ಕುತ್ಪಾಡಿ ಪಡುಕೆರೆಯಲ್ಲಿ ಕಡಲ್ಕೊರೆತ: ತೆಂಗಿನ ಮರಗಳು ಸಮುದ್ರಪಾಲು

Update: 2020-04-26 15:18 GMT

ಮಲ್ಪೆ, ಎ.26: ಕಳೆದ ಎರಡು ದಿನಗಳಿಂದ ಪಶ್ಚಿಮ ದಿಕ್ಕಿನಿಂದ ಬೀಸುತ್ತಿ ರುವ ಭಾರೀ ಗಾಳಿಯ ಪರಿಣಾಮ ಕುತ್ಪಾಡಿ ಪಡುಕೆರೆ ಎಂಬಲ್ಲಿ ಇಂದು ಕಡಲು ಕೊರೆತ ಉಂಟಾಗಿರುವ ಬಗ್ಗೆ ವರದಿಯಾಗಿದೆ.

ಕಡೆಕಾರು ಗ್ರಾಪಂ ವ್ಯಾಪ್ತಿಯ ಪಡುಕೆರೆಯ ಸಂಜೀವ ಸುವರ್ಣ ಎಂಬವರ ಮನೆ ಸಮೀಪ ಸುಮಾರು 250 ಮೀಟರ್ ಉದ್ದ ತೀರದಲ್ಲಿ ಕಡಲು ಕೊರೆತ ಕಾಣಿಸಿಕೊಂಡಿದ್ದು, 100 ಮೀಟರ್‌ನಷ್ಟು ಭೂಪ್ರದೇಶ ಸಮುದ್ರ ಪಾಲಾಗಿದೆ. ಅಲ್ಲದೆ ಇಲ್ಲಿದ್ದ ನಾಲ್ಕು ತೆಂಗಿನ ಮರಗಳು ಕೊರೆತ ದಿಂದಾಗಿ ಧರೆಗೆ ಉರುಳಿ ಬಿದ್ದಿವೆ. ಇನ್ನು ಮೂರು ತೆಂಗಿನ ಮರಗಳು ಅಪಾಯದ ಅಂಚಿನಲ್ಲಿರುವುದಾಗಿ ತಿಳಿದುಬಂದಿದೆ.

ಉದ್ಯಾವರ ಪಡುಕೆರೆಯಿಂದ ಕುತ್ಪಾಡಿ ಪಡುಕೆರೆಯವರೆಗೆ ಎಡಿಬಿಯಿಂದ ಕಡಲ್ಕೊರೆತಕ್ಕೆ ಶಾಶ್ವತ ತಡೆಗೋಡೆ ನಿರ್ಮಿಸುವ ಕಾಮಗಾರಿ ನಡೆಯುತ್ತಿದ್ದು, ಇಲ್ಲಿನ ಸುಮಾರು 300 ಮೀಟರ್‌ನಷ್ಟು ಪ್ರದೇಶದಲ್ಲಿ ಕಾಮಗಾರಿ ನಡೆಯಲು ಬಾಕಿ ಇದೆ. ಇದರ ಪರಿಣಾಮ ಈ ಪ್ರದೇಶದಲ್ಲಿ ಕೊರೆತ ಕಂಡುಬಂದಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

ಕಡಲ್ಕೊರೆತ ಪ್ರದೇಶಕ್ಕೆ ಉಡುಪಿ ಶಾಸಕ ಕೆ.ರಘುಪತಿ ಭಟ್ ಇಂದು ಸಂಜೆ ವೇಳೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಉಡುಪಿ ಜಿಪಂ ಅಧ್ಯಕ್ಷ ದಿನಕರ್ ಬಾಬು ಮತ್ತು ಕಡೆಕಾರು ಗ್ರಾಪಂ ಅಧ್ಯಕ್ಷ ರಘುನಾಥ್ ಕೋಟ್ಯಾನ್ ಹಾಗೂ ಗ್ರಾಪಂ ಸದಸ್ಯರುಗಳು ಮತ್ತು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News