ಬೋಳೂರು ವಿದ್ಯುತ್ ಚಿತಾಗಾರದಲ್ಲೇ ಶವಸಂಸ್ಕಾರ: ಶಾಸಕ ವೇದವ್ಯಾಸ ಕಾಮತ್
ಮಂಗಳೂರು, ಎ.26: ದ.ಕ. ಜಿಲ್ಲೆಯಲ್ಲಿ ಇನ್ನು ಮುಂದೆ ಕೊರೋನದಿಂದ ಮೃತಪಟ್ಟಲ್ಲಿ ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಬೋಳೂರು ವಿದ್ಯುತ್ ಚಿತಾಗಾರದಲ್ಲಿ ಶವಸಂಸ್ಕಾರ ಮಾಡಬೇಕೆಂದು ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಬೋಳೂರು ಗ್ರಾಮದ ಹಿಂದೂ ರುದ್ರಭೂಮಿ ವಿದ್ಯುತ್ ಚಿತಾಗಾರವಾಗಿದ್ದು, ಕೊರೋನ ಪ್ರಕರಣಗಳಲ್ಲಿ ಮೃತ್ಯು ಸಂಭವಿಸಿದಾಗ ಆರೋಗ್ಯ ಇಲಾಖೆ ನಿಯಮಾವಳಿಯಂತೆ ಶವಸಂಸ್ಕಾರ ಮಾಡಲು ಯಾವುದೇ ರೀತಿಯ ಅಡಚಣೆ ಉಂಟಾಗಬಾರದು. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗೆ ತಿಳಿಸಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.
ಸ್ಥಳೀಯರ ಮನವೊಲಿಕೆ: ಶವಸಂಸ್ಕಾರದ ವಿಚಾರವಾಗಿ ಎರಡನೇ ಬಾರಿಗೆ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಸ್ಥಳೀಯ ಕಾರ್ಪೋರೇಟರ್ ಜಗದೀಶ್ ಶೆಟ್ಟಿ ಬೋಳೂರು ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ಮನವೊಲಿಸಲಾಗಿದೆ.
ಅಂತ್ಯ ಸಂಸ್ಕಾರದ ಬಳಿಕ ಜಿಲ್ಲಾಡಳಿತವು ಮುಂಜಾಗ್ರತಾ ಕ್ರಮವಾಗಿ ಸ್ಯಾನಿಟೈಸರ್ ಸಿಂಪಡಣೆ ಮುಂತಾದ ಕ್ರಮಗಳನ್ನು ಕೈಗೊಳ್ಳುತ್ತದೆ. ಶವಸಂಸ್ಕಾರದಿಂದ ಸ್ಮಶಾನ ಪರಿಸರದ ನಿವಾಸಿಗಳಿಗೆ ತೊಂದರೆ ಇಲ್ಲ ಎಂದು ಸ್ಮಶಾನದ ಸುತ್ತ ಮುತ್ತಲಿನ ಸುಮಾರು 50 ಮನೆಗಳಿಗೆ ವೈಜ್ಞಾನಿಕ ಮಾಹಿತಿ ನೀಡಿ ತಪ್ಪು ತಿಳಿವಳಿಕೆ ದೂರ ಮಾಡಲಾಗಿದೆ. ವಾಸ್ತವ ಅರಿತು ಬೋಳೂರು ಪರಿಸರದ ನಿವಾಸಿಗಳು ಜಿಲ್ಲಾಡಳಿತ ದೊಂದಿಗೆ ಕೈಜೋಡಿಸಲು ಸಮ್ಮತಿಸಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.
ಸಭೆಯಲ್ಲಿ ಮೇಯರ್ ದಿವಾಕರ, ಕಾರ್ಪೋರೇಟರ್ ಜಗದೀಶ ಶೆಟ್ಟಿ ಬೋಳೂರು, ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತ ಮದನ್ ಮೋಹನ್ ಹಾಗೂ ತಹಶೀಲ್ದಾರ್ ಗುರುಪ್ರಸಾದ್ ಸ್ಥಳೀಯರಾದ ರಾಹುಲ್ ಶೆಟ್ಟಿ, ಸಂದೀಪ್, ಉಮಾಶಂಕರ್, ದಿನೇಶ್, ರತ್ನೋಜಿ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.