×
Ad

ಉಡುಪಿ ಜಿಲ್ಲೆಯಿಂದ ಊರಿಗೆ ತೆರಳಿದ 567 ವಲಸೆ ಕಾರ್ಮಿಕರು: 20 ಕೆಎಸ್‌ಆರ್‌ಟಿಸಿ ಬಸ್‌ಗಳ ವ್ಯವಸ್ಥೆ

Update: 2020-04-25 20:09 IST

ಉಡುಪಿ, ಎ.25: ರಾಜ್ಯ ಸರಕಾರದ ಆದೇಶದಂತೆ ಉಡುಪಿ ಜಿಲ್ಲೆಯ ನಿರಾಶ್ರಿತರ ಪರಿಹಾರ ಕೇಂದ್ರಗಳಲ್ಲಿ ಉಳಿದುಕೊಂಡಿರುವ ಉತ್ತರ ಕರ್ನಾಟಕದ 567 ವಲಸೆ ಕಾರ್ಮಿಕರನ್ನು ಇಂದು ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡಲಾದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ತಮ್ಮ ತಮ್ಮ ಊರುಗಳಿಗೆ ಕಳುಹಿಸಿಕೊಡ ಲಾಯಿತು.

ಕೆಎಸ್‌ಆರ್‌ಟಿಸಿಯಿಂದ ನೀಡಲಾದ ಉಡುಪಿ ಡಿಪೋದ 16 ಹಾಗೂ ಕುಂದಾಪುರ ಡಿಪೋದ ನಾಲ್ಕು ಸೇರಿದಂತೆ ಒಟ್ಟು 20 ಬಸ್‌ಗಳಲ್ಲಿ ಜಿಲ್ಲೆಯ ಕಾರ್ಕಳ ತಾಲೂಕಿನ ಒಂದು, ಕಾಪು-2, ಉಡುಪಿ-2, ಬ್ರಹ್ಮಾವರ-2, ಕುಂದಾಪುರ-2, ಬೈಂದೂರು-2 ಕೇಂದ್ರಗಳಲ್ಲಿದ್ದ ಒಟ್ಟು 669 ಮಂದಿ ಕಾರ್ಮಿಕರ ಪೈಕಿ 567 ಮಂದಿ ತವ್ಮು ಜಿಲ್ಲೆಗಳಿಗೆ ಪ್ರಯಾಣ ಬೆಳೆಸಿದರು.

ವಿವಿಧ ಕೇಂದ್ರಗಳಲ್ಲಿರುವ ಕಾರ್ಮಿಕರು ತಮ್ಮ ತಮ್ಮ ಜಿಲ್ಲೆಗೆ ನಿಯೋಜಿಸಿದ್ದ ಬಸ್‌ಗಳಲ್ಲಿ ಬೆಳಗಾವಿ, ಹಾವೇರಿ, ಗದಗ, ಬಾಗಲಕೋಟೆ, ಕೊಪ್ಪಳ, ರೋಣ, ವಿಜಯಪುರ, ಗುಲ್ಬರ್ಗಗಳಿಗೆ ತೆರಳಿದರು. ಈ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಒಂದು ಬಸ್‌ಗಳಲ್ಲಿ 25 ಮಂದಿಗೆ ಮಾತ್ರ ಪ್ರಯಾಣಿಸಲು ಅವಕಾಶ ಕಲ್ಪಿಸಲಾಯಿತು. ಪ್ರತಿಯೊಂದು ಬಸ್‌ಗಳಲ್ಲಿ ಕಾರ್ಮಿಕರ ಸುರಕ್ಷತೆ ದೃಷ್ಠಿಯಿಂದ ಒಬ್ಬರು ಪೊಲೀಸ್ ಸಿಬ್ಬಂದಿ ಹಾಗೂ ಒಬ್ಬರು ಗ್ರಾಮ ಕರಣಿಕರನ್ನು ಸಹ ಕಳುಹಿಸಿಕೊಡಲಾಯಿತು

ಬಹುತೇಕ ಬಸ್‌ಗಳು ಇಂದು ರಾತ್ರಿಯೇ ತಮ್ಮ ಸ್ಥಳಗಳನ್ನು ತಲುಪಲಿದ್ದು, ವಿಜಯಪುರ ಹಾಗೂ ಗುಲ್ಬರ್ಗದ ಬಸ್‌ಗಳು ಎ.26ರಂದು ಬೆಳಗಿನ ಜಾವ ಗಮ್ಯಸ್ಥಾನ ತಲುಪುವ ಸಾಧ್ಯತೆಗಳಿವೆ ಎಂದು ಕೆಎಸ್‌ಆರ್‌ಟಿಸಿ ಡಿಪೋ ಅಧಿಕಾರಿಗಳು ಪತ್ರಿಕೆಗೆ ಮಾಹಿತಿ ನೀಡಿದರು.

ಉಡುಪಿ ಬೋರ್ಡ್ ಹೈಸ್ಕೂಲಿನಲ್ಲಿರುವ ಕೇಂದ್ರದಿಂದ ಉತ್ತರ ಕರ್ನಾಟಕದ 91 ಮಂದಿ ಕಾರ್ಮಿಕರನ್ನು ಕಳುಹಿಸಿಕೊಡಲಾಯಿತು. ಕಾಪು ತಾಲೂಕಿನ ಕಾಪು ಕೇಂದ್ರದಲ್ಲಿದ್ದ 10 ಮಂದಿ, ಕಟಪಾಡಿ ಕೇಂದ್ರದಲ್ಲಿದ್ದ 16 ಮಂದಿಯನ್ನು ಮತ್ತು ಬ್ರಹ್ಮಾವರ ತಾಲೂಕಿನ ಬಾರಕೂರು ಕೇಂದ್ರದಲ್ಲಿದ್ದ 136 ಮತ್ತು ಕೊಕ್ಕರ್ಣೆ ಕೇಂದ್ರದಲ್ಲಿದ್ದ 11 ಮಂದಿಯನ್ನು ಆಯಾ ಮಾರ್ಗದಲ್ಲಿ ಸೂಚಿಸಿುವ ಬಸ್‌ಗಳಲ್ಲಿ ಕಳುಹಿಸಲಾಯಿತು.

ಕುಂದಾಪುರ ತಾಲೂಕಿನ ಕೋಟೇಶ್ವರ ಕೇಂದ್ರದಲ್ಲಿದ್ದ 119 ಹಾಗೂ ವಡೇರ ಹೋಬಳಿ ಕೇಂದ್ರದಲ್ಲಿದ್ದ 87 ಮಂದಿ ಪೈಕಿ 83 ಮಂದಿಯನ್ನು ಕಳುಹಿಸಿಕೊಡ ಲಾಯಿತು. ಬೈಂದೂರು ತಾಲೂಕಿನ ಬೈಂದೂರು ಬಿಸಿಎಂ ಹಾಸ್ಟೆಲ್‌ನಲ್ಲಿರುವ ಎರಡು ಕೇಂದ್ರದಿಂದ ಒಟ್ಟು 66 ಮಂದಿಯನ್ನು ಕುಷ್ಟಗಿ, ರಾಯಚೂರುಗಳಿಗೆ ಕುಹಿಸುವ ವ್ಯವಸ್ಥೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕುಂದಾಪುರ ಕೇಂದ್ರಕ್ಕೆ ಕುಂದಾಪುರ ಎಸಿ ಕೆ.ರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಉಳಿದಂತೆ ಆಯಾ ಕೇಂದ್ರಗಳಲ್ಲಿ ಬೈಂದೂರು ತಹಶೀಲ್ದಾರ್ ಬಸಪ್ಪ ಪೂಜಾರಿ, ಉಡುಪಿ ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳಿಕರ್, ಉಡುಪಿ ಡಿವೈಎಸ್ಪಿ ಜೈಶಂಕರ್, ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೋರಯ್ಯ, ಕುಂದಾಪುರ ತಹಶೀಲ್ದಾರ್ ತಿಪ್ಪೆಸ್ವಾಮಿ ಹಾಜರಿದ್ದರು

102 ಕಾರ್ಮಿಕರು ಕೇಂದ್ರಗಳಲ್ಲಿಯೇ ಬಾಕಿ

ಜಿಲ್ಲೆಯಲ್ಲಿರುವ ಒಟ್ಟು 11 ಕೇಂದ್ರಗಳಲ್ಲಿ 102 ಕಾರ್ಮಿಕರು ತಮ್ಮ ಊರು ಗಳಿಗೆ ತೆರಳುವ ವ್ಯವಸ್ಥೆ ಇಲ್ಲದೆ ಆಯಾ ಕೇಂದ್ರಗಳಲ್ಲಿಯೇ ಬಾಕಿಯಾಗಿದ್ದಾರೆ.

ರಾಜ್ಯದ ಕೆಲವು ಜಿಲ್ಲೆಗಳ ಒಂದಿಬ್ಬರು ಕಾರ್ಮಿಕರು ಮಾತ್ರ ಇರುವುದರಿಂದ ಇಂದು ಅವರಿಗೆ ಬಸ್ ವ್ಯವಸ್ಥೆ ಮಾಡಿರಲಿಲ್ಲ. ಆದುದರಿಂದ ಅವರು ಮತ್ತು ಉತ್ತರ ಭಾರತದ ಕಾರ್ಮಿಕರು ಸದ್ಯ ಈ ಕೇಂದ್ರಗಳಲ್ಲಿ ಉಳಿದುಕೊಂಡಿದ್ದಾರೆ. ಮಧ್ಯಪ್ರದೇಶ, ಉತ್ತರಪ್ರದೇಶ, ಅಸ್ಸಾಂ, ಮಹಾರಾಷ್ಟ್ರ ಸೇರಿದಂತೆ ಉತ್ತರ ಭಾರತದ 68 ಹಾಗೂ ಬಳ್ಳಾರಿ, ಮಂಗಳೂರು, ಚಿತ್ರದುರ್ಗ, ದಾವಣೆಗೆರೆ, ಬೆಂಗಳೂರು ಹಾಸನ ಸೇರಿದಂತೆ ವಿವಿಧ ಜಿಲ್ಲೆಳ 34 ಮಂದಿ ಉಳಿದು ಕೊಂಡಿದ್ದಾರೆ.

ತಮ್ಮ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಿದ ವಲಸೆ ಕಾರ್ಮಿಕರಿಗೆ ಬೆಳಗ್ಗೆ ಉಪಹಾರವನ್ನು ಆಯಾ ಕೇಂದ್ರಗಳಲ್ಲಿಯೇ ನೀಡಲಾಯಿತು. ಬಳಿಕ ಮಧ್ಯಾಹ್ನದ ಊಟ, ಬಿಸ್ಕಟ್, ನೀರು, ಮಾಸ್ಕ್, ಸ್ಯಾನಿಟೈಸರ್, ಟವೆಲ್‌ಗಳನ್ನು ಕೊಟ್ಟು ಕಳುಹಿಸಲಾಯಿತು. ಇದಕ್ಕೂ ಮೊದಲು ಎಲ್ಲರನ್ನು ಕೂಡ ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು. ಇದೀಗ ಕೇಂದ್ರದಲ್ಲಿ ಉಳಿದುಕೊಂಡಿರುವ ವಿವಿಧ ಜಿಲ್ಲೆಯ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸಲು ಬೇಕಾದ ವ್ಯವಸ್ಥೆಯನ್ನು ಶೀಘ್ರವೇ ಮಾಡಲಾಗುವುದು. ಕೇಂದ್ರ ಸರಕಾರದ ಆದೇಶ ನೀಡಿದರೆ ಹೊರ ರಾಜ್ಯದ ಕಾರ್ಮಿಕರನ್ನು ಕೂಡ ಕಳುಹಿಸಿಕೊಡಲಾಗುವುದು.

-ಕೆ.ರಾಜು, ಉಪವಿಭಾಗಾಧಿಕಾರಿ, ಕುಂದಾಪುರ

ಪರಿಹಾರ ಕೇಂದ್ರದಲ್ಲಿ ನಮ್ಮನ್ನು ಉತ್ತಮವಾಗಿ ನೋಡಿಕೊಂಡಿದ್ದಾರೆ. ನಮಗೆ ಏನು ತೊಂದರೆ ಆಗಿಲ್ಲ. ಕಳೆದ ಒಂದು ತಿಂಗಳಿನಿಂದ ಇಲ್ಲೇ ಇದ್ದೇವು. ಬೆಳಗ್ಗೆ ಉಪಹಾರ, ಹಾಲು, ಟೀ, ತಿಂಡಿ, ಊಟವನ್ನು ಸಮಯಕ್ಕೆ ಸರಿಯಾಗಿ ನೀಡು ತ್ತಿದ್ದರು. ಇನ್ನು ನಮಗೆ ಊರಿಗೆ ಹೋಗಬೇಕಾಗಿದೆ. ಊರಲ್ಲಿ ಗಂಡ ಮಕ್ಕಳು ಇದ್ದಾರೆ. ಅಲ್ಲಿ ನಮ್ಮದೇ ಹೊಲದಲ್ಲಿ ಕೃಷಿ ಕೆಲಸ ಮಾಡಬೇಕಾಗಿದೆ.
-ನಿಂಗವ್ವ ಕುಷ್ಠಗಿ, ಉಡುಪಿ ಬೋರ್ಡ್ ಹೈಸ್ಕೂಲ್ ಕೇಂದ್ರದಿಂದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News