×
Ad

ಪುತ್ತೂರು: 200ಕ್ಕೂ ಅಧಿಕ ವಲಸೆ ಕಾರ್ಮಿಕರು ಮರಳಿ ಊರಿಗೆ

Update: 2020-04-25 13:37 IST

ಪುತ್ತೂರು, ಎ.25: ಲಾಕ್‌ಡೌನ್ ಹಿನ್ನೆಲೆಯಲ್ಲಿ ಪುತ್ತೂರಿನ ತಾತ್ಕಾಲಿಕ ಆಶ್ರಯ ಕೇಂದ್ರದಲ್ಲಿ ಉಳಿಸಿಕೊಂಡಿದ್ದ 200ಕ್ಕೂ ಅಧಿಕ ವಲಸೆ ಕಾರ್ಮಿಕರನ್ನು ಸರ್ಕಾರದ ಆದೇಶದಂತೆ ಶುಕ್ರವಾರ ರಾತ್ರಿ ಸರಕಾರಿ ಬಸ್‌ಗಳಲ್ಲಿ ಅವರ ಊರಿಗೆ ಕಳುಹಿಸಿ ಕೊಡುವ ವ್ಯವಸ್ಥೆಯನ್ನು ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು ಮಾಡಿದ್ದಾರೆ.
  
 ಪುತ್ತೂರು ತಾಲೂಕಿನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಗದಗ ಜಿಲ್ಲೆಯ 78, ಬಾಗಲಕೋಟೆ ಜಿಲ್ಲೆಯ 33, ಕೊಪ್ಪಳ ಜಿಲ್ಲೆಯ 26, ಬಿಜಾಪುರ ಜಿಲ್ಲೆಯ 14, ದಾವಣಗೆರೆ ಜಿಲ್ಲೆಯ 12, ಶಿವಮೊಗ್ಗ ಜಿಲ್ಲೆಯ 10, ಧಾರವಾಡ ಜಿಲ್ಲೆಯ 9 ಹಾಗೂ ಹಾವೇರಿ ಜಿಲ್ಲೆ 8 ಕಾರ್ಮಿಕರನ್ನು ಮೊದಲ ಹಂತದಲ್ಲಿ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಸುಮಾರು 18 ಜಿಲ್ಲೆಯ ಕಾರ್ಮಿಕರ ಪಟ್ಟಿಯನ್ನು ಈಗಾಗಲೇ ತಯಾರಿಸಲಾಗಿದೆ. ಬಾಕಿಯಿರುವ ಕಾರ್ಮಿಕರನ್ನು ಪಟ್ಟಿಗೆ ಸೇರ್ಪಡೆ ಮಾಡಲಾಗುವುದು ಎಂದು ತಹಶೀಲ್ದಾರ್ ರಮೇಶ್ ಬಾಬು ತಿಳಿಸಿದ್ದಾರೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಾಲ್ನಡಿಯಲ್ಲಿ ತಮ್ಮ ಊರಿಗೆ ಹೊರಟಿದ್ದ ಹೊರಜಿಲ್ಲೆಗಳ ಕಾರ್ಮಿಕರನ್ನು ತಡೆದು ತಾತ್ಕಾಲಿಕವಾಗಿ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಉಳಿಸಿಕೊಳ್ಳಲಾಗಿತ್ತು. ಪುತ್ತೂರು ಕಡಬ ಭಾಗದಲ್ಲಿ ಈ ರೀತಿ ನೂರಾರು ಕಾರ್ಮಿಕರು ಆಶ್ರಯ ಪಡೆದಿದ್ದರು. ಇದೀಗ ಸರ್ಕಾರ ಆದೇಶದಂತೆ ಹೊರಜಿಲ್ಲಾ ಕಾರ್ಮಿಕರನ್ನು 12 ಸರ್ಕಾರಿ ಬಸ್ಸುಗಳ ಮೂಲಕ ಅವರ ಸ್ವಂತ ಊರುಗಳಿಗೆ ಕಳುಹಿಸಲಾಯಿತು. ಸಾರಿಗೆ ಬಸ್‌ನಲ್ಲಿ ಶೇ.40 ಅಂದರೆ ಒಂದು ಬಸ್‌ನಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ 16 ಕಾರ್ಮಿಕರಿಗೆ ಹೋಗಲು ಅವಕಾಶ ನೀಡಲಾಗಿತ್ತು. ಹಾಗೂ ಸರಕಾರ ಸೂಚಿಸಿ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.


 
ಪುತ್ತೂರು ತಾಲೂಕಿನಲ್ಲಿರುವ ವಲಸೆ ಕಾರ್ಮಿಕರ ಪಟ್ಟಿ ತಯಾರಿಸಿ ಹಂತ ಹಂತವಾಗಿ ಈ ಕಾರ್ಮಿಕರನ್ನು ಕಳುಹಿಸಲಾಗುವುದು. ಇದೀಗ ವಿದ್ಯಾರ್ಥಿ ನಿಲಯಗಳಲ್ಲಿ ಆಶ್ರಯ ಪಡೆದಿರುವ ಕಾರ್ಮಿಕರನ್ನು ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಉಳಿದ ಕಾರ್ಮಿಕರ ಪಟ್ಟಿಯನ್ನು ಜಿಲ್ಲಾಧಿಕಾರಿ ಅವರಿಗೆ ಕಳುಹಿಸಿ ಅವರ ಅನುಮತಿ ದೊರೆತ ಬಳಿಕ ಕಳುಹಿಸುವ ವ್ಯವಸ್ಥೆ ಕೈಗೊಳ್ಳಲಾಗುವುದು. ಕೆಎಸ್ಸಾರ್ಟಿಸಿ ಸಂಸ್ಥೆಗೆ ಸರ್ಕಾರ ಹಣ ಪಾವತಿ ಮಾಡಲಿದೆ. ಸರ್ಕಾರದ ಆದೇಶದಂತೆ ಮಾಸ್ಕ್ ಬಳಕೆ ಮಾಡಿ ಸ್ಯಾನಿಟೈಸೇಷನ್ ಮಾಡಿದ ಬಸ್ಸುಗಳಲ್ಲಿ ಕಾರ್ಮಿಕರು ತಮ್ಮ ಊರಿಗೆ ತೆರಳಿದ್ದಾರೆ
 -ರಮೇಶ್ ಬಾಬು ತಹಶೀಲ್ದಾರ್ ಪುತ್ತೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News