ಮಹೇಂದ್ರ ಕುಮಾರ್ ನಿಧನಕ್ಕೆ ವಿವಿಧ ಸಂಘಟನೆಗಳ ಸಂತಾಪ

Update: 2020-04-25 14:53 GMT

ಎಸ್‌ಡಿಪಿಐ: ರಾಜ್ಯದಲ್ಲಿ ಸಾಮಾಜಿಕ ನ್ಯಾಯ ಹಾಗೂ ಭ್ರಾತೃತ್ವದ ಧ್ವನಿ ಎಬ್ಬಿಸಿ ದಿಟ್ಟ ಮಾತುಗಳಿಂದ ಜನಪ್ರಿಯತೆ ಗಳಿಸಿ ಉದಯೋನ್ಮುಖ ಮುಂದಾಳು ಎನಿಸಿಕೊಂಡಿದ್ದ ಮಹೇಂದ್ರಕುಮಾರ್‌ರ ನಿಧನ ದಿಗ್ಭ್ರಮೆ ಹುಟ್ಟಿಸಿದೆ. ಸಾಮಾಜಿಕ ನ್ಯಾಯ ಹಾಗೂ ಸೌಹಾರ್ದತೆಯ ಸಂಘಟಿತ ಹೋರಾಟದಲ್ಲಿದ್ದ ಒಬ್ಬ ಲವಲವಿಕೆಯ ನಾಯಕನನ್ನು ರಾಜ್ಯದ ಜನತೆ ಕಳೆದುಕೊಂಡಿದೆ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಸಂತಾಪ ಸೂಚಿಸಿದ್ದಾರೆ.

ದ.ಕ.ಜಿಲ್ಲಾ ಜನತಾ ದಳ: ರಾಜ್ಯ ಕಂಡ ಅಪ್ರತಿಮ ಹೋರಾಟಗಾರ ಮಹೇಂದ್ರ ಕುಮಾರ್‌ರ ನಿಧನವು ಸಮಾಜಕ್ಕೆ ಭಾರೀ ನಷ್ಟವನ್ನುಂಟು ಮಾಡಿದೆ. ಬಜರಂಗ ದಳದಿಂದ ಹೊರ ಬಂದ ಬಳಿಕ ಕೆಲಕಾಲ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಮಹೇಂದ್ರ ಕುಮಾರ್ ಕೊನೆಯುಸಿರು ಎಳೆಯುವವರೆಗೂ ಜಾತ್ಯತೀತ ಮನಸ್ಸುಗಳನ್ನು ಕಟ್ಟಲು ಅವಿರತವಾಗಿ ಶ್ರಮಿಸುತ್ತಿದ್ದರು ಎಂದು ದ.ಕ.ಜಿಲ್ಲಾ ಜನತಾ ದಳದ ಅದ್ಯಕ್ಷ ವಿಟ್ಲ ಮುಹಮ್ಮದ್ ಕುಂಞಿ ಮತ್ತು ದ.ಕ.ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಅಝೀಝ್ ಕುದ್ರೋಳಿ ಸಂತಾಪ ಸೂಚಿಸಿದ್ದಾರೆ.

ಸಿಪಿಐ: ಪ್ರಗತಿಪರ ಚಿಂತಕ, ವಾಗ್ಮಿ ಮಹೇಂದ್ರ ಕುಮಾರ್‌ರ ನಿಧನವು ಸಮಾಜಕ್ಕೆ ದೊಡ್ಡ ನಷ್ಟವನ್ನು ಉಂಟು ಮಾಡಿದೆ. ಬಜರಂಗದಳದ ರಾಜ್ಯ ಸಂಚಾಲಕರಾಗಿದ್ದ ವೇಳೆ ಅಲ್ಲಿನ ಭ್ರಮಾಲೋಕವನ್ನು ಅಥೈಸಿಕೊಂಡು, ಸಂಘಪರಿವಾರದ ಒಳಹೊರಗನ್ನು ತಮ್ಮ ಶಿಷ್ಟ ಶೈಲಿಯಲ್ಲಿ ಜನರ ಮುಂದಿಡುತ್ತಾ, ಇಂದಿನ ಯುವ ಪೀಳಿಗೆಯನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯಲು ಅವರು ಮಾಡುತ್ತಿದ್ದ ಶ್ರಮ ನಿಜಕ್ಕೂ ಮೆಚ್ಚುವಂತದ್ದು ಎಂದು ಸಿಪಿಐ ದ.ಕ. ಮತ್ತು ಉಡುಪಿ ಜಿಲ್ಲಾ ಸಮಿತಿಯ ಕಾರ್ಯದರ್ಶಿ ವಿ.ಕುಕ್ಯಾನ್ ತಿಳಿಸಿದ್ದಾರೆ.

ಯುನಿವೆಫ್ ಕರ್ನಾಟಕ: ಸದ್ವಿಚಾರಗಳನ್ನು ಧನಾತ್ಮಕವಾಗಿಯೇ ಬಿಂಬಿಸಿ ಜನರ ಮನವೊಲಿಸುವ ಕಾರ್ಯದ ಮೂಲಕ ಹೊಸ ಜಾಗೃತಿಯನ್ನು ಮೂಡಿಸಬೇಕೆಂದು ಬಲವಾಗಿ ನಂಬಿದ್ದ ಮತ್ತು ಅದಕ್ಕಾಗಿ ಕಾರ್ಯಪ್ರವರ್ತರಾಗಿದ್ದ ‘ನಮ್ಮ ಧ್ವನಿ’ ಯುಟ್ಯೂಬ್ ಚಾನಲ್ನ ಸ್ಥಾಪಕ, ಸೌಹಾರ್ದ ಸಮಾಜದ ಸ್ಥಾಪನೆಗಾಗಿ ಹೋರಾಟ ನಡೆಸುವಲ್ಲಿ ಮುಂಚೂಣಿಯಲ್ಲಿದ್ದ ವಾಗ್ಮಿ ಮಹೇಂದ್ರ ಕುಮಾರ್‌ರ ನಿಧನಕ್ಕೆ ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಸಂತಾಪ ಸೂಚಿಸಿದ್ದಾರೆ.

ಜಮಾತೆ ಇಸ್ಲಾಮಿ ಹಿಂದ್: ತನ್ನ ಜೀವನವನ್ನೇ ಹೋರಾಟಕ್ಕೆ ಮುಡಿಪಾಗಿಟ್ಟ ಅಪ್ರತಿಮ ಹೋರಾಟಗಾರ ಮಹೇಂದ್ರ ಕುಮಾರ್ ಕೊಪ್ಪಅವರ ನಿಧನವು ಭಾರತೀಯರಿಗೆ ಅಪಾರ ನೋವು ತಂದಿದೆ. ಕೆಲವು ವರ್ಷಗಳಿಂದ ದೇಶದ, ಒಗ್ಗಟ್ಟು, ಶಾಂತಿ ಸೌಹಾರ್ದತೆಗಾಗಿ ತನ್ನನ್ನು ಮೀಸಲಿಟ್ಟು ದೇಶದ ಜನತೆಗೆ ಧೈರ್ಯ ತುಂಬುತ್ತಾ ಕೆಚ್ಚೆದೆಯ ತ್ಯಾಗಿಯ ವಿದಾಯ ದುಃಖಕ್ಕೀಡು ಮಾಡಿದೆ. ಅವರು ತೋರಿಸಿ ಕೊಟ್ಟ ವೈಚಾರಿಕತೆಯ ಹಾದಿ ನಮಗೆ ಮಾರ್ಗದರ್ಶನವಾಗಲಿ ಎಂದು ಜಮಾತೆ ಇಸ್ಲಾಮಿ ಹಿಂದ್ ದ.ಕ. ಜಿಲ್ಲಾ ಸಂಚಾಲಕ ಎ. ಸಯೀದ್ ಇಸ್ಮಾಯೀಲ್ ಸಂತಾಪ ಸೂಚಿಸಿದ್ದಾರೆ.

ಮುಸ್ಲಿಮ್ ಒಕ್ಕೂಟ: ಖ್ಯಾತ ವಾಗ್ಮಿ, ಸಾಮಾಜಿಕ ಕಾರ್ಯಕರ್ತ, ಪ್ರಗತಿಪರ ಚಿಂತಕ ಮತ್ತು ನಮ್ಮದ್ವನಿ ಮಾಧ್ಯಮ ಮುಖ್ಯಸ್ಥ ಮಹೇಂದ್ರ ಕುಮಾರ್ ಕೊಪ್ಪಅವರ ನಿಧನವು ನವ ಚಿಂತನಾ ವರ್ಗಕ್ಕೆ ತುಂಬಲಾರದ ನಷ್ಟವಾಗಿದೆ. ಪೌರತ್ವ ಸಂರಕ್ಷಣಾ ಹೋರಾಟದಲ್ಲಿ ತನ್ನನ್ನು ಕೆಳ ಮತ್ತು ಶೋಷಿತ ವರ್ಗದವರೊಂದಿಗೆ ತೊಡಗಿಸಿಕೊಂಡು, ಕರಾವಳಿ ಜಿಲ್ಲೆಗಳಲ್ಲಿ ಜಾಗೃತಿ ಅಭಿಯಾನವನ್ನು ಯಶಸ್ವಿ ಗೊಳಿಸಲು ಮುಖ್ಯ ಪಾತ್ರ ವಹಿಸಿದ್ದರು. ಸ್ವಾಮಿ ವಿವೇಕಾನಂದರ ನೈಜ ಚಿಂತನೆಯನ್ನು ಅಳವಡಿಸಿ ಸಾಮಾಜಿಕ ಕ್ರಾಂತಿಗೆ ಅವರು ಮುಂದಾಗಿದ್ದರು ಎಂದು ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ, ಮಾಜಿ ಮೇಯರ್ ಕೆ.ಅಶ್ರಫ್ ಸಂತಾಪದಲ್ಲಿ ತಿಳಿಸಿದ್ದಾರೆ.

ಮಂಗಳೂರು ಸೆಂಟ್ರಲ್ ಕಮಿಟಿ: ಮೂಲತಃ ಕೊಪ್ಪದವರಾದರೂ ಕೂಡ ಮಂಗಳೂರಿನ ಜನತೆಯ ಜೊತೆ ಅತ್ಯಂತ ನಿಕಟ ಸಂಬಂಧ ಹೊಂದಿದ್ದ, ಕೆಲವು ವರ್ಷದಿಂದ ಅಪ್ಪಟ ಜಾತ್ಯತೀತರಾಗಿದ್ದುಕೊಂಡು ಯುವಕರಿಗೆ ಸ್ಪೂರ್ತಿಯಾಗಿದ್ದ ಮಹೇಂದ್ರ ಕುಮಾರ್‌ರ ನಿಧನವು ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಮಂಗಳೂರು ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲಿ ಹಸನ್ ತಿಳಿಸಿದ್ದಾರೆ.

ಮಾನವರು ಸಹೋದರರು ಸೌಹಾರ್ದ ವೇದಿಕೆ: ಮಹೇಂದ್ರ ಕುಮಾರ್‌ರ ನಿಧನವು ಮಾನವ ಸಮಾಜಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಮಾನವರು ಸಹೋದರರು ಸೌಹಾರ್ದ ವೇದಿಕೆಯ ಅಧ್ಯಕ್ಷ ಅಬ್ದುಲ್ ಅಝೀಝ್ ಝುಹ್ರಿ ಪುಣಚ ಸಂತಾಪ ಸೂಚಿಸಿದ್ದಾರೆ.
*ದ.ಕ.ಜಿಲ್ಲಾ ದಸಂಸ: ಮಾನವತಾವಾದಿ, ಜಾತ್ಯತೀತ ತತ್ವದ ಪ್ರತಿಪಾದಕ, ಅಂಬೇಡ್ಕರ್ ಚಿಂತನೆಯಯಲ್ಲಿ ದೇಶದ ಸರ್ವ ಧರ್ಮದ ಜನರನ್ನು ಒಗ್ಗೂಡಿಸಿ ಜಾತ್ಯತೀತ ರಾಷ್ಟ್ರವನ್ನು ಕಟ್ಟಲು ಪಣ ತೊಟ್ಟಿದ್ದ ನಮ್ಮೆಲ್ಲರ ನೆಚ್ಚಿನ ವಿಚಾರಧಾರೆಯ ನಾಯಕ ಮಹೇಂದ್ರ ಕುಮಾರ್ ಕೊಪ್ಪಅವರ ನಿಧನವು ಜಾತ್ಯತೀತ ಪರಿಕಲ್ಪನೆಯ ಎಲ್ಲರಿಗೂ ತುಂಬಲಾರದ ನಷ್ಟ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪಸ್ಥಾಪಿತ )ದ.ಕ. ಜಿಲ್ಲಾ ಸಮಿತಿಯ ಸಂಚಾಲಕ ರಘು ಕೆ. ಎಕ್ಕಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News