×
Ad

ಬಂಟ್ವಾಳ: ಸೇತುವೆ ಅಡಿಯಲ್ಲಿ ದಿನ ದೂಡುತ್ತಿರುವ ವಲಸೆ ಕಾರ್ಮಿಕರು

Update: 2020-04-24 22:33 IST

ಬಂಟ್ವಾಳ, ಎ.24: ಕೋವಿಡ್ - 19 (ಕೊರೋನ) ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರಕಾರ ದಿಢೀರ್ ಲಾಕ್‍ಡೌನ್ ಘೋಷಿಸಿದ್ದರಿಂದ ವಲಸೆ ಕಾರ್ಮಿಕರ ಬದುಕು ಅಲ್ಲೋಲ ಕಲ್ಲೋಲವಾಗಿದ್ದು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ವಲಸೆ ಕಾರ್ಮಿಕರ ತಂಡವೊಂದು ದಿಕ್ಕುದೆಸೆ ಇಲ್ಲದೆ ಬಂಟ್ವಾಳ ತಾಲೂಕಿನ ಸೇತುವೆಯೊಂದರ ಅಡಿಯಲ್ಲಿ ದಿನ ದೂಡುತ್ತಿದೆ. 

ಬಾದಾಮಿ ತಾಲೂಕಿನ ಹೊಸೂರು ಗ್ರಾಮದಿಂದ 2 ತಿಂಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಗೆ ವಲಸೆ ಬಂದ ಕಾರ್ಮಿಕರ ತಂಡವೊಂದು ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸೇತುವೆ ಅಡಿಯಲ್ಲಿ ದಿನ ದೂಡುತ್ತಿದೆ. ಈ ತಂಡದಲ್ಲಿ 4 ಕುಟುಂಬಗಳ 10 ಮಂದಿ ಕಾರ್ಮಿಕರಿದ್ದು ಇಬ್ಬರು ಮಹಿಳೆಯರು, ಒಬ್ಬಳು ಪುಟ್ಟ ಬಾಲಕಿಯೂ ಸೇರಿದ್ದಾರೆ.

ಪಾಣೆಮಂಗಳೂರಿನ ಹೊಸ ಸೇತುವೆ ಅಡಿಯಲ್ಲಿ ಇಲ್ಲಿನ ಗೂಡಿನಬಳಿಯಿಂದ ಬಂಟ್ವಾಳ ಕೆಳಗಿನ ಪೇಟೆಗೆ ಸಂಪರ್ಕಿಸುವ ರಸ್ತೆ ಬದಿಯಲ್ಲಿ ಟಾರ್ಪರ್‍ನಿಂದ ಮೂರು ಪ್ರತ್ಯೇಕ ಟೆಂಟ್ ಹಾಕಿರುವ ಈ ಕಾರ್ಮಿಕರು ಅಲ್ಲೇ ರಾತ್ರಿ ಹಗಲು ಕಳೆಯುತ್ತಿದ್ದಾರೆ. ಟೆಂಟ್ ಹತ್ತಿರದಲ್ಲೇ ನೇತ್ರಾವತಿ ನದಿ ಹರಿಯುತ್ತಿದ್ದು ಸ್ನಾನ ಸಹಿತ ಇತರ ಕಾರ್ಯವನ್ನು ಮಾಡುತ್ತಾ ಊರಿಗೆ ಮರಳುವ ಕನಸು ಕಾಣುತ್ತಿದ್ದಾರೆ. 

''ಎರಡು ತಿಂಗಳ ಹಿಂದೆ ಬಾದಾಮಿಯಿಂದ ನಾವು ಕೆಲಸ ಹುಡುಕೊಂಡು ಇಲ್ಲಿಗೆ ಬಂದೆವು. 15 ದಿನಗಳ ಕಾಲ ಬಂಟ್ವಾಳದ ಕಕ್ಯೆಪದವು ಎಂಬಲ್ಲಿ ಕೂಲಿ ಕೆಲಸ ಮಾಡಿದೆವು. ಆಗಾಗಲೇ ಲಾಕ್‍ಡೌನ್ ಘೋಷಣೆ ಆಗಿದ್ದರಿಂದ ಕೆಲಸ ಕಳೆದುಕೊಂಡೆವು. ಲಾಕ್‍ಡೌನ್‍ನಿಂದ ಊರಿಗೆ ತೆರಳಲು ಅಸಾಧ್ಯವಾಗಿದ್ದರಿಂದ ಬೇರೆ ದಿಕ್ಕು ಕಾಣದೆ ಇಲ್ಲಿ ಟೆಂಟ್ ಹಾಕಿ ದಿನ ದೂಡುತ್ತಿದ್ದೇವೆ. ಹೇಗಾದರೂ ಮಾಡಿ ನಮ್ಮನ್ನು ಇಲ್ಲಿಂದ ಯಾರಾದರೂ ಊರಿಗೆ ತಲುಪಿಸಲು ಸಹಕಾರ ಮಾಡಿ'' ಎಂದು ತಂಡದಲ್ಲಿರುವ ಮಲ್ಲಪ್ಪ ಎಂಬವರು ಬೇಡಿಕೊಳ್ಳುತ್ತಾರೆ. 

''ನಮಗೆ ಇಲ್ಲಿ ಮೂರು ಹೊತ್ತಿನ ಊಟಕ್ಕೆ ಯಾವುದೇ ಸಮಸ್ಯೆ ಆಗಿಲ್ಲ. ಬೆಳಗ್ಗಿನ ಉಪಹಾರ ಮತ್ತು ಮಧ್ಯಾಹ್ನದ ಊಟವನ್ನು ಪುರಸಭೆಯಿಂದ, ರಾತ್ರಿಯ ಊಟವನ್ನು ಸ್ಥಳೀಯ ಸಲೀಂ ಎಂಬವರು ತಂದು ಕೊಡುತ್ತಿದ್ದಾರೆ. ಆದರೆ ನಮ್ಮ ಮಕ್ಕಳು, ಕುಟುಂಬ ಬಾದಾಮಿಯಲ್ಲಿದ್ದಾರೆ. ಅವರು ಕೂಡಾ ಅಲ್ಲಿ ಸಂಕಷ್ಟದಲ್ಲಿ ಇದ್ದಾರೆ. ನಾವು ಊರಿಗೆ ತಲುಪುದು ಅನಿವಾರ್ಯವಾಗಿದೆ. ಯಾರಾದರೂ ನಮಗೆ ಸಹಾಯ ಮಾಡಬೇಕು'' ಎಂದು ದೇವಮ್ಮ ಎಂಬವರು ಮನವಿ ಮಾಡಿದ್ದಾರೆ.

ಇಲ್ಲಿಗೆ ತಲುಪಿ 15 ದಿನಗಳ ಕಾಲ ಮಾತ್ರ ಕೆಲಸ ಮಾಡಿದ್ದೇವೆ. ಕೈಯಲ್ಲಿದ್ದ ಹಣವೂ ಖಾಲಿಯಾಗಿದೆ. ಲಾಕ್‍ಡೌನ್‍ನಿಂದ ನಮಗೆ ದಿಕ್ಕು ಕಾಣದಾಗಿದೆ. ಕೆಲವು ದಿನಗಳ ಹಿಂದೆ ಸಾಧಾರಣ ಮಳೆ ಬಂದು ಟೆಂಟ್‍ನಲ್ಲಿ ಮಲಗಳು ಸಮಸ್ಯೆಯಾಗಿದೆ. ಇನ್ನು ಜೋರು ಮಳೆ ಬಂದರೆ ಈ ಟೆಂಟ್‍ನಲ್ಲಿ ಇರುವುದು ಕಷ್ಟ. ಯಾರಾದರೂ ಅಧಿಕಾರಿಗಳು ನಮ್ಮ ಸಹಾಯಕ್ಕೆ ಬರಬೇಕು ಎಂದು ಕಾರ್ಮಿಕರ ತಂಡ ಕೈ ಮುಗಿದು ಬೇಡಿಕೊಳ್ಳುತ್ತಿದೆ.

ನಮ್ಮ ಜಮೀನಿನಲ್ಲಿ ಜ್ವಾಳ, ಶೇಂಗ, ತೊಗರಿ, ಹೆಸರು ಬೆಳೆಯುತ್ತೇವೆ. ಮಳೆಗಾಲ ಆರಂಭವಾಗುವ ಮೊದಲು ಹೊಲ ಉಳುಮೆ ಮಾಡಬೇಕು. ನಮ್ಮ ಮಕ್ಕಳು, ಕುಟುಂಬ ಊರಿನಲ್ಲಿ ಇದ್ದಾರೆ. ದಿನನಿತ್ಯ ಕರೆ ಮಾಡಿ ಬರುವಂತೆ ಹೇಳುತ್ತಾರೆ. ಹೋಗುವುದಾದರೂ ಹೇಗೆ ? ಮೇ 3ರ ಬಳಿಕವೂ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ತೆರಳಲು ಅವಕಾಶ ನೀಡುವುದು ಕಷ್ಟ ಎಂದು ಕೆಲವು ಹೇಳುತ್ತಾರೆ. ಹೀಗಾಗಿ ನಾವೆಲ್ಲಾ ತುಂಬಾ ಬೇಜಾರಿನಲ್ಲಿ ಇದ್ದೇವೆ. 

- ಮಲ್ಲಪ್ಪ, ವಲಸೆ ಕಾರ್ಮಿಕ  

ಲಾಕ್‍ಡೌನ್‍ನಿಂದ ಹಲವು ವಲಸೆ ಕಾರ್ಮಿಕರು ಪಾಣೆಮಂಗಳೂರು ಸೇತುವೆ ಅಡಿ, ರೈಲು ನಿಲ್ದಾಣ ಹೀಗೆ ಅಲ್ಲಲ್ಲಿ ನೆಲೆಸಿದ್ದಾರೆ. ಅವರಿಗೆ ಬೆಳಗ್ಗಿನ ಉಪಹಾರ ಮತ್ತು ಮಧ್ಯಾಹ್ನದ ಊಟವನ್ನು ಬಂಟ್ವಾಳ ಪುರಸಭೆಯಿಂದ ನೀಡಲಾಗುತ್ತಿದೆ. ಸಂಜೆಯ ಚಾ, ತಿಂಡಿ, ರಾತ್ರಿಯ ಊಟ ವನ್ನು ನಾವು ಒದಗಿಸುತ್ತಿದ್ದೇವೆ. ಅಲ್ಲದೆ ಕೆಲವು ದಿನಸಿ ಸಾಮಗ್ರಿ, ಮೂರು ದಿನಕ್ಕೊಮ್ಮೆ ತರಕಾರಿ, ಅಗತ್ಯವಿರುವ ಔಷಧಿಗಳನ್ನು ಕೊಡುತ್ತಿದ್ದೇವೆ. ವಲಸೆ ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸಬೇಕಾಗಿದೆ. ಸರಕಾರ ಈ ಬಗ್ಗೆ ಏನಾದರೂ ವ್ಯವಸ್ಥೆ ಮಾಡಬೇಕು. 
- ಸಲೀಂ ಆಲಂಪಾಡಿ, 
ಸಾಮಾಜಿಕ ಕಾರ್ಯಕರ್ತ

Full View

Writer - - ಇಮ್ತಿಯಾಝ್ ಶಾ ತುಂಬೆ

contributor

Editor - - ಇಮ್ತಿಯಾಝ್ ಶಾ ತುಂಬೆ

contributor

Similar News