×
Ad

ಕಿಮ್‌ ಜಾಂಗ್‌ರ ಖಾಸಗಿ ರೈಲು ವಿಹಾರಧಾಮದಲ್ಲಿ ಪತ್ತೆ

Update: 2020-04-26 23:39 IST

ವಾಶಿಂಗ್ಟನ್/ಸೋಲ್: ಉತ್ತರ ಕೊರಿಯದ ಸರ್ವಾಧಿಕಾರಿ ನಾಯಕ ಕಿಮ್ ಜಾಂಗ್‌ ಉನ್ ಅರ ಆರೋಗ್ಯದ ಬಗ್ಗೆ ವ್ಯಾಪಕವಾದ ವದಂತಿಗೆಳು ಹರಡುತ್ತಿರುವಂತೆಯೇ, ಅವರಿಗೆ ಸೇರಿದ್ದ ವಿಶೇಷ ರೈಲೊಂದು.ಆ ದೇಶದ ವಿಹಾರಧಾಮವೊಂದರಲ್ಲಿ ಈ ವಾರ ಕಂಡುಬಂದಿದೆಯೆಂದು ಅಮೆರಿಕಕ್ಕೆ ಲಭ್ಯವಾಗಿರುವ ಬೇಹುಗಾರಿಕಾ ಉಪಗ್ರಹ ಚಿತ್ರಗಳಿಂದ ತಿಳಿದುಬಂದಿದೆ.

ಈ ರೈಲು, ಎಪ್ರಿಲ್ 21 ಹಾಗೂ ಎಪ್ರಿಲ್ 23ರಂದು ವೊನ್ಸಾನ್‌ನಲ್ಲಿರುವ ‘ಲೀಡರ್‌ಶಿಪ್ ಸ್ಟೇಶನ್’ ಎಂಬ ವಿಶೇಷ ರೈಲು ನಿಲ್ದಾಣದಲ್ಲಿ ನಿಂತಿರುವುದಾಗಿ ವಾಶಿಂಗ್ಟನ್ ಮೂಲದ ಉತ್ತರ ಕೊರಿಯಾ ಕುರಿತ ಕಣ್ಗಾವಲು ಸಂಸ್ಥೆ ‘38 ನಾರ್ತ್’ ವರದಿ ಮಾಡಿದೆ. ಈ ರೈಲು ನಿಲ್ದಾಣವು ಕಿಮ್ ಜಾಂಗ್‌ ಮತ್ತವರ ಕುಟುಂಬದ ಬಳಕೆಗೆ ಮೀಸಲಿರುವುದಾಗಿ ಮೂಲಗಳು ತಿಳಿಸಿವೆ.

 ಆದರೆ ಕಿಮ್ ಜಾಂಗ್‌ ಅವರು ವೊನ್ಸಾನ್ ನಗರದಲ್ಲಿದ್ದಾರೆಯೇ ಎಂಬುದು ಇನ್ನೂ ದೃಢಪಡಿಸಿಕೊಳ್ಳಲು ಸಾಧ್ಯವಾಗಿಲ್ಲವೆಂದು ರಾಯ್ಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

 ಎಪ್ರಿಲ್ 15ರಂದು ನಡೆದ ಉತ್ತರ ಕೊರಿಯದ ಸಂಸ್ಥಾಪಕ ಪಿತಾಮಹ ಹಾಗೂ ತನ್ನ ತಾತ ದಿವಂಗತ ಕಿಮ್II  ಸುಂಗ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಕಿಮ್ ಜಾಂಗ್‌ ಅನುಪಸ್ಥಿತಿಯು ಅವರ ಆರೋಗ್ಯದ ಬಗ್ಗೆ ವ್ಯಾಪಕ ಊಹಾಪೋಹಗಳಿಗೆ ಕಾರಣವಾಗಿತ್ತು.

ಹೃದಯದ ಶಸ್ತ್ರಕ್ರಿಯೆಗೆ ಒಳಗಾಗಿದ್ದಾರೆನ್ನಲಾದ ಕಿಮ್ ಜಾಂಗ್‌ ಉನ್ ಅವರಿಗೆ ವೈದ್ಯಕೀಯ ಸಲಹೆ ನೀಡಲು ಚೀನಾವು ವೈದ್ಯಕೀಯ ತಜ್ಞರ ತಂಡವೊಂದನ್ನು ರವಾನಿಸಿರುವುದಾಗಿ ತಿಳಿದುಬಂದಿದೆ. ಚೀನಾವು ಉತ್ತರ ಕೊರಿಯದ ಮಿತ್ರರಾಷ್ಟ್ರವಾಗಿದ್ದು, ಆ ದೇಶದ ಜೊತೆ ದೀರ್ಘವಾದ ಗಡಿಯನ್ನು ಹಂಚಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News