×
Ad

ತಿಂಗಳು ದಾಟಿದ ‘ಲಾಕ್‌ಡೌನ್’ನಿಂದ ಅತಂತ್ರಗೊಂಡ ಬದುಕು !

Update: 2020-04-26 21:11 IST

ಮಂಗಳೂರು, ಎ.26: ಕೊರೋನ ವೈರಸ್ ರೋಗವನ್ನು ತಡೆಗಟ್ಟುವ ಸಲುವಾಗಿ ವಿಧಿಸಲ್ಪಟ್ಟ ಲಾಕ್‌ಡೌನ್‌ಗೆ ತಿಂಗಳು ದಾಟಿವೆ. ಮಾ.22ರಂದು ಪ್ರಧಾನಿ ನರೇಂದ್ರ ಮೋದಿಯ ಕರೆಯಂತೆ ದ.ಕ.ಜಿಲ್ಲೆಯಲ್ಲೂ ಜನರು ‘ಜನತಾ ಕರ್ಫ್ಯೂ’ ನಡೆಸಿದ್ದರು. ಮಂಗಳೂರು ಸಹಿತ ದ.ಕ.ಜಿಲ್ಲೆಯು ಸಂಪೂರ್ಣ ಸ್ತಬ್ಧಗೊಂಡಿತ್ತು. ಜಿಲ್ಲೆಯ ಜನತೆ ಜಾತಿ-ಮತ ಮತ್ತು ಪಕ್ಷ ಭೇದ ಮರೆತು ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ‘ಜನತಾ ಕರ್ಫ್ಯೂ’ವನ್ನು ಬೆಂಬಲಿಸಿ ಮನೆಯಲ್ಲೇ ಉಳಿದುಕೊಂಡಿದ್ದರು. ಈ ಮಧ್ಯೆ ಪ್ರಧಾನಿಯ ಕರೆಯಂತೆ ಚಪ್ಪಾಳೆ ತಟ್ಟಿ ಕೊರೋನ ಯೋಧರಿಗೆ ಗೌರವ ಸಲ್ಲಿಕೆ ಮತ್ತು ಆ ಬಳಿಕ ದೀಪ ಬೆಳಗಿಸುವಿಕೆ ಇತ್ಯಾದಿ ಕೂಡ ನಡೆದಿತ್ತು.

ಅದಕ್ಕೂ ಮೊದಲೇ ಅಂದರೆ ಮಾ.13ರಿಂದಲೇ ಮಾಲ್‌ಗಳು, ಚಲನಚಿತ್ರ ಮಂದಿರ ಹಾಗೂ ಸಾರ್ವಜನಿಕ ಸಭಾ ಕಾರ್ಯಕ್ರಮ, ಮದುವೆ, ಅಧಿಕ ಸಂಖ್ಯೆಯಲ್ಲಿ ಜಮಾಯಿಸುವ ಧಾರ್ಮಿಕ ಕಾರ್ಯಕ್ರಮಗಳಿಗೆ ಸರಕಾರ ನಿರ್ಬಂಧ ಹೇರಿತ್ತು. ಜನತಾ ಕರ್ಫ್ಯೂ ದಿನ ಜಿಲ್ಲೆಯ ಖಾಸಗಿ ಮತ್ತು ಸರಕಾರಿ ಬಸ್‌ಗಳು, ರೈಲು, ರಿಕ್ಷಾ, ಟ್ಯಾಕ್ಸಿ, ವಿಮಾನ ಯಾನ ಸಹಿತ ಎಲ್ಲಾ ರೀತಿಯ ಸಂಚಾರ ಸ್ಥಗಿತಗೊಳಿಸಿತ್ತು. ಅಂಗಡಿ ಮುಂಗಟ್ಟು ಮತ್ತು ಬಹುತೇಕ ಪೆಟ್ರೋಲ್ ಬಂಕ್‌ಗಳು ಕೂಡ ಮುಚ್ಚಲ್ಪಟ್ಟಿತ್ತು. ಸದಾ ಜನರ ಓಡಾಟದಿಂದ ಗಮನ ಸೆಳೆಯುತ್ತಿದ್ದ ನಗರದ ಸೆಂಟ್ರಲ್ ಮಾರ್ಕೆಟ್, ಸ್ಟೇಟ್‌ಬ್ಯಾಂಕ್ ಪರಿಸರ, ರೈಲು ಮತ್ತು ರಿಕ್ಷಾ ಹಾಗೂ ಬಸ್ ನಿಲ್ದಾಣಗಳು ಹಾಗೂ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯರಸ್ತೆಗಳು ಬಿಕೋ ಎನ್ನುತ್ತಿತ್ತು.

ಮಾ.23ರಿಂದ ಕೇಂದ್ರದ ನಿರ್ದೇಶನದ ಮೇರೆಗೆ ರಾಜ್ಯ ಸರಕಾರ ಲಾಕ್‌ಡೌನ್ ಘೋಷಿಸಿತ್ತು. ಅದರಂತೆ ಅಗತ್ಯ ದಿನಸಿ ಸಾಮಗ್ರಿಗಳನ್ನು ಖರೀದಿಸಲು ನಿಗದಿತ ಸಮಯ ನೀಡಿ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿತ್ತು. ಉಳಿದಂತೆ ಸರಕಾರಿ ಮತ್ತು ಖಾಸಗಿ ಬಸ್ ಸಂಚಾರವಿಲ್ಲ, ಆಟೋ ರಿಕ್ಷಾಗಳ ಓಡಾಟಕ್ಕೆ ಅವಕಾಶವಿಲ್ಲ. ವಿಮಾನ ಮತ್ತು ರೈಲು ಯಾನವೂ ಇಲ್ಲ.

ಜನರು ಅಗತ್ಯ ವಸ್ತುಗಳಿಗಾಗಿ ಮಾತ್ರ ಮನೆಯಿಂದ ಹೊರಬರಬೇಕು ಎಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆಯನ್ನು ಸಾರ್ವಜನಿಕರಿಗೆ ನೀಡಿತ್ತು. ಅದರಂತೆ ಹೊಟೇಲುಗಳು ಕೂಡ ಬಂದ್ ಆಗಿತ್ತು. ವೈದ್ಯಕೀಯ ಸೇವೆ ಸಹಿತ ತುರ್ತು ಸೇವಾ ಸೌಲಭ್ಯಗಳಾದ ಔಷಧ, ಹಾಲು, ಹಣ್ಣು, ತರಕಾರಿ, ಪತ್ರಿಕೆ, ದಿನಬಳಕೆಯ ವಸ್ತುಗಳ ಸಹಿತ ಆಹಾರ ಸಾಮಗ್ರಿಗಳ ಮಾರಾಟ, ಸಾಗಾಟಕ್ಕೆ ವಿನಾಯಿತಿ ನೀಡಲಾಗಿತ್ತು. ಮಾ.31ರವರೆಗೆ ವಿಧಿಸಲ್ಪಟ್ಟ ಲಾಕ್‌ಡೌನ್ ಎ.15ರವರೆಗೆ ಮುಂದುವರಿಯಿತು. ಅದೀಗ ಮೇ 3ರವರೆಗೆ ಮುಂದುವರಿಯಲಿದೆ.
ಲಾಕ್‌ಡೌನ್ ವಿಧಿಸಲ್ಪಟ್ಟ ಬಳಿಕ ಆ್ಯಂಬುಲೆನ್ಸ್ ಸೇವೆ ಮತ್ತು ಸರಕಾರಿ ಹಾಗು ಖಾಸಗಿ ಆಸ್ಪತ್ರೆಗಳ ತುರ್ತು ಘಟಕಗಳು ಮಾತ್ರ ತೆರೆದಿವೆ. ಬ್ಯಾಂಕ್‌ಗಳು ಹೊರತುಪಡಿಸಿ ಬಹುತೇಕ ಖಾಸಗಿ ಕಚೇರಿಗಳು ಬಂದ್ ಆಗಿವೆ. ಸರಕಾರಿ ಕಚೇರಿಗಳು ನೆಪಮಾತ್ರಕ್ಕೆ ತೆರೆದಿವೆ. ನಗರದ ಬಂದರ್ ದಕ್ಕೆ ಮತ್ತು ಸ್ಟೇಟ್‌ಬ್ಯಾಂಕ್ ಸಮೀಪದ ಮೀನು ಮಾರುಕಟ್ಟೆಯು ಆರಂಭದಲ್ಲಿ ಸಂಪೂರ್ಣ ಸ್ಥಬ್ಧಗೊಂಡರೂ ಬಳಿಕ ಕೆಲವು ಷರತ್ತು ವಿಧಿಸಿ ಮೀನುಗಾರಿಕೆಗೆ ಅವಕಾಶ ನೀಡಲಾಗಿದ್ದರೂ ದಕ್ಕೆಯಲ್ಲಿ ಎಂದಿನಂತೆ ಚಟುವಟಿಕೆ ಕಾಣುತ್ತಿಲ್ಲ. ದಕ್ಕೆ ಮಾತ್ರವಲ್ಲ, ಕೇಂದ್ರ ಮಾರುಕಟ್ಟೆ ಕೂಡ ಸ್ಥಬ್ಧಗೊಂಡಿವೆ. ಕೇಂದ್ರ ಮಾರುಕಟ್ಟೆಯನ್ನು ಬೈಕಂಪಾಡಿಯ ಎಪಿಎಂಸಿ ಯಾರ್ಡ್‌ಗೆ ಪರ-ವಿರೋಧದ ಮಧ್ಯೆ ಸ್ಥಳಾಂತರಿಸಲಾಗಿದೆ.
ಲಾಕ್‌ಡೌನ್‌ನಿಂದ ದಿನಗೂಲಿ ಕಾರ್ಮಿಕರು, ವಲಸೆ ಕಾರ್ಮಿಕರು, ಬಡವರು ಮಾತ್ರವಲ್ಲ ಮಧ್ಯಮ ವರ್ಗದವರೂ ತತ್ತರಿಸಿದ್ದಾರೆ. ಸಣ್ಣಪುಟ್ಟ ಬಟ್ಟೆ ಅಂಗಡಿ, ಸ್ಟೇಷನರಿ, ಹಾರ್ಡ್‌ವೇರ್, ಕ್ಸೆರಾಕ್ಸ್ ಅಂಗಡಿ, ಹೊಟೇಲು, ಐಸ್‌ಕ್ರೀಂ ಪಾರ್ಲರ್ ಹೀಗೆ ಬೇರೆ ಬೇರೆ ಅಂಗಡಿಮುಂಗಟ್ಟುಗಳನ್ನು ನಂಬಿದವರು ಅತಂತ್ರರಾಗಿದ್ದಾರೆ. ಸಾರ್ವಜನಿಕ ಸಭೆ ಸಮಾರಂಭ, ಉರೂಸ್, ಜಾತ್ರೆ-ಉತ್ಸವ, ಮದುವೆ, ಮೆಹಂದಿ ಕಾರ್ಯಕ್ರಮ ಇತ್ಯಾದಿಗೂ ಕಡಿವಾಣ ಬಿದ್ದಿದೆ. ಬೀಚ್-ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಲಾಗಿದೆ. ಕ್ರೀಡಾಕೂಟ, ಶಿಬಿರ, ಉಪನ್ಯಾಸ, ಕಮ್ಮಟ, ವಸ್ತುಪ್ರದರ್ಶನ, ಸಂಗೀತ ಕಾರ್ಯಕ್ರಮ, ಬೇಸಿಗೆ ಶಿಬಿರ ಇತ್ಯಾದಿ ಎಲ್ಲವನ್ನೂ ಸ್ಥಗಿತಗೊಂಡಿವೆ. ಜೊತೆಗೆ ರಿಕ್ಷಾ ಚಾಲಕರು, ಬಸ್-ಲಾರಿ ಚಾಲಕರು, ಕ್ಲೀನರ್‌ಗಳು, ಲಾರಿಗಳ ಕೂಲಿ ಕಾರ್ಮಿಕರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂಕಷ್ಟದ ಸಮಯಗಳಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ದಿನಸಿ ಸಾಮಗ್ರಿಗಳ ಕಿಟ್ ವಿತರಿಸುವುದು ಸಾಮಾನ್ಯ. ಆದರೆ ಈ ಬಾರಿ ಮಧ್ಯಮ ವರ್ಗದ ಕಷ್ಟಕ್ಕೂ ವಿವಿಧ ಸಂಘ ಸಂಸ್ಥೆಗಳು ಸ್ಪಂದಿಸಿವೆ. ಮಸೀದಿ-ಜಮಾಅತ್ ಕಮಿಟಿಗಳು, ಮಸೀದಿ ವ್ಯಾಪ್ತಿಯ ದಾನಿಗಳು ಶಕ್ತಿಮೀರಿ ಸ್ಪಂದಿಸಿರುವುದು ಗುಟ್ಟಾಗಿ ಉಳಿದಿಲ್ಲ. ಮೂಲವೊಂದರ ಪ್ರಕಾರ ದ.ಕ.ಜಿಲ್ಲೆಯಲ್ಲಿ 500ಕ್ಕೂ ಅಧಿಕ ಸಂಘ ಸಂಸ್ಥೆಗಳು ದಿನಸಿ ಸಾಮಗ್ರಿಗಳ ಕಿಟ್ ವಿತರಣೆ, ಅನ್ನದಾನದಲ್ಲಿ ತೊಡಗಿಸಿಕೊಂಡಿವೆ. ಮಸೀದಿಗಳ ಕಮಿಟಿಗಳು ಮಾತ್ರವಲ್ಲ ದೇವಸ್ಥಾನ-ಚರ್ಚ್‌ಗಳ ಆಡಳಿತ ಕಮಿಟಿಗಳು ಕೂಡ ಸ್ಪಂದಿಸಿವೆ. ಕೆಲವು ಕಡೆ ಅಂಗಡಿ ಮುಂಗಟ್ಟು-ಮನೆ ಬಾಡಿಗೆ ಮನ್ನಾ, ತರಕಾರಿ ಹಣ್ಣು ಹಂಪಲುಗಳ ಉಚಿತ ವಿತರಣೆಯೂ ನಡೆದಿದೆ.

ದ.ಕ.ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಕೊರೋನ ವೈರಸ್ ವಿರುದ್ಧ ಸಮರ ಸಾರುತ್ತಿವೆ. ಕಾಲ ಕಾಲಕ್ಕೆ ಕೆಲವೊಂದು ನಿಯಮಾವಳಿಯನ್ನು ರೂಪಿಸುತ್ತಿವೆ. ಅದಕ್ಕೆ ಪೂರಕ ಎಂಬಂತೆ ಮಸೀದಿ, ಮಂದಿರ, ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆಗಳು ಸ್ಥಗಿತಗೊಳಿಸ ಲಾಗಿದೆ. ಎಲ್ಲಾ ಧರ್ಮಗಳ ವಿದ್ವಾಂಸರು, ಮುಖಂಡರು ಸರಕಾರದ ನಿಯಮಾವಳಿಗೆ ಸಹಮತ ವ್ಯಕ್ತಪಡಿಸಿ ಕೊರೋನ ವೈರಸ್ ತಡೆಗಟ್ಟಲು ಪ್ರಯತ್ನ ಮುಂದುವರಿಸಿದ್ದಾರೆ.

ಜಿಲ್ಲಾಡಳಿತವು ಅಂತರ್ ಜಿಲ್ಲೆ, ಅಂತರ್ ರಾಜ್ಯ ಗಡಿ ಮುಚ್ಚಿವೆ. ಯಾರೂ ಹೊರ ಜಿಲ್ಲೆ-ರಾಜ್ಯದಿಂದ ಪ್ರವೇಶಿದಂತೆ ನಿರ್ಬಂಧ ವಿಧಿಸಿದೆ. ಪ್ರತೀ ದಿನ ಸ್ಕ್ರೀನಿಂಗ್ ಮಾಡುವುದು, ಹೋಂ ಕ್ವಾರಂಟೈನ್ ಮಾಡುವುದು, ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷಾಲಯಕ್ಕೆ ಕಳುಹಿಸಿ ಕೊಡುವುದು ಇತ್ಯಾದಿ ಕೆಲಸವನ್ನು ಸಮರೋಪಾದಿಯಲ್ಲಿ ಮಾಡುತ್ತಿವೆ. ಜೊತೆಗೆ ಜಿಲ್ಲೆಯ ಆಶಾ ಕಾರ್ಯಕರ್ತೆಯರು ಎಲ್ಲಾ ಮನೆಗಳಿಗೆ ತೆರಳಿ ಕೊರೋನ ವೈರಸ್ ಬಗ್ಗೆ ವಿಶೇಷ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಿದ್ದಾರೆ. ಈ ಸಂದರ್ಭ ಆಶಾ ಕಾರ್ಯಕರ್ತರ ಕೆಲಸಕ್ಕೆ ಅಡ್ಡಿಯೂ ನಡೆದಿದೆ. ಅಡ್ಡಿಪಡಿಸಿದವರ ವಿರುದ್ಧ ಪೊಲೀಸ್ ಇಲಾಖೆಯೂ ಕ್ರಮ ಜರುಗಿಸಿದೆ. ಈ ಮಧ್ಯೆ ಅನಗತ್ಯವಾಗಿ ತಿರುಗಾಡುತ್ತಿದ್ದವರ ವಿರುದ್ಧ ಪೊಲೀಸ್ ಇಲಾಖೆ ಬಸ್ಕಿ ತೆಗೆಸುವ ಶಿಕ್ಷೆ, ದಂಡ, ವಾಹನಗಳ ಮುಟ್ಟುಗೋಲು ಇತ್ಯಾದಿಯೂ ಮಾಡಿ ಎಲ್ಲರೂ ಮನೆಯಲ್ಲೇ ಇರುವಂತೆ ಮಾಡಿದೆ. ಶಿಕ್ಷಣ ಇಲಾಖೆಯು ಎಸೆಸ್ಸೆಲ್ಸಿ ಪರೀಕ್ಷೆ (ದ್ವಿತೀಯ ಪಿಯುಸಿಯ 1 ಪರೀಕ್ಷೆ) ಮುಂದೂಡಿಕೆಯೂ ನಡೆದಿದೆ. 2020-21ನೆ ಶೈಕ್ಷಣಿಕ ವರ್ಷದ ದಾಖಲಾತಿಯನ್ನು ತಡೆಹಿಡಿದಿದೆ. ಈ ಮಧ್ಯೆ ಕೇರಳದ ಸಾರ್ವಜನಿಕರನ್ನ್ನು ಮಾತ್ರವಲ್ಲ ರೋಗಿಗಳಿಗೂ ಕೂಡ ದ.ಕ.ಜಿಲ್ಲೆಗೆ ಪ್ರವೇಶಿಸುವುದಕ್ಕೆ ನಿರ್ಬಂಧ ಹೇರಿರುವುದು ಸಾಕಷ್ಟು ಚರ್ಚೆಗೆ ಕಾರಣವಾಯಿತು. ಕೊನೆಗೆ ಸುಪ್ರೀಂ ಕೋಟ್‌ರ್ಟ್‌ನ ನಿರ್ದೇಶನದ ಮೇರೆಗೆ ಕೆಲವು ಷರತ್ತು ವಿಧಿಸಿ ರೋಗಿಗಳನ್ನು ಆ್ಯಂಬುಲೆನ್ಸ್‌ನಲ್ಲಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಾತ್ರ ಚಿಕಿತ್ಸೆ ನೀಡಲು ಅನುಮತಿ ನೀಡಿತ್ತು.

ಒಟ್ಟಿನಲ್ಲಿ ಕೊರೋನ ವಿರುದ್ಧ ಜಾತಿ, ಮತ ಬೇಧ ಮರೆತು ಎಲ್ಲರೂ ಒಗ್ಗೂಡಿ ಸಮರ ಸಾರಿದರೆ, ಕೆಲವು ಕಡೆ ‘ಕೋಮುವೈರಸ್’ ಹಬ್ಬಿಸುವ ಪ್ರಯತ್ನ ನಡೆಯಿತು. ಪೊಲೀಸ್ ಇಲಾಖೆಯ ಸಕಾಲಿಕ ಕ್ರಮದಿಂದ ಸದ್ಯ ಅದಕ್ಕೂ ತಡೆಬಿದ್ದಿದೆ. ತಿಂಗಳ ಕಾಲ ನಡೆದ ಮತ್ತು ಸದ್ಯ ನಡೆಯುತ್ತಿ ರುವ ಲಾಕ್‌ಡೌನ್‌ನಿಂದ ಆರ್ಥಿಕವಾಗಿ ಕೋಟ್ಯಂತರ ರೂಪಾಯಿ ನಷ್ಟ ಮಾತ್ರವಲ್ಲ ಮಾನವ ಸಂಬಂಧಗಳಿಗೆ ನಾನಾ ವಿಧದ ಅರ್ಥ ಹುಡುಕುವ, ಸಂಬಂಧ ಬೆಸೆಯುವ ಪ್ರಯತ್ನವೂ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News