ಇಫ್ತಾರ್‌ಗೆ ಲಾಕ್‌ಡೌನ್ ಸಡಿಲಿಕೆಗೆ ಯುನಿವೆಫ್ ಕರ್ನಾಟಕ ಮನವಿ
ಮಂಗಳೂರು, ಎ.25: ಕೊರೋನ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಅಳವಡಿಸಿರುವ ಲಾಕ್‌ಡೌನ್‌ನ್ನು ಪವಿತ್ರ ರಮಝಾನ್ ತಿಂಗಳ ಇಫ್ತಾರ್ ಸಂದರ್ಭ ಸಡಿಲಿಕೆ ಮಾಡುವಂತೆ ಯುನಿವೆಫ್ ಕರ್ನಾಟಕ ಶನಿವಾರ ದ.ಕ.ಜಿಲ್ಲಾಧಿಕಾರಿಗೆ ಮನವಿ ಮಾಡಿದೆ.
ಪ್ರಸಕ್ತ ಬೆಳಗ್ಗೆ 7 ರಿಂದ 12 ಗಂಟೆವರೆಗಿನ ಸಮಯದಲ್ಲಿ ಅಗತ್ಯ ವಸ್ತುಗಳ ಖರೀದಿ ಮತ್ತು ಮಾರಾಟಕ್ಕೆ ಅವಕಾಶ ಮಾಡಿಕೊಟ್ಟರೂ ಕೂಡ ರಮಝಾನ್‌ನಲ್ಲಿ ಸ್ವಲ್ಪ ಸಡಿಲಿಕೆ ಮಾಡಬೇಕಿದೆ. ಸಾಮಾನ್ಯವಾಗಿ ಮುಸ್ಲಿಮರು ರಮಝಾನ್‌ನಲ್ಲಿ ಕೆಲವೊಂದು ಆಹಾರ ಪದಾರ್ಥಗಳನ್ನು ಮಧ್ಯಾಹ್ನದ ಬಳಿಕ ತಯಾರಿಸಲ್ಪಟ್ಟು ಮಾರಾಟ ಮಾಡುತ್ತಾರೆ. ಆದರೆ ಲಾಕ್‌ಡೌನ್‌ನಿಂದಾಗಿ ಅದು ಸಾಧ್ಯವಾಗುತ್ತಿಲ್ಲ. ಹಾಗಾಗಿ ಪವಿತ್ರ ರಮಝಾನ್‌ನಲ್ಲಿ ಸಂಜೆ 4ರಿಂದ 6ರವರೆಗೆ ಮಾರಾಟ ಹಾಗೂ ಖರೀದಿಗೆ ಹೆಚ್ಚುವರಿ ಅವಕಾಶ ಮಾಡಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಜಿಲ್ಲಾಡಳಿತದ ನಿರ್ದೇಶನಗಳನ್ನು ಮಸೀದಿಯ ಧ್ವನಿವರ್ಧಕಗಳ ಮೂಲಕ ಘೋಷಿಸಿ, ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸುವ ಭರವಸೆಯನ್ನು ಕೂಡ ಈ ಮೂಲಕ ಯುನಿವೆಫ್ ನೀಡಬಯಸುತ್ತದೆ ಎಂದು ನಿಯೋಗ ತಿಳಿಸಿದೆ.
ಈ ಸಂದರ್ಭ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ, ಖಾಲಿದ್ ಯು.ಕೆ. ಮತ್ತು ಸೈಫುದ್ದೀನ್, ಅಬ್ದುಲ್ಲಾ ಪಾರೆ ಉಪಸ್ಥಿತಿತರಿದ್ದರು.