×
Ad

ಪಂಪ್‌ವೆಲ್ ಫ್ಲೈಓವರ್‌ನ ಕಳಪೆ ಕಾಮಗಾರಿ ಆರೋಪ : ತನಿಖೆ ನಡೆಸಲು ಐವನ್ ಡಿಸೋಜ ಒತ್ತಾಯ

Update: 2020-04-27 17:01 IST

ಮಂಗಳೂರು, ಎ.27: ನಗರದಲ್ಲಿನ ಪಂಪ್‌ವೆಲ್ ಫ್ಲೈ ಓವರ್ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಾಗಿದ್ದಾಗಿದ್ದು, ಅನೇಕ ಬಾರಿ ಇಲಾಖೆಯ ಗಮನಕ್ಕೆ ತಂದಿದ್ದರೂ ಕ್ರಮ ಕೈಗೊಳ್ಳಲಿಲ್ಲ.‌ ಈ ಬಗ್ಗೆ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆಗ್ರಹಿಸಿದ್ದಾರೆ.

ಮೇಲ್ಸೇತುವೆಯ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಕಳಪೆ ಮಟ್ಟದ ಮತ್ತು ತಾಂತ್ರಿಕವಾಗಿಯೂ ನಡೆಯುವ ಕಾಮಗಾರಿಯಿಂದ ಜನರ ತೆರಿಗೆ ಹಣವನ್ನು ಪೋಲು ಮಾಡಲಾಗಿದೆ ಎಂದು ಆರೋಪಿಸಿದರು.

ಸಂಸದರು, ಬಿಜೆಪಿ ಶಾಸಕರು ಈ ಕಾಮಗಾರಿ ಬಗ್ಗೆ ಬಹಳ ಸಂಭ್ರಮ ಆಚರಿಸಿದ್ದರು. ನಿರ್ಮಾಣಕ್ಕೆ 10 ವರ್ಷಗಳ ಕಾಲ ತೆಗೆದು ಕೊಂಡ ಈ ಕಾಮಗಾರಿಗೆ ತಗಲಿದ ವೆಚ್ಚ ಪಾವತಿ ಮಾಡಿದ ಹಣ ಮತ್ತು ಈ ಕಳಪೆ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಕೂಡಲೇ ತನಿಖೆ ಆದೇಶಿಸಬೇಕೆಂದು ಲೋಕೋಪಯೋಗಿ ಇಲಾಖೆ ಮತ್ತು ಕೇಂದ್ರ ಹೆದ್ದಾರಿ ಇಲಾಖೆಗೆ ಐವನ್ ಡಿಸೋಜ ಆಗ್ರಹಿಸಿದ್ದಾರೆ.

ಈ ಕಾಮಗಾರಿಯಲ್ಲಿ ಸರಕಾರಿ ಹಣ ಪೋಲು ಮಾಡಲಾಗಿದೆ. ಕಾಮಗಾರಿ ಕೇಂದ್ರ ಮತ್ತು ರಾಜ್ಯದ ಲೋಕೋಪಯೋಗಿ ಇಲಾಖೆಗಳು  ಸರಿಯಾಗಿ ಕರ್ತವ್ಯ ನಿರ್ವಹಣೆ ಮಾಡಿಲ್ಲ. 10 ವರ್ಷಗಳಿಂದ ಈ ಕಾಮಗಾರಿ ನನೆಗುದಿಗೆ ಬಿದ್ದು, ಈ ಕಾಮಗಾರಿಯಿಂದ ಸರಕಾರಕ್ಕೆ ಮತ್ತು ಇಲಾಖೆಗೆ ತುಂಬಾ ನಷ್ಟ ಉಂಟಾಗಿದೆ. ಈ ಜವಾಬ್ದಾರಿಯನ್ನು ಲೋಕಸಭಾ ಸದಸ್ಯರೇ ವಹಿಸಿಕೊಳ್ಳಬೇಕು ಎಂದರು.

ಈ ಕಾಮಗಾರಿ ಬಗ್ಗೆ ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬೇಕು. ಕಳಪೆ ಕಾಮಗಾರಿ ನಡೆದ ಸ್ಥಳವು ತೀರಾ ಅಪಾಯಕಾರಿ ಅಂಚಿನಲ್ಲಿದ್ದು, ಈ ಬಗ್ಗೆ ಸುರಕ್ಷತಾ ದೃಷ್ಟಿಯಿಂದ ಕ್ರಮ ವಹಿಸಬೇಕು. ವಾಹನ ಸಂಚಾರಕ್ಕೆ ಅಪಾಯ ಇರುವುದರಿಂದ ಇಲಾಖೆ ಕೂಡಲೇ ತಾಂತ್ರಿಕ ವರದಿಯನ್ನು ತೆಗೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿಗೆ ಐವನ್ ಡಿಸೋಜ ಮನವಿ ಮಾಡಿದ್ದಾರೆ.

ಈ ಸಂದರ್ಭ ಅಶಿತ್ ಪಿರೇರಾ, ಜೇಮ್ಸ್ ಪ್ರವೀಣ್,  ಭಾಸ್ಕರ್ ರಾವ್,  ಗುರುರಾಜ್, ರಘುರಾಜ್, ಶ್ರೀಧರ ಶೆಟ್ಟಿ ಕಡೇಕರ್, ಹಬಿಬುಲ್ಲ, ಬಾಜಿಲ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News