ಕೊರೋನಗೆ ಬಲಿಯಾದ ವೈದ್ಯರ ವಿಧಿವತ್ತಾದ ದಫನ: ಕೋರ್ಟ್ ಮೊರೆ ಹೋಗಲು ಪತ್ನಿ ನಿರ್ಧಾರ
ಚೆನ್ನೈ,ಎ.25: ಕೊರೋನ ವೈರಸ್ ಪೀಡಿತರಿಗೆ ಚಿಕಿತ್ಸೆ ನೀಡುತ್ತಲೇ, ಸೋಂಕಿಗೆ ಬಲಿಯಾದ ಚೆನ್ನೈ ಮೂಲದ ನರರೋಗ ತಜ್ಞ ಡಾ. ಸೈಮನ್ ಹರ್ಕ್ಯೂಲಿಸ್ ಅವರ ಮೃತದೇಹದ ಅವಶೇಷಗಳನ್ನು ವಿಧಿವತ್ತಾಗಿ ದಫನ ಮಾಡಲು ಕಾನೂನಿನ ಮೊರೆ ಹೋಗಲು ಸಿದ್ಧರಿರುವುದಾಗಿ ಅವರ ಪತ್ನಿ ತಿಳಿಸಿದ್ದಾರೆ.
ತಾನು ಚಿಕಿತ್ಸೆ ನೀಡಿದ್ದ ರೋಗಿಗಳಿಂದ ಕೊರೋನ ಸೋಂಕು ತಗಲಿ ಮೃತಪಟ್ಟ 55 ವರ್ಷ ವಯಸ್ಸಿನ ವೈದ್ಯ ಡಾ. ಸೈಮನ್ ಹರ್ಕ್ಯುಲಿಸ್ ಅವರ ಪಾರ್ಥಿವ ಶರೀರವನ್ನು ಸ್ಥಳೀಯರ ವಿರೋಧದ ನಡುವೆ ಯಾವುದೇ ವಿಧಿವಿಧಾನಗಳನ್ನು ಅನುಸರಿಸದೆ ಅವಸರವಸರವಾಗಿ ದಫನ ಮಾಡಲಾಗಿತ್ತು.
ಪತಿಯ ವಿಧ್ಯುಕ್ತ ಅಂತ್ಯಸಂಸ್ಕಾರ ಕೋರಿ ನ್ಯಾಯಾಲಯದ ಮೆಟ್ಟಲೇರುವುದು ಈಗ ತನ್ನ ಮುಂದೆ ಇರುವ ಒಂದು ಆಯ್ಕೆಯಾಗಿದೆ ಎಂದು ಆಂದಿ ಸೈಮನ್ ತಿಳಿಸಿದ್ದಾರೆ. ‘‘ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಓ)ಯ ಪ್ರಕಾರ ಮೃತ ವ್ಯಕ್ತಿಯ ದೇಹದಲ್ಲಿ ಕೊರೋನ ವೈರಸ್ ಕೇವಲ ಮೂರು ತಾಸು ಜೀವಂತವಿರುತ್ತದೆ. ಆ ಪ್ರಕಾರ, ನನ್ನ ಪತಿಯ ಮೃತದೇಹವನ್ನು ಚೆನ್ನೈನ ವೆಲಂಗಾಡು ಸ್ಮಶಾನದಿಂದ ಹೊರತೆಗೆದು, ಕಿಲಾಪಾವುಕ್‌ನ ಸ್ಮಶಾನದಲ್ಲಿ ದಫನ ಮಾಡಬಹುದಾಗಿದೆ’’ ಎಂದು ಆಕೆ ಆಂಗ್ಲ ಸುದ್ದಿವಾಹಿನಿಗೆ ತಿಳಿಸಿದ್ದಾರೆ.
ರಾಜ್ಯಕ್ಕಾಗಿ ಉತ್ಕೃಷ್ಚ ಸೇವೆ ಸಲ್ಲಿಸಿದ ತನ್ನ ಪತಿಯ ಅಂತ್ಯಸಂಸ್ಕಾರವನ್ನು ಯೋಗ್ಯ ರೀತಿಯಲ್ಲಿ ನಡೆಸಲಾಗಿಲ್ಲವೆಂದು ಅವರು ವಿಷಾದಿಸಿದರು ಮತ್ತು ಅವರ ಇಚ್ಚೆಯಂತೆ ಅಂತ್ಯಸಂಸ್ಕಾರ ನಡೆಯಬೇಕೆಂದು ಅವರು ತಿಳಿಸಿದರು.
ಸೋಂಕು ಹರಡಬಹುದೆಂಬ ಭೀತಿಯಿಂದ ಸ್ಥಳೀಯ ನಿವಾಸಿಗಳ ಗುಂಪೊಂದು ಚೆನ್ನೈ ನಗರದ ವೆಲಂಗಾಡುವಿನ ಸ್ಮಶಾನದಲ್ಲಿ ಅವರ ಅಂತ್ಯಸಂಸ್ಕಾರ ನಡೆಸುವುದನ್ನು ವಿರೋಧಿಸಿತ್ತು ಮತ್ತು ಅವರ ಮೃತದೇಹವನ್ನು ತರುತ್ತಿದ್ದ ಆ್ಯಂಬುಲೆನ್ಸ್ ಮೇಲೆ ದಾಳಿ ನಡೆಸಿತ್ತು. ಆನಂತ ಅವರ ಮೃತದೇಹವನ್ನು ಯಾವುದೇ ವಿಧಿವಿಧಾನಗಳಿಲ್ಲದೆ ಅವಸರವಸರವಾಗಿ ದಫನಗೊಳಿಸಲಾಗಿತ್ತು.
ತನ್ನ ಪತಿಯ ದಫನವನ್ನು ವಿಧಿವತ್ತಾಗಿ ನಡೆಸಬೇಕೆಂದು ಕೋರಿ ಆನಂದಿ ಸೈಮನ್ ಅವರು ಮುಖ್ಯಮಂತ್ರಿ ಕೆ. ಪಳನಿಸ್ವಾಮಿಗೆ ಅವರು ಮನವಿ ಮಾಡಿದ್ದರು. ಆದರೆ ಚೆನ್ನೈ ಮಹಾನಗರಪಾಲಿಕೆಯ ಆಯುಕ್ತರು ಈ ಬೇಡಿಕೆಯನ್ನು ತಳ್ಳಿಹಾಕಿದ್ದಾರೆ. ಡಾ.ಸೈಮನ್ ಅವರ ಅವಶೇಷಗಳನ್ನು ಹೊರತೆಗೆದು ಮತ್ತೆ ಅದನ್ನು ಕಿಲಾಪಾವುಕ್‌ನ ಸ್ಮಶಾನದಲ್ಲಿ ದಫನಮಾಡುವುದು ಸುರಕ್ಷಿತವಲ್ಲವೆಂದು ಅವರು ತಿಳಿಸಿದ್ದಾರೆ.
ಡಾ. ಸೈಮನ್ ಅವರು ಚೆನ್ನೈನ ಚೆಟ್‌ಪೇಟೆ ಎಂಬಲ್ಲಿ ನ್ಯೂಹೋಪ್ ಎಂಬ ಆಸ್ಪತ್ರೆಯನ್ನು ನಡೆಸುತ್ತಿದ್ದರು. ಕೊರೋನ ವೈರಸ್ ರೋಗಿಗಳಿಂದ ಸೋಂಕಿಗೆ ಒಳಗಾದ ಬಳಿಕ ಅವರು ಸುಮಾರು 15 ದಿನಗಳ ಕಾಲ ಚಿಕಿತ್ಸೆ ಪಡೆದಿದ್ದ ಅವರು ಆನಂತರ ಕೊನೆಯುಸಿರೆಳೆದರು.