ಸ್ಥಳೀಯ ಅಂಗಡಿಗಳು ಸಮಾಜದ ಬೆನ್ನೆಲುಬು: ಆನಂದ್ ಮಹೀಂದ್ರಾ
ಹೊಸದಿಲ್ಲಿ, ಎ.25: ವಸತಿ ಸಮುಚ್ಛಯದಲ್ಲಿರುವ ಮಾಲ್‌ಗಳನ್ನು ಹೊರತುಪಡಿಸಿ ಸ್ಥಳೀಯ ಅಂಗಡಿಗಳನ್ನು ಶನಿವಾರದಿಂದ ತೆರೆಯಲು ಅವಕಾಶ ನೀಡಿದ ಕೇಂದ್ರ ಸರಕಾರದ ನಿರ್ಧಾರವನ್ನು ಸ್ವಾಗತಿಸಿರುವ ಉದ್ಯಮಿ ಆನಂದ್ ಮಹೀಂದ್ರಾ, ಸ್ಥಳೀಯ ಅಂಗಡಿ, ಮುಂಗಟ್ಟುಗಳು ಸಮಾಜದ ಬೆನ್ನೆಲುಬಾಗಿದೆ ಎಂದಿದ್ದಾರೆ.
ಸ್ಥಳೀಯ ಅಂಗಡಿಗಳು ಲಾಕ್‌ಡೌನ್‌ನ ಆರ್ಥಿಕ ಒತ್ತಡಕ್ಕೆ ಹೆಚ್ಚು ಗುರಿಯಾಗುತ್ತವೆ. ಈ ಅಂಗಡಿಗಳ ಮರು ಆರಂಭದಿಂದ ಅವು ಅಸ್ತಿತ್ವದಲ್ಲಿರುವ ಅವಕಾಶ ಹೆಚ್ಚುತ್ತದೆ ಮತ್ತು ನಮ್ಮ ಮನೋಬಲವೂ ವೃದ್ಧಿಸುತ್ತದೆ. ಶೀಘ್ರವೇ ಹೋಂ ಡೆಲಿವರಿ(ಮನೆ ಬಾಗಿಲಿಗೇ ಪೂರೈಕೆ)ಗೂ ಅವಕಾಶ ಸಿಗಬಹುದು ಎಂಬ ವಿಶ್ವಾಸವಿದೆ ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.
ಶುಕ್ರವಾರ ರಾತ್ರಿ ಕೇಂದ್ರ ಸರಕಾರ ಹೊರಡಿಸಿರುವ ಆದೇಶದಲ್ಲಿ ಮಾಸ್ಕ್, ಕೈಗವಚ ಮತ್ತು ಸುರಕ್ಷಿತ ಅಂತರದ ನಿಯಮ ಪಾಲಿಸಿ ಅಂಗಡಿಗಳನ್ನು ಪುನರಾರಂಭಿಸಬಹುದು. ಆದರೆ ಕೊರೋನ ಹಾಟ್‌ಸ್ಪಾಟ್ ಪ್ರದೇಶ ಮತ್ತು ನಿರ್ಬಂಧಿತ ವಲಯಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ತಿಳಿಸಲಾಗಿದೆ. ಮುಂಬೈಯಲ್ಲಿ ಶನಿವಾರ ಬೆಳಿಗ್ಗೆ ಕೆಲವು ಅಂಗಡಿಗಳನ್ನು ತೆರೆದಿದ್ದರೂ ಲಾಕ್‌ಡೌನ್ ಆದೇಶದಲ್ಲಿ ಯಾವುದೇ ವಿನಾಯಿತಿ ನೀಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಪರಿಸ್ಥಿತಿಯ ಪರಾಮರ್ಶೆ ನಡೆಸಿದ ಬಳಿಕವಷ್ಟೇ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗುವುದು ಎಂದು ಉತ್ತರಪ್ರದೇಶ, ದಿಲ್ಲಿ ಮತ್ತು ಅಸ್ಸಾಂ ಸರಕಾರಗಳು ಸ್ಪಷ್ಟಪಡಿಸಿವೆ.