ಸೋಮವಾರದಿಂದ ಮಣಿಪಾಲ ಕೆಎಂಸಿ ಎಲ್ಲಾ ಹೊರರೋಗಿ ವಿಭಾಗ ಸೇವೆ ಲಭ್ಯ
ಉಡುಪಿ, ಎ.25: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಎಲ್ಲಾ ಹೊರರೋಗಿ ವಿಭಾಗಗಳು ಎ.27ರ ಸೋಮವಾರದಿಂದ ಎಂದಿನಂತೆ ಸೇವೆಗೆ ಲಭ್ಯವಿರುತ್ತವೆ ಎಂದು ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ತಿಳಿಸಿದ್ದಾರೆ.
ಎ.27ರಿಂದ ಜಾರಿಗೆ ಬರುವಂತೆ ಬೆಳಗ್ಗೆ 8:30ರಿಂದ ಅಪರಾಹ್ನ 1:00 ರವರೆಗೆ ಆಸ್ಪತ್ರೆಯ ಎಲ್ಲ ಹೊರರೋಗಿ ವಿಭಾಗಗಳು ಎಂದಿನಂತೆ ಸೇವೆಗೆ ಲಭ್ಯವಿದ್ದು, ಸಾರ್ವಜನಿಕರು ಮತ್ತು ರೋಗಿಗಳು ಈ ಸೇವಾ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದವರು ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆದರೆ ಈ ಸೇವೆಯನ್ನು ಪಡೆದುಕೊಳ್ಳಲು ಬರುವ ಪ್ರತಿಯೊಬ್ಬ ರೋಗಿಯು ಆಸ್ಪತ್ರೆಯ ಹೊರಾಂಗಣದಲ್ಲಿ ಹಾಕಿರುವ ತಾತ್ಕಾಲಿಕ ಜ್ವರದ ಚಿಕಿತ್ಸಾಲಯಕ್ಕೆ ಭೇಟಿ ನೀಡಬೇಕು. ನಂತರ ಅವರನ್ನು ಸಂಬಂಧ ಪಟ್ಟ ವಿಭಾಗಗಳಿಗೆ ಕಳುಹಿಸಿ ಕೊಡಲಾಗುವುದು. ಎಲ್ಲಾ ರೋಗಿಗಳು ಮತ್ತು ಆಸ್ಪತ್ರೆಗೆ ಭೇಟಿ ನೀಡುವ ಪ್ರತಿಯೊಬ್ಬರು ಕಡ್ಡಾಯವಾಗಿ ಮುಖಗವಸು (ಮಾಸ್ಕ್) ಧರಿಸಿರಬೇಕು ಮತ್ತು ಪ್ರತೀ ರೋಗಿಯೊಂದಿಗೆ ಒಬ್ಬ ಸಹಾಯಕರಿಗೆ ಮಾತ್ರ ಅವಕಾಶ ಕಲ್ಪಿಸಲಾ ಗುವುದು ಎಂದವರು ಹೇಳಿದ್ದಾರೆ.
ಅಲ್ಲದೇ ಟೆಲಿಮೆಡಿಸಿನ್ ಮೂಲಕ ವೈದ್ಯರ ಸಮಾಲೋಚನಾ ಸೇವೆಯು ಎಂದಿನಂತೆ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಲಭ್ಯವಿದೆ. ಸಾರ್ವಜನಿಕರು 080-47192235ಗೆ ಕರೆಮಾಡಿ ಈ ಸೇವೆಯ ಸದುಪಯೋಗ ಪಡೆದುಕೊಳ್ಳಬಹುದು ಎಂದು ಡಾ.ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.