×
Ad

ನಿರಾಶ್ರಿತರಿಗೆ ಊಟ ವಿತರಿಸುತ್ತಿರುವ ಶರತ್ ಗೆ ಅಕ್ಕಿ ನೀಡಿ ನೆರವಾದ ಮಂಗಳೂರಿನ ಮಸೀದಿ

Update: 2020-04-25 19:27 IST

ಮಂಗಳೂರು,ಎ. 25: ಕೊರೋನ ನಿಯಂತ್ರಣಕ್ಕಾಗಿ ಲಾಕ್‌ಡೌನ್ ವಿಧಿಸಲ್ಪಟ್ಟ ದಿನದಿಂದ ಈವರೆಗೆ ಪ್ರತೀ ದಿನ ಮಧ್ಯಾಹ್ನ ಸಂಕಷ್ಟದಲ್ಲಿರುವ ನಿರಾಶ್ರಿತರಿಗೆ ಅನ್ನದಾನ ಮಾಡುತ್ತಿರುವ ಪಾಂಡೇಶ್ವರ ಸಮೀಪದ ಶಿವನಗರದ 4ನೇ ಮುಖ್ಯ ರಸ್ತೆಯ ನಿವಾಸಿ ಶರತ್ ಕುಮಾರ್‌ಗೆ ನಗರದ ಪಾಂಡೇಶ್ವರದ ಪೊಲೀಸ್ ಲೈನ್‌ನಲ್ಲಿರುವ ಫೌಝಿ ಜುಮಾ ಮಸ್ಜಿದ್ ವತಿಯಿಂದ ಒಂದು ವಾರಕ್ಕೆ ಬೇಕಾಗುವಷ್ಟು ಅಕ್ಕಿಯನ್ನು ಶುಕ್ರವಾರ ಕೊಡುಗೆಯಾಗಿ ನೀಡಲಾಯಿತು.

ಇದಕ್ಕಾಗಿ ಮಸೀದಿಯ ಅಧ್ಯಕ್ಷ, ಉದ್ಯಮಿ ಮನ್ಸೂರ್ ಅಹ್ಮದ್ ಆಝಾದ್ ಮುತುವರ್ಜಿ ವಹಿಸಿದ್ದರು. ಈ ಸಂದರ್ಭ ಮೇಯರ್ ದಿವಾಕರ್ ಪಾಂಡೇಶ್ವರ್, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಅಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ, ಮದ್ರಸತುಲ್ ಬದ್ರಿಯ್ಯಿನ್‌ನ ಸದರ್ ಮುಅಲ್ಲಿಂ ರಫೀಕ್ ಮದನಿ ಮತ್ತಿತರರು ಉಪಸ್ಥಿತರಿದ್ದರು.

ಹಸಿವಿನ ಸಂಕಟ ಗೊತ್ತು: ಕೊರೋನ-ಲಾಕ್‌ಡೌನ್‌ನಿಂದ ಪರಿಸರದ ನೂರಾರು ನಿರಾಶ್ರಿತರು ಸಮಯಕ್ಕೆ ಸರಿಯಾಗಿ ಆಹಾರವಿಲ್ಲದೆ ಪರದಾಡುವುದನ್ನು ಕಂಡೆ. ನಾನು ಕೂಡ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದವ. ಹಾಗಾಗಿ ಹಸಿವಿನ ಸಂಕಟ ಏನೆಂದು ನನಗೆ ಗೊತ್ತಿತ್ತು. ಜೀವನದಲ್ಲಿ ಕಷ್ಟ ಪಟ್ಟು ಒಂದು ಹಂತ ತಲುಪಿದ ನನಗೆ ಆಹಾರಕ್ಕಾಗಿ ನಿರಾಶ್ರಿತರ ಅಲೆದಾಟ ಸಹಿಸಲು ಆಗಲಿಲ್ಲ. ಸ್ವಂತ ಇನೋವ ಕಾರಿನ ಬಾಡಿಗೆ ನಡೆಸುತ್ತಿರುವ ನನಗೆ ಈ ನಿರಾಶ್ರಿತರಿಗೆ ಏನಾದರು ಮಾಡಬೇಕು ಎಂದು ಬಯಸಿದೆ. ಅದರಂತೆ ಮನೆಯವರ ಮತ್ತು ಸ್ನೇಹಿತರ ಸಹಕಾರದಿಂದ ನಮ್ಮ ಮನೆಯಲ್ಲೇ ಅಡುಗೆ ತಯಾರಿಸಿ ಪ್ಯಾಕ್ ಮಾಡಿ, ಒಂದು ಬಾಟಲಿ ಕುಡಿಯುವ ನೀರಿನೊಂದಿಗೆ ಲಾಕ್‌ಡೌನ್ ಆದ ದಿನದಿಂದ ಪ್ರತೀ ದಿನ ಸುಮಾರು 160 ಮಂದಿಗೆ ಜಾತಿ, ಮತ, ಧರ್ಮ ನೋಡದೆ ಅನ್ನದಾನ ಮಾಡಿದ ತೃಪ್ತಿ ಇದೆ ಎಂದು ಶರತ್ ಕುಮಾರ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ನಗರದ ಸ್ಟೇಟ್‌ಬ್ಯಾಂಕ್ ಪರಿಸರ, ಬಿಜೈ ಕೆಎಸ್ಸಾರ್ಟಿಸಿ, ಮಾರ್ಕೆಟ್ ರಸ್ತೆ, ಕೊಟ್ಟಾರ ಮತ್ತಿತರ ಕಡೆ ಸ್ವತಃ ಕಾರಲ್ಲಿ ತೆರಳಿ ಊಟವನ್ನು ಹಂಚುತ್ತಿದ್ದೇವೆ. ನನ್ನ ಈ ಸೇವೆಗೆ ಅಬ್ದುರ್ರವೂಫ್ ಪುತ್ತಿಗೆ, ಶಿವನಗರದ ಮಾಲತಿ ಸಂತೋಷ್ ಶೆಟ್ಟಿ, ಉದಯ ನವೀನ್ ಬಂಗೇರ ಮತ್ತಿತರರು ಕೂಡ ಸಹಕರಿಸುತ್ತಿದ್ದಾರೆ.

ಈ ಮಧ್ಯೆ ಪಾಂಡೇಶ್ವರ ಮಸೀದಿಯ ಅಧ್ಯಕ್ಷ ಮನ್ಸೂರ್ ಅಹ್ಮದ್ ಆಝಾದ್ ಅವರು ಒಂದು ವಾರಕ್ಕೆ ಬೇಕಾಗುಷ್ಟು ಅಕ್ಕಿಯನ್ನು ಉಚಿತವಾಗಿ ನೀಡಿದ್ದಾರೆ. ಜಾತಿ, ಭೇದ ಮರೆತು ನಾವೆಲ್ಲ ಇಂತಹ ಸೇವೆಯಲ್ಲಿ ತೊಡಗಿಸಿಕೊಂಡರೆ ಮಾತ್ರ ನಮಗೆ ತೃಪ್ತಿ ಸಿಗಲಿದೆ ಎಂದು ಶರತ್ ಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News