ಅಂತ್ಯಸಂಸ್ಕಾರಕ್ಕೆ ಜನಪ್ರತಿನಿಧಿಗಳ ವಿರೋಧ ತಲೆತಗ್ಗಿಸುವಂತೆ ಮಾಡಿದೆ : ರಮಾನಾಥ ರೈ
ಬಂಟ್ವಾಳ, ಎ.26: ಕೊರೋನ ಸೋಂಕಿನಿಂದ ಮೃತರಾದವರ ಅಂತ್ಯಸಂಸ್ಕಾರಕ್ಕೆ ಚುನಾಯಿತ ಜನಪ್ರತಿಧಿಗಳೇ ವಿರೋಧ ವ್ಯಕ್ತಪಡಿಸಿರುವ ಕ್ರಮ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಅದೇ ರೀತಿ ಮೃತರನ್ನು ಖಾಸಗಿ ಜಾಗದಲ್ಲಿ ಅಂತ್ಯಸಂಸ್ಕಾರ ನಡೆಸುವಂತೆ ಹೇಳುವ ಮೂಲಕ ಜನರಲ್ಲಿ ಗೊಂದಲವನ್ನು ಉಂಟು ಮಾಡುವ ಕೆಲಸ ನಿಲ್ಲಬೇಕು ಎಂದು ದ.ಕ. ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಿ.ಸಿ.ರೋಡಿನಲ್ಲಿ ರವಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೊರೋನದಿಂದ ಬಂಟ್ವಾಳದಲ್ಲಿ ಎರಡು ಸಾವು ಆಗಿರುವುದು ದುರಾದೃಷ್ಟಕರ. ಮೃತರಿಗೆ ಸಂತಾಪ ಸೂಚಿಸುತ್ತೇನೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಹಾರೈಸುತ್ತೇನೆ ಎಂದರು.
ಸಾಂಕ್ರಾಮಿಕ ರೋಗದಂತಹ ವಿಶೇಷ ಸಂದರ್ಭಗಳಲ್ಲಿ ಮೃತರಾದವರ ಮೃತದೇಹದ ಅಂತ್ಯಸಂಸ್ಕಾರಕ್ಕೆ ಅದರದ್ದೇ ಆದ ರೀತಿ, ನಿಯಮ, ಕಾನೂನುಗಳಿರುತ್ತದೆ. ಜಿಲ್ಲಾಡಳಿತ ಅದರಂತೆಯೇ ಅಂತ್ಯಸಂಸ್ಕಾರ ನಡೆಸಬೇಕು. ಅದಕ್ಕೆ ವಿರೋಧ ವ್ಯಕ್ತಪಡಿಸುವುದು, ಯಾರದ್ದೋ ಕಟ್ಟಪಣೆ ಪಡೆಯುವುದು ಸರಿಯಲ್ಲ ಎಂದು ಅವರು ನುಡಿದರು.
ವಿಶೇಷ ಸಂದರ್ಭಗಳಲ್ಲಿ ಯಾವ ಆಸ್ಪತ್ರೆಯಲ್ಲಿ ಸಾವು ಸಂಭವಿಸುತ್ತದೆಯೋ ಆ ಆಸ್ಪತ್ರೆಯ ಹತ್ತಿರದ ಚಿತಾಗಾರದಲ್ಲಿಯೇ ಶವ ಸಂಸ್ಕಾರ ನಡೆಸಬೇಕು. ಅದರಲ್ಲೂ ವಿದ್ಯುತ್ ಚಿತಾಗಾರಕ್ಕೆ ಆದ್ಯತೆ ನೀಡಬೇಕು. ಪಾರ್ಥಿವ ಶರೀರಕ್ಕೆ ಅದರದ್ದೇ ಆದ ಗೌರವ ಇರುತ್ತದೆ. ಕೊರೋನ ಸೋಂಕಿನಿಂದ ಮೃತರಾದ ಮಹಿಳೆಯ ಅಂತ್ಯ ಸಂಸ್ಕಾರದ ಬಗ್ಗೆ ಪರಿಜ್ಞಾನ ಇದ್ದ ಚುನಾಯಿತ ಪ್ರತಿನಿಧಿಗಳು ನಡೆಸಿಕೊಂಡ ರೀತಿ ಖೇದ ಉಂಟು ಮಾಡಿದೆ. ಶಾಸಕರ ಪ್ರಭಾವಕ್ಕೆ ಮಣಿದು ಪಾರ್ಥಿವ ಶರೀರವನ್ನು ಅವಮಾನ ಮಾಡಿರುವುದು ಸರಿಯಲ್ಲ ಎಂದು ಅವರು ಅಸಮಾ ಧಾನ ವ್ಯಕ್ತಪಡಿಸಿದರು.
ಒಂದೆಡೆ ಶವಸಂಸ್ಕಾರಕ್ಕೆ ಅವಕಾಶ ನೀಡದೆ ಮೃತದೇಹವನ್ನು ಅಲೆದಾಡುವಂತೆ ಮಾಡಿ ಇನ್ನೊಂದೆಡೆ ಖಾಸಗಿ ಜಾಗದಲ್ಲಿ ಮೃತದೇಹವನ್ನು ಅಂತ್ಯ ಸಂಸ್ಕಾರ ಮಾಡುವಂತೆ ಹೇಳಿಕೆ ನೀಡಿ ಮಣ್ಣು ಪಾಲಾದ ಗೌರವವನ್ನು ಮರಳಿ ಪಡೆಯಲು ಮುಂದಾಗಿದ್ದಾರೆ. ಆದರೆ ಒಮ್ಮೆ ಮಣ್ಣು ಪಾಲಾದ ಗೌರವ ಏನೇ ಮಾಡಿದರೂ ಮರಳಿ ಬರುವುದಿಲ್ಲ. ಮನುಷ್ಯ ಯಾವುದೇ ಕಾರಣದಿಂದ ಮೃತಪಟ್ಟರೂ ಮೃತದೇಹವನ್ನು ಗೌರವಿಸು ವುದು ಮಾನವ ಲಕ್ಷಣವಾಗಿದೆ. ವಿಶೇಷ ಸಂದರ್ಭಗಳಲ್ಲಿ ಮೃತರಾದವರ ಅಂತ್ಯಸಂಸ್ಕಾರ ಯಾರದ್ದೋ ಖಾಸಗಿ ಜಾಗದಲ್ಲಿ ಅಥವಾ ಯಾರೋ ಬಯಸಿದ ಸ್ಥಳದಲ್ಲಿ ನಡೆಸಲು ಆಗುವುದಿಲ್ಲ ಎಂದು ಅವರು ತಿಳಿಸಿದರು.
ಸಾಂಕ್ರಾಮಿಕ ರೋಗದಿಂದ ಮೃತರಾದವರ ಅಂತ್ಯಸಂಸ್ಕಾರ ಮಾಡುವುದರ ಬಗ್ಗೆ ಜಿಲ್ಲಾಡಳಿತಕ್ಕೆ ತಿಳುವಳಿಕೆ ಇರುತ್ತದೆ. ಅದಕ್ಕೆ ಯಾವುದೇ ವ್ಯಕ್ತಿಗಳು ಮಧ್ಯ ಪ್ರವೇಶ ಮಾಡುವ ಅಗತ್ಯ ಇರುವುದಿಲ್ಲ. ಈ ಬಗ್ಗೆ ಈಗಾಗಲೇ ಕಾಂಗ್ರೆಸ್ ನಿಯೋಗ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಚರ್ಚಿಸಿದೆ. ಆಗಿರುವ ಪ್ರಮಾದವನ್ನು ಜಿಲ್ಲಾಧಿಕಾರಿ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಅಚಾತುರ್ಯಗಳು ನಡೆಯಬಾರದು ಎಂಬ ಮನವಿಯನ್ನು ಜಿಲ್ಲಾಧಿಕಾರಿಗೆ ಮಾಡಲಾಗಿದೆ. ಈ ಬಗ್ಗೆ ಜಾಗರೂಕತೆ ವಹಿಸುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.