ದ.ಕ. ಜಿಲ್ಲೆಯಲ್ಲಿ ಮತ್ತೊಂದು ಕೊರೋನ ಪಾಸಿಟಿವ್
ಮಂಗಳೂರು, ಎ.25: ದ.ಕ. ಜಿಲ್ಲೆಯಲ್ಲಿ ಮತ್ತೊಂದು ಕೊರೋನ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ಬಂಟ್ವಾಳ ತಾಲೂಕಿನ ಬಂಟ್ವಾಳ ಪೇಟೆಯ 33 ವರ್ಷದ ಮಹಿಳೆಯೊಬ್ಬರಲ್ಲಿ ಸೋಂಕು ದೃಢಪಟ್ಟಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಮಧ್ಯಾಹ್ನ ಬಿಡುಗಡೆಗೊಳಿಸಿದ ಬುಲೆಟ್‌ನಲ್ಲಿ ತಿಳಿಸಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 18ಕ್ಕೇರಿದೆ.
ಸೋಂಕಿತ ಮಹಿಳೆಯನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈಕೆ ಕೊರೋನ ಸೋಂಕಿತರಾಗಿ ಗಂಭೀರಾವಸ್ಥೆಯಲ್ಲಿ ಮಂಗಳೂರಿನ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಂಟ್ವಾಳ ಪೇಟೆಯ 67 ವರ್ಷ ಪ್ರಾಯದ ಮಹಿಳೆಯ ಪುತ್ರಿಯಾಗಿದ್ದಾರೆ. ತಾಯಿಯ ಸಂಪರ್ಕದಿಂದ ಸೋಂಕು ತಗಲಿರುವುದಾಗಿ ತಿಳಿಸಲಾಗಿದೆ.
ಈ ಮೂಲಕ ಬಂಟ್ವಾಳ ಪೇಟೆಯಲ್ಲಿ ನಾಲ್ವರಿಗೆ ಕೊರೋನ ಸೋಂಕು ದೃಢಪಟ್ಟಿದ್ದು ನಾಲ್ವರೂ ಮಹಿಳೆಯರಾಗಿದ್ದಾರೆ. ಈ ಪೈಕಿ ಇಬ್ಬರು ಮೃತಪಟ್ಟಿದ್ದಾರೆ.
ಕೊರೋನ ಸೋಂಕಿನಿಂದ ಎಪ್ರಿಲ್ 19 ಮತ್ತು 23ರಂದು ಮೃತಪಟ್ಟ ಬಂಟ್ವಾಳ ಪೇಟೆಯ ಸೊಸೆ ಮತ್ತು ಅತ್ತೆಯ ನೆರೆಮನೆಯ 67 ವರ್ಷ ಪ್ರಾಯದ ಮಹಿಳೆಗೆ ಎಪ್ರಿಲ್ 21ರಂದು ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇಂದು ಅವರ 33 ವರ್ಷದ ಮಗಳಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಕ್ವಾರಂಟೈನ್ ನಲ್ಲಿದ್ದ ಅವರನ್ನು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಒಟ್ಟು 18 ಮಂದಿಗೆ ಸೋಂಕು ಪಾಸಿಟಿವ್ ಆಗಿದ್ದು, ಈ ಪೈಕಿ 12 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2 ಮಂದಿ ಮೃತಪಟ್ಟಿದ್ದು, 4 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲೆಯ ಕೊರೋನ ಹಾಟ್ ಸ್ಪಾಟ್ ಎಂದು ಗುರುತಿಸಿರುವ ಬಂಟ್ವಾಳ ತಾಲೂಕಿನಲ್ಲಿ ಈ ವರೆಗೆ ಹತ್ತು ತಿಂಗಳ ಹಸುಳೆ ಸಹಿತ 6 ಮಂದಿಗೆ ಸೋಂಕು ಪಾಸಿಟಿವ್ ಆಗಿದ್ದು ಈ ಪೈಕಿ ಹಸುಳೆ ಸಹಿತ ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇಬ್ಬರು ಮೃತಪಟ್ಟಿದ್ದಾರೆ. ಇನ್ನಿಬ್ಬರು ಮಂಗಳೂರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.