುಮತಿ ಸಿಗಲಿಲ್ಲ. ಇದರಿಂದ ಜಿಲ್ಲಾಡಳಿತಕ್ಕೆ ಶವ ಸಂಸ್ಕಾರ ಸವಾಲಾಗಿ ಪರಿಣಮಿಸಿತ್ತು.

ಸಂಜೆ 4 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಶವ ಸಂಸ್ಕಾರಕ್ಕೆ ಹರಸಾಹಸಪಟ್ಟ ಜಿಲ್ಲಾಡಳಿತದ ಅಧಿಕಾರಿಗಳು ಕೊನೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಕರೆ ಮಾಡಿ ತಮ್ಮ ಸಂಕಷ್ಟವನ್ನು ವಿವರಿಸಿದರು. ಇದರಿಂದ ಮನ ಕರಗಿದ ಶಾಸಕರು, ಶವ ಸಂಸ್ಕಾರಕ್ಕೆ ಯಾರೂ ಅವಕಾಶ ನೀಡದಿದ್ದರೆ ತನ್ನ ಒಡ್ಡೂರು ಫಾರ್ಮ್‍ನಲ್ಲಿ ನಡೆಸುವಂತೆ ಹೇಳಿದ್ದಾರೆ. ಶಾಸಕರ ಈ ಮಾನವೀಯತೆಯ ಮಾತು ಅಧಿಕಾರಿಗಳನ್ನೇ ನಿಬ್ಬೆರಗಾಗುವಂತೆ ಮಾಡಿದೆ. 

ಆದರೆ ಈ ಹೊತ್ತಿಗೆ ಬಿ.ಸಿ.ರೋಡ್ ರೈಲು ನಿಲ್ದಾಣ ಸಮೀಪದ ಕೈಕುಂಜೆ ಎಂಬಲ್ಲಿರುವ ಹಿಂದೂ ರುದ್ರ ಭೂಮಿಯಲ್ಲಿ ಶವ ಸಂಸ್ಕಾರಕ್ಕೆ ತಾಲೂಕು ಆಡಳಿತ ಸಿದ್ಧತೆ ನಡೆಸಿತ್ತು. ಕೊನೆಗೆ ಕೈಕುಂಜೆಯಲ್ಲಿ ಶವ ಸಂಸ್ಕಾರ ನಡೆಸಲಾಯಿತು. ಇಲ್ಲಿಯೂ ಸ್ಥಳೀಯರಿಂದ ಆಕ್ಷೇಪ ವ್ಯಕ್ತವಾಗಿತ್ತು. ಆದರೆ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಜನರನ್ನು ಚದುರಿಸಿ ರಾತ್ರಿ 2 ಗಂಟೆಯ ವೇಳೆಗೆ  ಶವ ಸಂಸ್ಕಾರ ನಡೆಯಿತು.

ರಾತ್ರಿ 11 ಗಂಟೆಯ ಸುಮಾರಿಗೆ ಜಿಲ್ಲೆಯ ಅಧಿಕಾರಿಗಳು ಕರೆ ಮಾಡಿ ಮಹಿಳೆಯ ಶವ ಸಂಸ್ಕಾರಕ್ಕೆ ಇರುವ ತೊಡಕಿನ ಬಗ್ಗೆ ತಿಳಿಸಿದರು. ಬಳಿಕ ನಾನು ನನ್ನ ಕುಟುಂಬದವರೊಂದಿಗೆ ಚರ್ಚಿಸಿ, ಎಲ್ಲಿಯೂ ಅವಕಾಶ ನೀಡದಿದ್ದರೆ ನನ್ನ ಜಮೀನಿನಲ್ಲಿ ನಡೆಸುವಂತೆ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದೆ. ಒಬ್ಬ ಶಾಸಕನಾಗಿ ಇದು ನನ್ನ ಜವಾಬ್ದಾರಿ. ಶವ ಸಂಸ್ಕಾರಕ್ಕೆ ಜಾಗ ಸಿಗದ ಸ್ಥಿತಿ ಯಾರಿಗೂ ಬರಬಾರದು. ಇಂದು ನನಗೆ ವಿದೇಶದಿಂದ ಬಶೀರ್ ಎಂಬವರ ಸಹಿತ ತುಂಬಾ ಮಂದಿ ಕರೆ ಮಾಡಿದ್ದಾರೆ. ಶವ ಸಂಸ್ಕಾರಕ್ಕೆ ಬೇಕಾದರೆ ನಮ್ಮ ಜಮೀನು ಕೊಡುತ್ತೇವೆ ಎಂದಿದ್ದಾರೆ. ಇದು ನಿಜವಾದ ಮಾನವೀಯತೆ. 

- ರಾಜೇಶ್ ನಾಯ್ಕ್, ಬಂಟ್ವಾಳ ಶಾಸಕ  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News