×
Ad

ಬಂಟ್ವಾಳದಲ್ಲಿ ಪೌರಕಾರ್ಮಿಕರ ಪರೀಕ್ಷೆ ಅವೈಜ್ಞಾನಿಕ : ಆರೋಪ

Update: 2020-04-24 23:03 IST

ಬಂಟ್ವಾಳ, ಎ. 24: ಕೊರೋನ ಸೋಂಕು ಹರಡುತ್ತಿರುವುದನ್ನು ತಡೆಗಟ್ಟಲು ಲಾಕ್‍ಡೌನ್, ಸುರಕ್ಷಿತ ಅಂತರ ಸಹಿತ ಹಲವಾರು ಕ್ರಮಗಳನ್ನು ಸರಕಾರ ಕೈಗೊಂಡಿದ್ದರೆ ಬಂಟ್ವಾಳ ಪುರಸಭೆಯ ಪರಿಸರ ಅಧಿಕಾರಿಯೊಬ್ಬರು ಅವೈಜ್ಞಾನಿಕವಾಗಿ ಇಲ್ಲಿನ ಪೌರಕಾರ್ಮಿಕರ ಅರೋಗ್ಯ ತಪಾಸನೆ ನಡೆಸಿ ವಿವಾದಕ್ಕೀಡಾಗಿದ್ದಾರೆ.

ಪುರಸಭೆಯ ಪರಿಸರ ಅಧಿಕಾರಿ ಜಾಸ್ಮಿನ್ ಸುಲ್ತಾನ್ ಅವರು ಪುರಸಭೆಯ ಪೌರಕಾರ್ಮಿಕರನ್ನು ಅವೈಜ್ಞಾನಿಕ ರೀತಿಯಲ್ಲಿ ಉಷ್ಣಾಂಶ ಪರೀಕ್ಷಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಸ್ಥಳೀಯರು ಆತಂಕಕ್ಕೆ ಕಾರಣರಾಗಿದ್ದಾರೆ . ಹಳೆ ಮಾದರಿಯ ಕಿಟ್ ಒಂದನ್ನು ಬಳಸಿ ಪೌರಕಾರ್ಮಿಕರ ಉಷ್ಣಾಂಶ ಪರೀಕ್ಷೆ ನಡೆಸಿರುವ ಅಧಿಕಾರಿ ಒಬ್ಬರ ಬಾಯಿಗೆ ಹಾಕಿದ ಅದೇ ಕಿಟ್ ಅನ್ನು ಶುಚಿಗೊಳಿಸದೆ ಇನ್ನೊಬ್ಬ ಕಾರ್ಮಿಕನ ಬಾಯಿಗೆ, ಹೀಗೆ ಎಲ್ಲಾ ಕಾರ್ಮಿಕರ ಬಾಯಿಗೆ ಅದೇ ಕಿಟ್ ಹಾಕಿ ಪರೀಕ್ಷೆ ನಡೆಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜನರ ಆರೋಗ್ಯ ರಕ್ಷಣೆಗಾಗಿ ನಿರಂತರ ಬೀದಿಯಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರನ್ನು ಈ ರೀತಿ ಪರೀಕ್ಷೆಗೆ ಒಳಪಡಿಸಿರುವುದು ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಪುರಸಭೆಯ ಮುಖ್ಯಾಧಿಕಾರಿಯ ಗಮನಕ್ಕೂ ತಾರದೆ ಪೌರ ಕಾರ್ಮಿಕರ ಆರೋಗ್ಯವನ್ನು ಅವೈಜ್ಞಾನಿಕವಾಗಿ ಪರೀಕ್ಷಿಸಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಪುರಸಭೆಯ ಮುಖ್ಯಾಧಿಕಾರಿ ಕಾರಣ ಕೇಳಿ ಪರಿಸರ ಅಧಿಕಾರಿಗೆ ನೋಟಿಸ್ ಜಾರಿ ಉತ್ತರಿಸುವಂತೆ ಸೂಚಿಸಿದ್ದಾರೆ.

ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನ ಹಾಟ್‍ಸ್ಪಾಟ್ ಆಗಿ ಗುರುತಿಸಿಕೊಂಡಿರುವ ಬಂಟ್ವಾಳದಲ್ಲಿ ಬೇಜವಾಬ್ದಾರಿಯಾಗಿ ವರ್ತಿಸಿರುವ ಈ ಪರಿಸರ ಅಧಿಕಾರಿಯ ವಿರುದ್ಧ ತಕ್ಷಣವೇ ಕ್ರಮ ಜರಗಿಸಬೇಕು ಎಂದು ಪುರಸಭೆಯ ನಿವಾಸಿಗಳು ಆಗ್ರಹಿಸಿದ್ದಾರೆ.  

''ಇಂತಹ ಅವೈಜ್ಞಾನಿಕ ಕ್ರಮದಿಂದ ಉಷ್ಣಾಂಶ ಪರೀಕ್ಷೆ ಮಾಡಲು ಅವಕಾಶವೇ ಇಲ್ಲ. ವೈಜ್ಞಾನಿಕ ಉಪಕರಣದ ಮೂಲಕ ಮಾತ್ರ ಪರೀಕ್ಷೆ ನಡೆಸಬಹುದು. ಪುರಸಭೆಯ ಪರಿಸರ ಅಧಿಕಾರಿ ಅವೈಜ್ಞಾನಿಕವಾಗಿ ಪೌರಕಾರ್ಮಿಕರ ಆರೋಗ್ಯ ತಪಾಸನೆ ನಡೆಸಿರುವ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು'' ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ರಾಮಚಂದ್ರ ಬಾಯರಿ ಬಂಟ್ವಾಳ ಪತ್ರಕರ್ತರಿಗೆ ತಿಳಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News