ಮತ್ತೆ ಸುಳ್ಳು ಸುದ್ದಿ ಹರಡಿ ಸಿಕ್ಕಿ ಬಿದ್ದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ

Update: 2020-04-25 05:31 GMT
ಸಂಬಿತ್ ಪಾತ್ರಾ

ಹೊಸದಿಲ್ಲಿ, ಎ.25: ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಕೋಮು ಲೇಪನ ನೀಡುವ ನಿಟ್ಟಿನಲ್ಲಿ ಸುಳ್ಳು ಸುದ್ದಿ ಹರಡುತ್ತಿದ್ದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಹರ್ಯಾಣ ಪೊಲೀಸರ ಕೈಗೆ  ಸಿಕ್ಕಿಹಾಕಿಕೊಂಡಿದ್ದು, ಅವರಿಗೆ ಹಾಗೂ ಪಕ್ಷಕ್ಕೆ ಈ ಘಟನೆಯಿಂದ ತೀವ್ರ ಮುಜುಗರವಾಗಿದೆ.

ಜಾನ್ ಮೊಹಮ್ಮದ್ ಎಂಬುವವರು ಫರೀದಾಬಾದ್‌ನಲ್ಲಿ ಕೊರೋನ ಮಾಹಿತಿ ಸಂಗ್ರಹಿಸುತ್ತಿದ್ದ ಇಬ್ಬರು ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಂಬಿತ್ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿಯನ್ನು ಉಲ್ಲೇಖಿಸಿ ಆಪಾದಿಸಿದ್ದರು. “ಜಾನ್ ಮೊಹಮ್ಮದ್ ಹಾಗೂ ಅವರ ಸಹಚರರು ಆಶಾ ಕಾರ್ಯಕರ್ತರ ಮೇಲೆ ನಿರ್ದಯವಾಗಿ ಹಲ್ಲೆ ಮಾಡಿದ್ದಾರೆ. ಹಾಗೂ ಸರಕಾರ ಎನ್.ಆರ್.ಸಿ.ಗಾಗಿ ಮಾಹಿತಿ ಸಂಗ್ರಹಿಸುತ್ತಿದೆ ಎಂದು ಅಪಪ್ರಚಾರ ಮಾಡಿದ್ದಾರೆ. ಪೊಲೀಸರು ಜಾನ್ ಮೊಹಮ್ಮದ್ ಮತ್ತು ಅವರ ಸಹಚರರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ" ಎಂದು ಹೇಳಿದ್ದರು.

ವರದಿಯ ಸತ್ಯಾಂಶವನ್ನೂ ನೋಡದೇ ಸಾಮಾಜಿಕ ಜಾಲತಾಣಗಳಲ್ಲಿ ಅವರು ಮಾಡಿದ ಪೋಸ್ಟನ್ನು ಬಿಜೆಪಿ ಐಟಿ ಸೆಲ್ ಸದಸ್ಯರು ವ್ಯಾಪಕವಾಗಿ ಶೇರ್ ಮಾಡಿದ್ದರು. ಇದನ್ನು ಗಮನಿಸಿದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ, “ಸರ್ ನಮಸ್ಕಾರ, ನೀವು ಹೇಳಿದಂತೆ ಆಶಾ ಕಾರ್ಯಕರ್ತರ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಪ್ರಕರಣ ಫರೀದಾಬಾದ್‌ನದ್ದಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.

ಸಂಬಿತ್ ಈ ಘಟನೆಯಲ್ಲಿ ಹಲ್ಲೆ ಮಾಡಿದ ಆರೋಪಿ ಹೆಸರನ್ನು ಎರಡೆರಡು ಬಾರಿ ಹೇಳಿದ್ದರೂ ಹಲ್ಲೆಗೊಳಗಾದ ಆಶಾ ಕಾರ್ಯಕರ್ತೆಯ ಹೆಸರನ್ನು ಹೇಳಿರಲಿಲ್ಲ. ಏಕೆಂದರೆ ಆಕೆಯ ಹೆಸರು ಸಾಜಿದ! ಆಕೆ ಹಾಗೂ ಆಕೆಯ ಪತಿಯ ಮೇಲೆ ಹಲ್ಲೆ ನಡೆದಿತ್ತು.

 ಸಂಬಿತ್ ಹೀಗೆ ಸುಳ್ಳು ಸುದ್ದಿ ಅಥವಾ ತಿರುಚಿದ ಸುದ್ದಿ  ಹಬ್ಬಿಸುತ್ತಿರುವುದು ಇದೇ ಮೊದಲಲ್ಲ. ಯುವ ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಬಿ.ವಿ. , ಸಂಬಿತ್ ಅವರನ್ನು ಇತ್ತೀಚೆಗೆ ‘ಸುಳ್ಳು ಸುದ್ದಿಗಳ ರಾಯಭಾರಿ’ ಎಂದು ಟೀಕಿಸಿ ನೋಟಿಸ್ ನೀಡಿದ್ದಾರೆ. ಶ್ರೀನಿವಾಸ್ ಅವರು ವಿಶೇಷ ಲಾಕ್‌ಡೌನ್ ಪಾಸ್ ಬಳಸಿಕೊಂಡು ಅಕ್ರಮ ಮದ್ಯವನ್ನು ಕರ್ನಾಟಕದಲ್ಲಿ ಸಾಗಿಸುತ್ತಿದ್ದಾರೆ ಎಂದು ಸಂಬಿತ್ ಆಪಾದಿಸಿದ್ದರು. ಮುರ್ಶಿದಾಬಾದ್‌ನ ತ್ರಿವಳಿ ಕೊಲೆ ಪ್ರಕರಣದಲ್ಲಿ ಸುಳ್ಳು ಸುದ್ದಿ ಹರಡಿದ ಆರೋಪ ಇವರ ಮೇಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News