ಶೇ.10 ವೇತನ ಕಡಿತ ಹಿಂದೆಗೆದುಕೊಳ್ಳಲು ಕೇಂದ್ರಕ್ಕೆ ಏರ್ ಇಂಡಿಯಾ ನೌಕರರ ಆಗ್ರಹ

Update: 2020-04-25 14:17 GMT

ಹೊಸದಿಲ್ಲಿ,ಎ.25: ತಮ್ಮ ವೇತನದಲ್ಲಿ ಶೇ.10ರಷ್ಟು ಕಡಿತ ಮಾಡುವ ನಿರ್ಧಾರವನ್ನು ಹಿಂದೆಗೆದುಕೊಳ್ಳುವಂತೆ ಏರ್ ಇಂಡಿಯಾದ ಎಂಟು ಕಾರ್ಮಿಕ ಒಕ್ಕೂಟಗಳು ನಾಗರಿಕ ವಾಯುಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿವೆ.

ಕೋವಿಡ್-19 ಲಾಕ್‌ಡೌನ್ ಸಂದರ್ಭದಲ್ಲಿ ತಮ್ಮ ನೌಕರರ ವೇತನಗಳಲ್ಲಿ ಕಡಿತ ಮಾಡದಂತೆ ಅಥವಾ ಅವರನ್ನು ಕೆಲಸದಿಂದ ತೆಗೆಯದಂತೆ ಕೇಂದ್ರವು ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳ ಕಂಪನಿಗಳಿಗೆ ಕೋರಿಕೊಂಡಿದ್ದರೂ ಕೋವಿಡ್-19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಮೂರು ತಿಂಗಳ ಅವಧಿಗೆ ತನ್ನ ಎಲ್ಲ ನೌಕರರ ವೇತನಗಳಲ್ಲಿ ಶೇ.10ರಷ್ಟು ಕಡಿತಗೊಳಿಸುವುದಾಗಿ ಏರ್ ಇಂಡಿಯಾ ಮಾರ್ಚ್‌ನಲ್ಲಿ ಪ್ರಕಟಿಸಿತ್ತು.

ಸರಕಾರದ ನಿರ್ದೇಶಗಳಿಗೆ ವಿರುದ್ಧವಾಗಿರುವ ಏರ್ ಇಂಡಿಯಾ ಆಡಳಿತ ಮಂಡಳಿಯ ನಿರ್ಧಾರವನ್ನು ರದ್ದುಗೊಳಿಸುವಂತೆ ಮತ್ತು ಲಾಕ್‌ಡೌನ್ ಸಂದರ್ಭದಲ್ಲಿ ತಮ್ಮನ್ನು ಸಾರ್ವಜನಿಕ ಕ್ಷೇತ್ರದ ಉದ್ಯಮಗಳಿಗೆ ಸಮನಾಗಿ ಪರಿಗಣಿಸುವಂತೆ ಪುರಿಯವರನ್ನು ಕೋರಿರುವ ಕಾರ್ಮಿಕ ಒಕ್ಕೂಟಗಳು,ಇಂಡಿಗೋದ ನಿರ್ಧಾರವನ್ನು ಪ್ರಶಂಸಿಸಿವೆ.

ತನ್ನ ಹಿರಿಯ ಸಿಬ್ಬಂದಿಗಳ ವೇತನಗಳನ್ನು ಕಡಿತಗೊಳಿಸುವುದಾಗಿ ಮಾರ್ಚ್‌ನಲ್ಲಿ ಪ್ರಕಟಿಸಿದ್ದ ಇಂಡಿಗೋ ಗುರುವಾರ ತನ್ನ ನಿರ್ಧಾರವನ್ನು ಹಿಂದೆಗೆದುಕೊಂಡಿತ್ತು.

ಖಾಸಗಿ ವಿಮಾನಯಾನ ಸಂಸ್ಥೆಯೊಂದು ಸರಕಾರದ ನಿರ್ದೇಶಗಳನ್ನು ಗೌರವಿಸುತ್ತಿರುವಾಗ ಏರ್ ಇಂಡಿಯಾ ಅದನ್ನು ಪಾಲಿಸಿ ಮಾದರಿಯಾಗುವುದು ಮಹತ್ವದ್ದಾಗಿದೆ ಎಂದು ಪತ್ರದಲ್ಲಿ ತಿಳಿಸಿರುವ ಕಾರ್ಮಿಕ ಒಕ್ಕೂಟಗಳು,ಏರ್ ಇಂಡಿಯಾ ಆಡಳಿತವು ಸಕಾಲದಲ್ಲಿ ವೇತನವನ್ನು ಪಾವತಿಸಲು ವಿಫಲವಾಗಿದೆ. ಎ.18ರಂದು ಪಾವತಿಸಲಾದ ವೇತನಗಳಲ್ಲಿ ಶೇ.10ರಷ್ಟು ಕಡಿತ ಮಾಡಲಾಗಿದೆ. ಅದರ ಪೈಲಟ್‌ಗಳಿಗೆ ಫೆಬ್ರವರಿ ತಿಂಗಳ ಶೇ.70ರಷ್ಟು ವೇತನ ಇನ್ನಷ್ಟೇ ಪಾವತಿಯಾಗಬೇಕಿದೆ ಎನ್ನುವುದನ್ನು ಪುರಿ ಅವರ ಗಮನಕ್ಕೆ ತಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News