×
Ad

ಮಹೇಂದ್ರ ಕುಮಾರ್ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ಸಂತಾಪ

Update: 2020-04-25 11:14 IST

ಮಂಗಳೂರು, ಎ.25: ಜನಪರ‌ ಹೋರಾಟಗಾರ ಮಹೇಂದ್ರ ಕುಮಾರ್ ಅವರ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ತೀವ್ರ ಸಂತಾಪ ಸೂಚಿಸಿದ್ದಾರೆ.

ಬಜರಂಗದಳದ ನಾಯಕನಾಗಿ ಬೆಳೆದುಬಂದಿದ್ದ ಮಹೇಂದ್ರ ಕುಮಾರ್ 2008ರಲ್ಲಿ ಬಿಜೆಪಿ ಸರಕಾರದ ಆಡಳಿತಾವಧಿಯಲ್ಲಿ ರಾಜ್ಯಾದ್ಯಂತ ನಡೆದ ಸರಣಿ ಚರ್ಚ್ ದಾಳಿಯ ವೇಳೆ ಬಜರಂಗ ದಳದ ಸಂಚಾಲಕರಾಗಿದ್ದರು. ಆದರೆ ಭಾರೀ ಟೀಕೆಗೆ ಗುರಿಯಾದ ಮತ್ತು ಸಮಾಜ ಒಡೆಯುವ ಆ ಕೃತ್ಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಬಜರಂಗ ದಳದಿಂದ ಹೊರಬಂದಿದ್ದರು. ನಂತರದ‌ ದಿನಗಳಲ್ಲಿ ಅವರು ಸಾಮಾಜಿಕ ಚಟುವಟಿಕೆಗಳಲ್ಲಿ ಮತ್ತು ಜನಪರ‌ ಹೋರಾಟಗಳಲ್ಲಿ ತಮ್ಮನ್ನು ಅವಿರತವಾಗಿ ತೊಡಗಿಸಿಕೊಂಡಿದ್ದರು. 'ನಮ್ಮ ಧ್ವನಿ' ಬಳಗದೊಂದಿಗೆ ಗುರುತಿಸಿಕೊಂಡಿದ್ದ ಅವರು, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ‌ ಮಾಡುತ್ತಿದ್ದರು ಮತ್ತು ಆರೆಸ್ಸೆಸ್-ಬಜರಂಗ ದಳದ ಮನುಷ್ಯ ವಿರೋಧಿ, ಸಮಾಜ ವಿರೋಧಿ ಕೃತ್ಯಗಳನ್ನು ಬಹಿರಂಗವಾಗಿ ಟೀಕಿಸುತ್ತಿದ್ದರು.  ಇತ್ತೀಚಿಗೆ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಹಲವು ಪ್ರತಿಭಟನಾ ಸಭೆಗಳಲ್ಲಿ ಭಾಗವಹಿಸಿ ಜನ ವಿರೋಧಿ ಕಾಯ್ದೆ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಸಂಘ ಪರಿವಾರವು ಕೆಳವರ್ಗದ ಅಮಾಯಕ ಹಿಂದು ಯುವಕರನ್ನು ಹಾದಿ ತಪ್ಪಿಸುತ್ತಿದೆ ಮತ್ತು ಅವರನ್ನು ಸರಿದಾರಿಗೆ ತರುವ ಕೆಲಸವಾಗಬೇಕು ಎಂಬ ವಿಚಾರವನ್ನು ಅವರು ತಾವು ಹಂಚಿಕೊಂಡ ವೇದಿಕೆಗಳಲ್ಲಿ ಒತ್ತಿ ಹೇಳುತ್ತಿದ್ದರು.

ಉತ್ತಮ ಸಮಾಜ ಕಟ್ಟುವುದಕ್ಕಾಗಿ ಟೊಂಕ ಕಟ್ಟಿದ್ದ ಮಹೇಂದ್ರ ಕುಮಾರ್ ಅವರ ಹಠಾತ್ ಅಗಲುವಿಕೆಯು ಸಮಾಜಕ್ಕೆ ತುಂಬಲಾರದ ನಷ್ಟ. ಅವರು ಪ್ರತಿನಿಧಿಸುತ್ತಿದ್ದ ಸಮಾಜಮುಖಿ ಆಶಯಗಳನ್ನು ಮುಂದಕ್ಕೆ ಸಾಗಿಸಬೇಕಾದ ಹೊಣೆ ಈ ನಾಡಿನ ಜನರ ಮೇಲಿದೆ. ಮೃತರ ಕುಟುಂಬ ವರ್ಗಕ್ಕೆ, ಒಡನಾಡಿಗಳಿಗೆ ಅವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಸೃಷ್ಟಿಕರ್ತನು ಕರುಣಿಸಲಿ ಎಂದು ಯಾಸಿರ್ ಹಸನ್ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News