×
Ad

ಉಡುಪಿ: ಸತತ ಎರಡನೇ ದಿನವೂ ಇಲ್ಲದ ಕೊರೋನ ಕೇಸ್

Update: 2020-04-26 19:56 IST

ಉಡುಪಿ, ಎ.26: ಉಡುಪಿ ಜಿಲ್ಲೆ ಸತತ 28ನೇ ದಿನ ನೋವೆಲ್ ಕೊರೋನ ವೈರಸ್‌ನ (ಕೋವಿಡ್-19) ಪಾಸಿಟಿವ್ ಪ್ರಕರಣಗಳಿಲ್ಲದೇ ಕಳೆದಿದೆ. ಮಾ.29ರಂದು ಮೂರನೇ ಪ್ರಕರಣ ವರದಿಯಾದ ಬಳಿಕ ಇದುವರೆಗೆ ಜಿಲ್ಲೆಯಲ್ಲಿ ಯಾವುದೇ ಸೋಂಕಿತ ವ್ಯಕ್ತಿ ಪತ್ತೆಯಾಗಿಲ್ಲ.

ಅಲ್ಲದೇ ಸತತ ಎರಡನೇ ದಿನವೂ ಕೊರೋನಕ್ಕೆ ಸಂಬಂಧಪಟ್ಟ ಯಾವುದೇ ಕೇಸು ಕಂಡುಬರದಿರುವುದು ಜಿಲ್ಲೆಯ ಮಟ್ಟಿಗೆ ಒಳ್ಳೆಯ ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ‌ಚಂದ್ರ ಸೂಡ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಸತತ ಎರಡನೇ ದಿನವಾದ ರವಿವಾರವೂ ಕೊರೋನ ಗುಣಲಕ್ಷಣ ಹೊಂದಿರುವ ಶಂಕಿತರು ಅಥವಾ ಅವರ ಸಂಪರ್ಕಿತ ವ್ಯಕ್ತಿಗಳು ಐಸೋಲೇಷನ್ ವಾರ್ಡಿಗೆ ಸೇರ್ಪಡೆಗೊಂಡಿಲ್ಲ ಹಾಗೂ ಸೋಂಕು ಪರೀಕ್ಷೆಗಾಗಿ ಕಳುಹಿಸಿದ ಗಂಟಲು ದ್ರವ ಮಾದರಿಯಲ್ಲಿ ಕೊರೋನ ಶಂಕಿತರಾಗಲೀ, ಕೊರೋನ ಶಂಕಿತರ ಸಂಪರ್ಕಕ್ಕೆ ಬಂದವರ ಮಾದರಿಯಾಗಲಿ ಸೇರಿಲ್ಲ. ಈ ಮೂಲಕ ಜಿಲ್ಲೆ ಕೊರೋನ ವೈರಸ್ ವಿಮುಕ್ತಿಯತ್ತ ಹೊಸ ಆಶಾವಾದ ಹೆಜ್ಜೆ ಇರಿಸಿೆ ಎಂದು ಡಿಎಚ್‌ಓ ಅವರು ನುಡಿದರು.

ರವಿವಾರ ಹೊಸದಾಗಿ ಐಸೋಲೇಷನ್ ವಾರ್ಡಿಗೆ ಸೇರ್ಪಡೆಗೊಂಡ ಒಟ್ಟು ಎಂಟು ಮಂದಿಯಲ್ಲಿ ತಲಾ ನಾಲ್ವರು ಪುರುಷ ಮತ್ತು ಮಹಿಳೆ ಯರಿದ್ದು, ಇವರಲ್ಲಿ 7 ಮಂದಿ ಉಸಿರಾಟದ ತೊಂದರೆಯಿಂದ ಬಳಲುತಿದ್ದರೆ, ಉಳಿದ ಒಬ್ಬ ಶೀತಜ್ವರದ ಬಾಧೆಗಾಗಿ ವಾರ್ಡಿಗೆ ಸೇರ್ಪಡೆಗೊಂಡಿ ದ್ದಾರೆ. ಅದೇ ರೀತಿ ಇಂದು ಸೋಂಕಿತರ ಪತ್ತೆಗಾಗಿ ಪಡೆಯಲಾದ 10 ಗಂಟಲು ದ್ರವದ ಮಾದರಿ ಯಲ್ಲಿ ನಾಲ್ವರು ಉಸಿರಾಟ ತೊಂದರೆ ಯಲ್ಲಿದ್ದವರು, ಐವರು ಶೀತಜ್ವರ ಬಾಧಿತ ರು ಹಾಗೂ ಒಬ್ಬ ಕೊರೋನ ಹಾಟ್‌ಸ್ಪಾಟ್ ಪ್ರದೇಶದಿಂದ ಬಂದವರದ್ದಾಗಿದೆ. ಇವರಲ್ಲೂ ಕೊರೋನ ಶಂಕಿತರಾಗಲೀ, ಅವರ ಸಂಪರ್ಕಕ್ಕೆ ಬಂದವರಾಗಲಿ ಸೇರಿಲ್ಲ ಎಂದು ಡಾ.ಸೂಡ ತಿಳಿಸಿದರು.

ರವಿವಾರ ಬಾಕಿ ಇರುವ 31 ಮಂದಿಯಲ್ಲಿ ಯಾರೊಬ್ಬರ ಮಾದರಿಯ ಫಲಿತಾಂಶ ಬಂದಿಲ್ಲ. ಹೀಗಾಗಿ ಇಂದು ಪರೀಕ್ಷೆಗೆ ಕಳುಹಿಸಿದ 10 ಮಾದರಿಗಳು ಸೇರಿದಂತೆ ಒಟ್ಟು 41ರ ವರದಿ ಇನ್ನು ಬರಬೇಕಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲೆಯಿಂದ ಇದುವರೆಗೆ ಒಟ್ಟು 1053 ಮಂದಿಯ ಸ್ಯಾಂಪಲ್‌ಗಳನ್ನು ಸೋಂಕಿನ ಪರೀಕ್ಷೆಗಾಗಿ ಪಡೆಯಲಾಗಿದೆ. ಇವುಗಳಲ್ಲಿ 1009 ಮಾದರಿ ನೆಗೆಟಿವ್ ಆಗಿದ್ದು ಉಳಿದ ಮೂರು ಪಾಸಿಟಿವ್ ಆಗಿವೆ. ಆದರೆ ಜಿಲ್ಲೆಯಲ್ಲಿ ಪಾಸಿಟಿವ್ ಬಂದ ಮೂವರು ಯುವಕರೂ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಜಿಲ್ಲೆಯಲ್ಲಿ ಉಸಿರಾಟದ ತೊಂದರೆ, ಹೊರಜಿಲ್ಲೆ, ಹೊರರಾಜ್ಯಗಳಿಂದ ಬಂದವರು ಹಾಗೂ ಕೋವಿಡ್ ಶಂಕಿತರ ಸಂಪರ್ಕಕ್ಕೆ ಬಂದವರು ಸೇರಿದಂತೆ ಇಂದು ಮತ್ತೆ 50 ಮಂದಿ ಹೊಸದಾಗಿ ನೋಂದಣಿಗೊಂಡಿದ್ದಾರೆ. ಈ ಮೂಲಕ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 3336 ಮಂದಿ ತಪಾಸಣೆಗಾಗಿ ನೋಂದಣಿ ಗೊಂಡಂತಾಗಿದೆ. ಇವರಲ್ಲಿ 2016 (ಇಂದು 43) ಮಂದಿ 28 ದಿನಗಳ ನಿಗಾ ಪೂರೈಸಿದ್ದರೆ, 2688 (68) ಮಂದಿ 14 ದಿನಗಳ ನಿಗಾವನ್ನು ಪೂರ್ಣ ಗೊಳಿಸಿದ್ದಾರೆ. ಒಟ್ಟು 556 ಮಂದಿ ಇನ್ನೂ ಹೋಮ್ ಕ್ವಾರಂಟೈನ್ ಹಾಗೂ 36 ಮಂದಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಡಾ. ಸುಧೀರ್‌ಚಂದ್ರ ಸೂಡ ವಿವರಿಸಿದರು.

ಹಸಿರು ವಲಯದ ನಿರೀಕ್ಷೆ

ದೇಶದಲ್ಲಿ ನೋವೆಲ್ ಕೊರೋನ ವೈರಸ್ ಪಿಡುಗು ಪ್ರಾರಂಭಗೊಂಡ ನಂತರ ಮಾ.26ರಂದು ಮೊದಲ ಪಾಸಿಟಿವ್ ಪ್ರಕರಣ ಪತ್ತೆಯಾದ ಉಡುಪಿ ಜಿಲ್ಲೆ ಕಿತ್ತಳೆ ವಲಯದಲ್ಲಿ ಸ್ಥಾನ ಪಡೆದಿತ್ತು. ನಂತರ ಮಾ.29ರಂದು ಎರಡು ಪ್ರಕರಣಗಳು ಪತ್ತೆಯಾದ ಬಳಿಕ ಜಿಲ್ಲೆಯಲ್ಲಿ ಯಾವುದೇ ಹೊಸ ಪ್ರಕರಣ ಪತ್ತೆಯಾಗಿಲ್ಲ.

ಹೀಗಾಗಿ ಸತತ 28 ದಿನ ಯಾವುದೇ ಹೊಸ ಪ್ರಕರಣ ಪತ್ತೆಯಾಗದೇ ಇದ್ದರೆ ಜಿಲ್ಲೆ ಕಿತ್ತಳೆ ವಲಯದಿಂದ ಹಸಿರು ವಲಯಕ್ಕೆ ಭಡ್ತಿ ಪಡೆಯುತ್ತದೆ. ಉಡುಪಿ ಜಿಲ್ಲೆ ಇದೀಗ ಹಸಿರು ವಲಯದಲ್ಲಿರಲು ಅರ್ಹತೆ ಪಡೆದುಕೊಂಡಿದೆ. ಆದರೆ ಘೋಷಣೆಯನ್ನು ಕೇಂದ್ರ ಆರೋಗ್ಯ ಹಾಗೂ ಗೃಹ ಇಲಾಖೆ ಗಳು ಮಾಡಬೇಕಾಗಿದೆ. ಜಿಲ್ಲೆಯ ದಾಖಲೆಗಳನ್ನು ಪರಿಗಣಿಸಿ ಕೆಲವೇ ದಿನಗಳಲ್ಲಿ ಈ ಘೋಷಣೆ ಮಾಡುವ ನಿರೀಕ್ಷೆ ಇದೆ.

ಜಿಲ್ಲೆ ಹಸಿರು ವಲಯಕ್ಕೆ ತೇರ್ಗಡೆಗೊಂಡರೆ ಈಗಿರುವ ವಿನಾಯಿತಿಗೆ ಇನ್ನೂ ಕೆಲವು ವಿನಾಯಿತಿಗಳು ಸೇರ್ಪಡೆಗೊಳ್ಳಲಿವೆ. ಆದರೆ ನಗರ ಪ್ರದೇಶದಲ್ಲಿ ಹೆಚ್ಚಿನ ಬದಲಾವಣೆಗಳು ಇರುವುದಿಲ್ಲ. ಸಾರಿಗೆ, ಮಾಲ್, ಬಿಗ್ ಬಜಾರ್, ಚಿತ್ರ ಮಂದಿರ,ಹವಾನಿಯಂತ್ರಿತ ಅಂಗಡಿ, ಸಂಕೀರ್ಣ ಗಳು ಆರಂಭಗೊಳ್ಳುವ ಸಾಧ್ಯತೆಗಳಿಲ್ಲ. ಜಿಲ್ಲೆಯಲ್ಲಿ ಸಾರಿಗೆ ಸಂಪರ್ಕಗಳು ಸಾಮಾನ್ಯಗೊಂಡ ನಂತರವಷ್ಟೇ ಜನಜೀವನ ಸಾಮಾನ್ಯಗೊಳ್ಳಲು ಸಾಧ್ಯ ಎಂದು ಲಾಕ್‌ಡೌನ್ ನಿಂದ ಮನೆಯಲ್ಲೇ ಕುಳಿತು ಬೇಸರಗೊಂಡಿರುವ ಜನರು ಅಭಿಪ್ರಾಯಪಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News