ಉ.ಪ್ರದೇಶ: ಜೂನ್ 30ರವರೆಗೆ ಸಾರ್ವಜನಿಕ ಸಭೆಗೆ ಅವಕಾಶವಿಲ್ಲ: ಆದಿತ್ಯನಾಥ್ ಘೋಷಣೆ

Update: 2020-04-25 15:01 GMT

ಲಕ್ನೊ, ಎ.25: ರಾಜ್ಯದಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣ ತೀವ್ರವಾಗಿ ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್, ಜೂನ್ 30ರವರೆಗೆ ರಾಜ್ಯದಲ್ಲಿ ಸಾರ್ವಜನಿಕ ಸಭೆಗೆ ಅವಕಾಶವಿಲ್ಲ ಎಂದು ಹೇಳಿದ್ದಾರೆ.

ರಾಜಕೀಯ ಪಕ್ಷಗಳ ರ್ಯಾಲಿ, ಸಾರ್ವಜನಿಕ ಸಭೆಯ ಮೇಲೆ ಈ ಆದೇಶ ಪರಿಣಾಮ ಬೀರಲಿದೆ. ರಾಜ್ಯದಲ್ಲಿ ಕೊರೋನ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತು ಕೊರೋನ ಹಾವಳಿಯನ್ನು ನಿಯಂತ್ರಣದಲ್ಲಿ ಇರಿಸುವ ಉದ್ದೇಶದಿಂದ ಈ ಆದೇಶ ಹೊರಡಿಸಲಾಗಿದೆ ಎಂದು ಆದಿತ್ಯನಾಥ್ ಹೇಳಿದ್ದಾರೆ.

 ಮಾಲ್‌ಗಳು ಹಾಗೂ ಶಾಪಿಂಗ್ ಕಾಂಪ್ಲೆಕ್ಸ್‌ಗಳನ್ನು ಹೊರತುಪಡಿಸಿ ಉಳಿದ ಅಂಗಡಿಗಳನ್ನು ಆರಂಭಿಸಲು ಕೇಂದ್ರ ಸರಕಾರ ಅವಕಾಶ ನೀಡಿದ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಕೊರೋನ ವಿರುದ್ಧದ ಕಾರ್ಯಾಚರಣೆಗೆಂದು ರಚಿಸಿರುವ 11 ಸಮಿತಿಗಳ ಅಧ್ಯಕ್ಷರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಆದಿತ್ಯನಾಥ್ ಈ ನಿರ್ಧಾರ ಪ್ರಕಟಿಸಿದ್ದಾರೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಸಿಕ್ಕಿಬಿದ್ದಿರುವ ಉತ್ತರಪ್ರದೇಶ ಮೂಲದ ಕಾರ್ಮಿಕರನ್ನು ಹಂತ ಹಂತವಾಗಿ ವಾಪಾಸು ಕರೆತರಲಾಗುವುದು ಎಂದು ಆದಿತ್ಯನಾಥ್ ಶುಕ್ರವಾರ ಘೋಷಿಸಿದ್ದರು.

 ಈ ಮುನ್ನ ಸುಮಾರು 4 ಲಕ್ಷ ವಲಸಿಗ ಕಾರ್ಮಿಕರನ್ನು ರಾಜ್ಯಕ್ಕೆ ಮರಳಿ ಕರೆತರಲು ಉತ್ತರಪ್ರದೇಶ ಸರಕಾರ 1,000 ಬಸ್‌ಗಳನ್ನು ಕಳುಹಿಸಿತ್ತು. ಅಲ್ಲದೆ ರಾಜಸ್ತಾನದ ಕೋಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದ ಉತ್ತರಪ್ರದೇಶದ ವಿದ್ಯಾರ್ಥಿಗಳನ್ನು ಕರೆತರಲು ಸುಮಾರು 300 ಬಸ್ಸುಗಳನ್ನು ಕಳುಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News