×
Ad

ಕೇಂದ್ರ ಘೋಷಿಸಿದ ಉಚಿತ ಬೇಳೆಕಾಳು ಯೋಜನೆ ತಲುಪಿದ್ದು ಕೇವಲ 15% ಬಡಕುಟುಂಬಗಳಿಗೆ !

Update: 2020-04-26 20:28 IST

ಹೊಸದಿಲ್ಲಿ, ಎ.26: ಕೊರೋನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಬಡಕುಟುಂಬಗಳಿಗೆ ಘೋಷಿಸಿದ 1 ಕಿ.ಗ್ರಾಂ ಬೇಳೆಕಾಳು ಉಚಿತ ವಿತರಣೆ ಯೋಜನೆಯ ಪ್ರಯೋಜನ ಕೇವಲ 15% ಬಡಕುಟುಂಬಗಳಿಗೆ ಮಾತ್ರ ಲಭಿಸಿದೆ ಎಂದು thewire.in ವರದಿ ಮಾಡಿದೆ.

ಈ ಯೋಜನೆಯಡಿ 19 ಕೋಟಿಗೂ ಹೆಚ್ಚು ಕುಟುಂಬಗಳಿಗೆ ಉಚಿತವಾಗಿ ವಿತರಿಸಲು ಸರಕಾರ ತೆಗೆದಿರಿಸಿದ 1.96 ಲಕ್ಷ ಟನ್‌ ಗಳಷ್ಟು ಬೇಳೆಕಾಳುಗಳಲ್ಲಿ ಇದುವರೆಗೆ ಕೇವಲ 30,000 ಟನ್‌ಗಳಷ್ಟನ್ನು ಮಾತ್ರ ವಿತರಿಸಲಾಗಿದೆ ಎಂದು ಗ್ರಾಹಕ ವ್ಯವಹಾರಗಳ ಇಲಾಖೆಯ ವರದಿ ತಿಳಿಸಿದೆ.

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್‌ನಡಿ ಎಪ್ರಿಲ್‌ನಿಂದ ಮುಂದಿನ ಮೂರು ತಿಂಗಳಾವಧಿಗೆ ದೇಶದ ಎಲ್ಲಾ ಪಡಿತರ ಕಾರ್ಡ್‌ದಾರರಿಗೆ 1 ಕಿ.ಗ್ರಾಂ ಬೇಳೆಕಾಳು ಒದಗಿಸಲಾಗುವುದು ಎಂದು ಮಾರ್ಚ್ 26ರಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು. ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯಡಿಯ ಎಲ್ಲಾ 80 ಕೋಟಿ ಫಲಾನುಭವಿಗಳಿಗೆ ಮೂರು ತಿಂಗಳು ಹೆಚ್ಚುವರಿ 5 ಕಿ.ಗ್ರಾಂ ಅಕ್ಕಿ ಅಥವಾ ಗೋಧಿಯ ಜೊತೆಗೆ ಪ್ರತೀ ಕುಟುಂಬದವರಿಗೂ, ಪ್ರೊಟೀನ್‌ನ ಅಗತ್ಯವನ್ನು ಮನಗಂಡು 1 ಕಿ.ಗ್ರಾಂ ಬೇಳೆಕಾಳು ವಿತರಿಸಲಾಗುವುದು ಎಂದವರು ಹೇಳಿದ್ದರು. ಇದೇ ಮಾತನ್ನು ಸರಕಾರ ಎಪ್ರಿಲ್ 20ರಂದು ಪುನರುಚ್ಚರಿಸಿತ್ತು.

 ಆದರೆ , ಲಾಕ್‌ಡೌನ್ ಅವಧಿಯಲ್ಲಿ ಈ ಘೋಷಣೆಯನ್ನು ಕಾರ್ಯರೂಪಕ್ಕೆ ತರುವುದು ಅಷ್ಟೊಂದು ಸುಲಭವಲ್ಲ. ಪಡಿತರ ವಿತರಣೆಯಷ್ಟು ಸರಳ ಯೋಜನೆಯಲ್ಲ ಇದು. ಒಬ್ಬರಿಗೆ ಒಂದು ಕಿ.ಗ್ರಾಂ ಬೇಳೆಕಾಳು ಆದರೂ ಆಯಾ ಗ್ರಾಮದ ಪಡಿತರ ವಿತರಣೆ ಕೇಂದ್ರಕ್ಕೆ ಕಳುಹಿಸುವಾಗ ಲಾರಿಗಳಲ್ಲಿ ಸಾಗಾಟ ಮಾಡಬೇಕಾಗುತ್ತದೆ. ದೂರದ ಊರಿಗಾದರೆ ಗೂಡ್ಸ್ ರೈಲಿನ ಮುಖಾಂತರ ಸಾಗಿಸಿ ಅಲ್ಲಿಂದ ಲಾರಿಗಳಲ್ಲಿ ತಲುಪಿಸಬೇಕಾಗುತ್ತದೆ. ಇಷ್ಟು ಬೇಳೆಕಾಳುಗಳನ್ನು ಸಾಗಿಸಬೇಕಿದ್ದರೆ ಲಾರಿಗಳು ಸುಮಾರು 2 ಲಕ್ಷ ಟ್ರಿಪ್ ಮಾಡಬೇಕಾಗುತ್ತದೆ. ಅಲ್ಲದೆ ಬೇಳೆಕಾಳುಗಳನ್ನು ಲಾರಿಗೆ ಲೋಡ್ ಮಾಡಲು, ಲಾರಿಯಿಂದ ಅನ್‌ಲೋಡ್ ಮಾಡಲು ಕಾರ್ಮಿಕರ ಕೊರತೆಯಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

 ಅಲ್ಲದೆ ಹೆಚ್ಚಿನ ಗೋದಾಮು ಅಥವಾ ಮಿಲ್‌ಗಳು ಕೊರೋನ ವೈರಸ್ ಹಾಟ್‌ಸ್ಪಾಟ್ ಪ್ರದೇಶಗಳಲ್ಲಿ ಇರುವುದರಿಂದ ಈ ಪ್ರದೇಶದಲ್ಲಿ ಲಾರಿಗಳ ಲಭ್ಯತೆ ಹಾಗೂ ಲೋಡಿಂಗ್ ಮತ್ತು ಅನ್‌ಲೋಡಿಂಗ್‌ಗೆ ಕಾರ್ಮಿಕರ ಲಭ್ಯತೆ ಪ್ರಮುಖ ಸಮಸ್ಯೆಯಾಗಿದೆ. ಅಲ್ಲದೆ ಸರಕಾರ ಗೋದಾಮುಗಳಲ್ಲಿ ಸಂಸ್ಕರಿಸದ ಬೇಳೆಕಾಳುಗಳನ್ನು ಮಾತ್ರ ಶೇಖರಿಸುವುದು ಮತ್ತಷ್ಟು ವಿಳಂಬಕ್ಕೆ ಕಾರಣವಾಗಿದೆ. ಮೇ ಮೊದಲ ವಾರದ ವೇಳೆ ವಿತರಣಾ ಪ್ರಕ್ರಿಯೆ ವೇಗ ಪಡೆದುಕೊಳ್ಳಬಹುದು . ಸಣ್ಣ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್, ಚಂಡೀಗಢ, ದಾದ್ರ ನಗರ ಹವೇಲಿ, ಗೋವಾ, ಲಡಾಖ್, ಪುದುಚೇರಿ, ಲಕ್ಷದ್ವೀಪ ಮತ್ತು ಪಂಜಾಬ್‌ಗೆ ಮೂರು ತಿಂಗಳ ಸಂಸ್ಕರಿಸಿದ ಬೇಳೆಕಾಳುಗಳನ್ನು ಒಂದೇ ಬಾರಿಗೆ ರವಾನಿಸಲಾಗಿದೆ ಎಂದು ಇಲಾಖೆ ಹೇಳಿದೆ.

ಬೇಳೆಕಾಳು ವಿತರಣೆ ಪ್ರಕ್ರಿಯೆಯ ನೋಡಲ್ ಏಜೆನ್ಸಿಯಾಗಿರುವ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟವು ಬೇಳೆಕಾಳಿನ ಕಾಯ್ದಿಟ್ಟ ದಾಸ್ತಾನನ್ನು ನಿರ್ವಹಿಸುತ್ತದೆ. ದೇಶದಾದ್ಯಂತದ 165 ಗೋಡೌನ್‌ಗಳಲ್ಲಿ ರಾಶಿಬಿದ್ದಿರುವ 8.5 ಲಕ್ಷ ಟನ್‌ಗಳಷ್ಟು ಸಂಸ್ಕರಿಸದ ಬೇಳೆಕಾಳನ್ನು ಸಂಸ್ಕರಿಸಲು ಸುಮಾರು 100 ಮಿಲ್‌ಗಳು ಕಾರ್ಯನಿರ್ವಹಿಸುವ ಅಗತ್ಯವಿದ್ದು ಲಾಕ್‌ಡೌನ್‌ನಿಂದ ಈ ಕಾರ್ಯ ವಿಳಂಬವಾಗಿದೆ.

 ಆದರೆ ಪಡಿತರ ಕಾರ್ಡ್ ಹೊಂದಿದ ಕುಟುಂಬಕ್ಕೆ ವಿತರಿಸಲಾಗುವ 1 ಕಿ.ಗ್ರಾಂ ಬೇಳೆಕಾಳು ಅತ್ಯಲ್ಪವಾಗಿದೆ. ದೇಶದಲ್ಲಿ ಒಂದು ಕುಟುಂಬದಲ್ಲಿ ಸರಾಸರಿ 5 ಸದಸ್ಯರಿರುವುದರಿಂದ ಒಬ್ಬ ಸದಸ್ಯನಿಗೆ ಕೇವಲ 200 ಗ್ರಾಂ ಬೇಳೆಕಾಳು ದೊರೆತಂತಾಗುತ್ತದೆ ಎಂದು ‘ದಿ ವೈರ್’ ಸುದ್ದಿಸಂಸ್ಥೆಯ ವರದಿಯಲ್ಲಿ ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News