ಕೋವಿಡ್-19 ಔಷಧದ ಅಭಿವೃದ್ಧಿ ವೇಗ ಹೆಚ್ಚಿಸಲು ಜಾಗತಿಕ ನಾಯಕರ ಪಣ
ಜಿನೀವ (ಸ್ವಿಟ್ಸರ್‌ಲ್ಯಾಂಡ್), ಎ. 25: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ)ಯ ಆಶ್ರಯದಲ್ಲಿ ಕೋವಿಡ್-19 ಸಾಂಕ್ರಾಮಿಕ ಕಾಯಿಲೆಗೆ ಸಂಬಂಧಿಸಿದ ಪರೀಕ್ಷೆಗಳು, ಔಷಧಿಗಳು ಮತ್ತು ಲಸಿಕೆಗಳ ಕುರಿತ ಕೆಲಸಗಳನ್ನು ಹೆಚ್ಚಿಸಲು ಜಾಗತಿಕ ನಾಯಕರು ಶುಕ್ರವಾರ ಪ್ರಮಾಣ ಮಾಡಿದ್ದಾರೆ. ಆದರೆ, ಈ ಕಾರ್ಯಕ್ರಮದಲ್ಲಿ ಅಮೆರಿಕ ಪಾಲ್ಗೊಂಡಿಲ್ಲ.
ಮಾರಕ ಸಾಂಕ್ರಾಮಿಕವನ್ನು ತೊಲಗಿಸುವ ‘ಮಹತ್ವದ ಸಹಯೋಗ’ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ ಬಣ್ಣಿಸಿರುವ ಕಾರ್ಯಕ್ರಮದಲ್ಲಿ ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್, ಜರ್ಮನಿ ಚಾನ್ಸಲರ್ ಆ್ಯಂಜೆಲಾ ಮರ್ಕೆಲ್ ಮತ್ತು ದಕ್ಷಿಣ ಆಫ್ರಿಕ ಅಧ್ಯಕ್ಷ ಸಿರಿಲ್ ರಾಮಫೋಸ ಮುಂತಾದವರು ವೀಡಿಯೊ ಲಿಂಕ್ ಮೂಲಕ ಭಾಗವಹಿಸಿದರು.
ನೋವೆಲ್-ಕೊರೋನ ವೈರಸ್‌ನಿಂದ ಉಂಟಾಗುವ ಶ್ವಾಸಕೋಶದ ಕಾಯಿಲೆ ಕೋವಿಡ್-19ನ್ನು ತಡೆಯುವ, ಪತ್ತೆಹಚ್ಚುವ ಹಾಗೂ ಅದಕ್ಕೆ ಚಿಕಿತ್ಸೆ ನೀಡುವ ಪರಿಣಾಮಕಾರಿ ಔಷಧಿಗಳು, ಪರೀಕ್ಷೆಗಳು ಮತ್ತು ಲಸಿಕೆಗಳನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಈ ಸಹಯೋಗವನ್ನು ಬೆಳೆಸಲಾಗಿದೆ. ಕಾಯಿಲೆಯ ಚಿಕಿತ್ಸೆಯಲ್ಲಿ ಶ್ರೀಮಂತ ಮತ್ತು ಬಡವರಿಗೆ ಸಮಾನ ಆದ್ಯತೆಯನ್ನು ಖಾತರಿಪಡಿಸುವುದು ಕೂಡ ಇದರ ಪ್ರಮುಖ ಉದ್ದೇಶಗಳಲ್ಲೊಂದಾಗಿದೆ.
‘‘ನಾವು ಸಮಾನ ಬೆದರಿಕೆಯೊಂದನ್ನು ಎದುರಿಸುತ್ತಿದ್ದೇವೆ. ಅದನ್ನು ನಾವು ಸಮಾನ ಧ್ಯೇಯದಿಂದ ಮಾತ್ರ ಸೋಲಿಸಬಹುದಾಗಿದೆ’’ ಎಂದು ವೀಡಿಯೊ ಕಾನ್ಫರೆನ್ಸ್ ಮೂಲಕ ಸಭೆಯನ್ನು ಉದ್ಘಾಟಿಸಿದ ಬಳಿಕ ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಹೇಳಿದರು.
‘‘ಚಿಕಿತ್ಸೆಗಳು ಲಭ್ಯವಿದ್ದರೂ ಅವುಗಳು ಎಲ್ಲರಿಗೂ ಸಮಾನವಾಗಿ ಲಭಿಸುವುದಿಲ್ಲ ಎನ್ನುವುದನ್ನು ನಮಗೆ ಅನುಭವ ಕಲಿಸಿದೆ. ಹಾಗೆ ಆಗಲು ನಾವು ಬಿಡಬಾರದು’’ ಎಂದು ಅವರು ನುಡಿದರು.