×
Ad

ಕೊರೋನ ವೈರಸ್ ಮುಕ್ತಿಯತ್ತ ಸಾಗುತ್ತಿದೆ ಉಡುಪಿ ಜಿಲ್ಲೆ

Update: 2020-04-25 20:06 IST

ಉಡುಪಿ, ಎ.25: ನೋವೆಲ್ ಕೊರೋನ ವೈರಸ್ (ಕೋವಿಡ್-19) ಪಿಡುಗು ಪ್ರಾರಂಭಗೊಂಡ ನಂತರ ಇದೇ ಮೊದಲ ಬಾರಿ ಉಡುಪಿ ಜಿಲ್ಲೆ ಯಲ್ಲಿ ಶನಿವಾರ ಕೊರೋನ ಗುಣಲಕ್ಷಣದ ರೋಗಿಗಳು ಐಸೋಲೇಷನ್ ವಾರ್ಡಿಗೆ ಸೇರ್ಪಡೆಗೊಂಡಿಲ್ಲ ಹಾಗೂ ಸೋಂಕು ಪರೀಕ್ಷೆಗಾಗಿ ಕಳುಹಿಸಿದ ಗಂಟಲು ದ್ರವ ಮಾದರಿಯಲ್ಲಿ ಕೊರೋನ ಶಂಕಿತರಾಗಲೀ, ಕೊರೋನ ಶಂಕಿತರ ಸಂಪರ್ಕಕ್ಕೆ ಬಂದವರ ಮಾದರಿಯಾಗಲಿ ಸೇರಿಲ್ಲ. ಈ ಮೂಲಕ ಜಿಲ್ಲೆ ಕೊರೋನ ವೈರಸ್‌ನ ವಿಮುಕ್ತಿಯತ್ತ ಖಚಿತ ಹೆಜ್ಜೆ ಇರಿಸಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ.ಸುಧೀರ್ ‌ಚಂದ್ರ ಸೂಡ ತಿಳಿಸಿದ್ದಾರೆ.

ಶನಿವಾರ ಹೊಸದಾಗಿ ಐಸೋಲೇಷನ್ ವಾರ್ಡಿಗೆ ಸೇರ್ಪಡೆಗೊಂಡ ಒಟ್ಟು 16 ಮಂದಿಯಲ್ಲಿ 9 ಮಂದಿ ಉಸಿರಾಟದ ತೊಂದರೆಯಿಂದ ಬಳಲುತಿದ್ದರೆ, ಉಳಿದ ಏಳು ಮಂದಿ ಶೀತಜ್ವರದ ಬಾಧೆಗಾಗಿ ವಾರ್ಡಿಗೆ ಸೇರ್ಪಡೆಗೊಂಡಿ ದ್ದಾರೆ. ಅದೇ ರೀತಿ ಇಂದು ಸೋಂಕಿತರ ಪತ್ತೆಗಾಗಿ ಪಡೆಯಲಾದ 19 ಗಂಟಲು ದ್ರವದ ಮಾದರಿಯಲ್ಲಿ 6 ಮಂದಿ ಉಸಿರಾಟ ತೊಂದರೆಯವರಿದ್ದರೆ, ಉಳಿದ 13 ಮಂದಿ ಶೀತಜ್ವರ ಬಾಧಿತರು ಸೇರಿದ್ದಾರೆ. ಇವರಲ್ಲೂ ಕೊರೋನ ಶಂಕಿತ ರಾಗಲೀ, ಅವರ ಸಂಪರ್ಕಕ್ಕೆ ಬಂದವರಾಗಲಿ ಸೇರಿಲ್ಲ ಎಂದು ಡಾ.ಸೂಡ ತಿಳಿಸಿದರು.

ಕಳೆದ 3-4 ದಿನಗಳಿಂದ ಜಿಲ್ಲೆಯಲ್ಲಿ ಕೊರೋನ ಶಂಕಿತರು ಹಾಗೂ ಅವರ ಸಂಪರ್ಕಕ್ಕೆ ಬಂದವರು ಪರೀಕ್ಷೆಗಾಗಿ ಬರುವುದು ಕಡಿಮೆಯಾಗಿತ್ತು. ನಿನ್ನೆ ಶಂಕಿತರೊಬ್ಬರು ವಾರ್ಡಿಗೆ ಸೇರಿದ್ದರೆ, ಒಬ್ಬರ ಮಾದರಿಯನ್ನು ಮಾತ್ರ ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಈ ಎರಡೂ ಶೂನ್ಯ ಸಾಧನೆ ಮಾಡುವ ಮೂಲಕ ಜಿಲ್ಲೆಯಲ್ಲಿ ಕೊರೋನ ಭೀತಿ ಸಂಪೂರ್ಣ ದೂರವಾಗುವ ದಿನವನ್ನು ಎದುರು ನೋಡಬಹುದಾಗಿದೆ. ಇಂದು ಐಸೋಲೇಷನ್ ವಾರ್ಡಿಗೆ ಸೇರಿದ 16 ಮಂದಿಯಲ್ಲಿ 13 ಮಂದಿ ಪುರುಷರು ಹಾಗೂ ಮೂವರು ಮಹಿಳೆಯರು.

ಶನಿವಾರ ಒಟ್ಟು 62 ಮಾದರಿಗಳ ಫಲಿತಾಂಶ ಬಂದಿದ್ದು, ಇವೆಲ್ಲವೂ ನೆಗೆಟಿವ್ ಆಗಿವೆ. ಹೀಗಾಗಿ ಇಂದು ಪರೀಕ್ಷೆಗೆ ಕಳುಹಿಸಿದ 19 ಮಾದರಿಗಳು ಸೇರಿದಂತೆ ಒಟ್ಟು 31ರ ವರದಿ ಇನ್ನು ಬರಬೇಕಾಗಿದೆ ಎಂದು ಡಾ.ಸೂಡ ತಿಳಿಸಿದರು. ಜಿಲ್ಲೆಯಿಂದ ಇದುವರೆಗೆ ಒಟ್ಟು 1043 ಮಂದಿಯ ಸ್ಯಾಂಪಲ್‌ಗಳನ್ನು ಸೋಂಕಿನ ಪರೀಕ್ಷೆಗಾಗಿ ಪಡೆಯಲಾಗಿದೆ. ಇವುಗಳಲ್ಲಿ 1009 ಮಾದರಿ ನೆಗೆಟಿವ್ ಆಗಿದ್ದರೆ, ಮೂರು ಮಾತ್ರ ಪಾಸಿಟಿವ್ ಆಗಿವೆ. ಜಿಲ್ಲೆಯಲ್ಲಿ ಈಗ ಕೊರೋನ ಸೋಂಕಿತರಾರು ಚಿಕಿತ್ಸೆಯಲ್ಲಿಲ್ಲ. ಎಲ್ಲರೂ ಈಗಾಗಲೇ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಜಿಲ್ಲೆಯಲ್ಲಿ ಉಸಿರಾಟದ ತೊಂದರೆ, ಹೊರಜಿಲ್ಲೆ, ಹೊರರಾಜ್ಯಗಳಿಂದ ಬಂದವರು ಹಾಗೂ ಕೋವಿಡ್ ಶಂಕಿತರ ಸಂಪರ್ಕಕ್ಕೆ ಬಂದವರು ಸೇರಿದಂತೆ ಇಂದು ಮತ್ತೆ 48 ಮಂದಿ ಹೊಸದಾಗಿ ನೋಂದಣಿಗೊಂಡಿದ್ದಾರೆ. ಈ ಮೂಲಕ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 3286 ಮಂದಿ ತಪಾಸಣೆಗಾಗಿ ನೋಂದಣಿ ಗೊಂಡಿದ್ದಾರೆ. ಇವರಲ್ಲಿ 1973 (ಇಂದು 44) ಮಂದಿ 28 ದಿನಗಳ ನಿಗಾ ಪೂರೈಸಿದ್ದರೆ, 2620 (108) ಮಂದಿ 14 ದಿನಗಳ ನಿಗಾವನ್ನು ಪೂರ್ಣ ಗೊಳಿಸಿದ್ದಾರೆ. ಒಟ್ಟು 582 ಮಂದಿ ಇನ್ನೂ ಹೋಮ್ ಕ್ವಾರಂಟೈನ್ ಹಾಗೂ 35 ಮಂದಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಡಾ. ಸುಧೀರ್‌ಚಂದ್ರ ಸೂಡ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News