×
Ad

​ಲಾಕ್‍ಡೌನ್ ಎಫೆಕ್ಟ್; ಆಟೋ ರಿಕ್ಷಾದಲ್ಲೇ ಹೆರಿಗೆ; ತಾಯಿ ಮಗು ಸೇಫ್

Update: 2020-04-25 21:00 IST

ಭಟ್ಕಳ: ದೇಶಾದ್ಯಂತ ಲಾಕ್‍ಡೌನ್ ಇದ್ದು ಸರ್ಕಾರ ಹಾಗೂ ವಿವಿಧ ಸಂಘಸಂಸ್ಥೆಗಳು ಜನರಿಗೆ ತೊಂದರೆಯಾಗದಂತೆ ಎಲ್ಲ ರೀತಿಯ ಸವಲತ್ತುಗಳ ನಡುವೆಯೂ ಸರ್ಕಾರಿ ಸೇವೆಗಳ ಕುರಿತು ಸರಿಯಾದ ಮಾಹಿತಿ ಇರದ ಅದೆಷ್ಟೋ ಜನರು ತೊಂದರೆಯನ್ನು ಅನುಭವಿಸುತ್ತಿದ್ದಾರೆ.

ಶುಕ್ರವಾರ ಭಟ್ಕಳ ತಾಲೂಕಿನ ಹೆಬಳೆ ಪಂಚಾಯತ್ ವ್ಯಾಪ್ತಿಯ ಜಾಮಿಯಾಬಾದ್ ಪ್ರದೇಶದ 9ತಿಂಗಳು ತುಂಬು ಗರ್ಭೀಣಿ ಹೆರಿಗೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಹೋಗಲು ಸುಮಾರು 3ಗಂಟೆ ಕಾದರೂ 108 ಅಂಬ್ಯುಲನ್ಸ್ ಬರದೆ ತೊಂದರೆಯನ್ನು ಅನುಭವಿಸಿ ಕೊನೆಗೂ ಯಾರೊ ಪರಿಚಿತರ ಆಟೋ ರಿಕ್ಷಾ ಮೂಲಕ ಸರ್ಕಾರಿ ಆಸ್ಪತ್ರೆಯ ಶಿರಾಲಿಗೆ ಹೋಗಿದ್ದು ಆಸ್ಪತ್ರೆಯ ಆವರಣದಲ್ಲೆ ಆಟೋದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಗಿ ತಿಳಿದುಬಂದಿದೆ.

ಭಟ್ಕಳ ಸರ್ಕಾರಿ ಆಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯನ್ನಾಗಿ ಪರಿವರ್ತಿಸಿದ್ದು ಪ್ರತಿಯೊಂದಕ್ಕೂ ಭಟ್ಕಳದ ಜನರು ಶಿರಾಲಿಯ ಸರ್ಕಾರಿ ಆಸ್ಪತ್ರೆಯನ್ನು ಅವಲಂಬಿಸಬೇಕಾಗಿದೆ. ಇಡೀ ತಾಲೂಕಿನಲ್ಲಿ ಸರ್ಕಾರಿ ಹಾಗೂ ಖಾಸಗಿ ಸೇರಿ 6 ಅಂಬ್ಯುಲನ್ಸ್ ಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು ಸಧ್ಯ ಕೋವಿಡ್ ಗಾಗಿ ಎಲ್ಲ ಅಂಬ್ಯುಲನ್ಸ್ ಗಳು ಬಳಕೆಯಾಗುತ್ತಿವೆ. 108 ಅಂಬ್ಯುಲನ್ಸ್ ಕೂಡ ಕೋವಿಡ್ ಸೇವೆಯಲ್ಲಿದೆ ಎನ್ನಲಾಗಿದೆ. ಹಾಗಾಗಿ ಸಾಮಾನ್ಯ ಜನರ ಕಷ್ಟಕ್ಕೆ ಸ್ಪಂದಿಸಲು ತಾಲೂಕಾಡಳಿತ ಕೆಲ ಆಟೋ ರಿಕ್ಷಾ ಗಳಿಗೆ ಪರವಾನಿಗೆ ಕಫ್ರ್ಯೂ ಪಾಸ್ ನೀಡಲಾಗಿದ್ದು ಹೆಲ್ಪ್ ಲೈನ್ ಮೂಲಕ ಆಟೋ ರಿಕ್ಷಾವನ್ನು ಕರೆಸಿಕೊಳ್ಳುವ ವ್ಯವಸ್ಥೆಯಿದೆ. ಆದರೆ ಇದರ ಅರಿವು ಸಾಮಾನ್ಯರಿಗೆ ಇಲ್ಲ ಎನ್ನಲಾ ಗಿದೆ. ಈ ಕುರಿತಂತೆ ವ್ಯಾಪಕ ಪ್ರಚಾರ ಇರದ ಕಾರಣ ಸಾಮಾನ್ಯರಿಗೆ ಇದರ ಬಗ್ಗೆ ಮಾಹಿತಿ ಲಭ್ಯವಾಗದಿರರು ಕಾರಣವಾಗಿದೆ.

ಆಸ್ಪತ್ರೆಯ ಆವರಣದಲ್ಲಿ ಹೆರಿಗೆಯಾದಲ್ಲ ಮಹಿಳೆಗೆ ಮಧ್ಯಾಹ್ನ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣ 108 ಅಂಬ್ಯುಲೆನ್ಸ್ ಗೆ ಕರೆ ಮಾಡಿದರೂ ಮಧ್ಯಾಹ್ನ 3 ಗಂಟೆಯಾದರೂ ಅಂಬ್ಯುಲೆನ್ಸ್ ಪತ್ತೆ ಇರಲಿಲ್ಲ. ಈ ನಡುವೆ ಹೊಟ್ಟೆ ನೋವು ಹೆಚ್ಚಾಗಿದ್ದರಿಂದ ಪತಿಯೇ ರಸ್ತೆಗೆ ಎತ್ತಿಕೊಂಡು ಬಂದು, ಆಟೊ ರಿಕ್ಷಾವೊಂದಕ್ಕೆ ಕರೆ ಮಾಡಿದ್ದಾರೆ. ಆದರೆ, ನಮ್ಮ ಬಳಿ ಪಾಸ್ ಇಲ್ಲವೆಂದು ಎಂದು ಹೇಳಿ ಚಾಲಕರು ಆಸ್ಪತ್ರೆಗೆ ಬರಲು ನಿರಾಕರಿಸಿದರು.

ನಂತರ ಅಲ್ಲಿನ ಸ್ಥಳೀಯ ಆಟೋ ಚಾಲಕನ ಸಹಾಯದಿಂದ ಶಿರಾಲಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆಸ್ಪತ್ರೆಯ ಆವರಣದಲ್ಲಿ ಆಟೊದಲ್ಲೇ ಹೆರಿಗೆಯಾಗಿದ್ದು, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈಕೆಗೆ ಇದು ಮೂರನೆಯ ಹೆರಿಗೆಯಾಗಿದ್ದು, ಸದ್ಯ ತಾಯಿ, ಮಗು ಇಬ್ಬರೂ ಶಿರಾಲಿ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯವಾಗಿದ್ದಾರೆ.

ತುರ್ತಾಗಿ ಸಿಗದ ಅಂಬ್ಯುಲೆನ್ಸ್: ಸದ್ಯ ಕೊರೋನಾ ಹಿನ್ನೆಲೆಯಲ್ಲಿ ಪಟ್ಟಣದ 108 ಅಂಬ್ಯುಲೆನ್ಸ್ ಅನ್ನು ಕೊರೋನಾ ಸೋಂಕಿತರ/ಶಂಕಿತರ ಸಾಗಾಟಕ್ಕೆ ಬಳಸಲಾಗುತ್ತಿದೆ. ಇದರಿಂದ ಹೆರಿಗೆ ಸೇರಿದಂತೆ ತುರ್ತು ಆರೋಗ್ಯ ಸಮಸ್ಯೆಗೆ 108 ಅಂಬ್ಯುಲೆನ್ಸ್ ಲಭ್ಯವಾಗುತ್ತಿಲ್ಲ. ತಾಲೂಕಾ ಡಳಿತ ಇಂತಹ ತುರ್ತು ವ್ಯವಸ್ಥೆ ಕಲ್ಪಿಸುವಲ್ಲಿ ಇನ್ನಷ್ಟು ಗಮನ ಹರಿಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News