ರಕ್ತದಾನಿಗಳಿಗೆ ಚೈತನ್ಯ ತುಂಬಿದ ಕೇಂದ್ರ
ಕೊರೋನ ಭೀತಿಯಿಂದ ಆರಂಭವಾದ ಲಾಕ್ ಡೌನಿನಿಂದಾಗಿ ಜನ ಒಂದೆಡೆ ಹಸಿವೆಯಿಂದ ತತ್ತರಿಸಿದರೆ ಇನ್ನೊಂದೆಡೆ ರಕ್ತದ ಅವಶ್ಯಕತೆ ಇರುವವರು ಹತಾಶೆಗೊಳಗಾದರು. ರಕ್ತದಾನ ಶಿಬಿರಗಳು ಸ್ಥಗಿತಗೊಂಡ ಕಾರಣ ರಕ್ತನಿಧಿಗಳು ಬರಿದಾದವು. ಒಂದೆರಡು ಪಾಸಿಟಿವ್ ಗುಂಪುಗಳ ರಕ್ತವನ್ನಷ್ಟೇ ದಾಸ್ತಾನು ಹೊಂದಿದ್ದು ನೆಗೆಟಿವ್ ಗುಂಪುಗಳ ಒಂದೇ ಒಂದು ಯೂನಿಟ್ ರಕ್ತ ದಾಸ್ತಾನು ಇಲ್ಲದೆ ರಕ್ತನಿಧಿಗಳಿಗೇ 'ರಕ್ತಹೀನತೆ' ಕಾಡಿತು !
ಗರ್ಭಿಣಿಯರು, ತಲಸ್ಸೇಮಿಯಾ, ಡಯಾಲಿಸಿಸ್, ಕ್ಯಾನ್ಸರ್, ತುರ್ತು ಶಸ್ತ್ರಚಿಕಿತ್ಸೆಯ ರೋಗಿಗಳಿಗೆ ವ್ಯವಸ್ಥೆ ಸಾಲದಾಯಿತು. ಕೊರತೆಯನ್ನು ನೀಗಿಸಲು ಆರೋಗ್ಯವಂತ ರಕ್ತದಾನಿಗಳು ಸ್ವಯಂಪ್ರೇರಿತರಾಗಿ ರಕ್ತನಿಧಿಗಳನ್ನು ಸಂದರ್ಶಿಸಿ, ಸುರಕ್ಷಿತ ಅಂತರ ಸಹಿತ ಕಾನೂನಿನ ಎಲ್ಲ ಕಟ್ಟುಪಾಡುಗಳನ್ನು ಅನುಸರಿಸಿ ರಕ್ತದಾನ ಮಾಡುವಂತೆ ರಕ್ತನಿಧಿಗಳು ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವಿನಂತಿಸಿಕೊಂಡವು. ಈ ಕುರಿತು ವಾಟ್ಸ್ಆ್ಯಪ್, ಟ್ವಿಟರುಗಳಲ್ಲಿ ರೋಗಿಗಳ ಸಂಬಂಧಿಗಳು ಗೋಳು ತೋಡಿಕೊಂಡರು. ಅವರ ಕಷ್ಟಕ್ಕೆ ಮರುಗಿದ ಸ್ವಯಂಪ್ರೇರಿತ ರಕ್ತದಾನಿಗಳು ಚುರುಕಾದರು.
ಆದರೆ ಈ ವೇಳೆಯಲ್ಲಿ ಹೊಸತೊಂದು ಸವಾಲು ರಕ್ತದಾನಿಗಳಿಗೆ ಎದುರಾಯಿತು. ರಕ್ತದಾನಿಗಳನ್ನು ಪೊಲೀಸರು ರಸ್ತೆಯಲ್ಲಿ ತಡೆಯಲು ಆರಂಭಿಸಿದರು. ಪೊಲೀಸರು ಅಸಹಾಯಕರಾಗಿದ್ದರು. ಅವರಿಗೆ ಈ ಬಗ್ಗೆ ಯಾವುದೇ ನಿರ್ದೇಶನ ಇಲ್ಲದ ಕಾರಣ ಅವರು ಎಲ್ಲರನ್ನೂ 'ಸಮಾನವಾಗಿ' ಕಾಣುತ್ತಿದ್ದರು. ಕೆಲವೆಡೆ ಮಾತಿನ ಚಕಮಕಿ ಏರ್ಪಟ್ಟದ್ದೂ ಇದೆ. ಯಾರದೋ ಜೀವ ಉಳಿಸಲು ತಮ್ಮ ಜೀವ ಕೈಯಲ್ಲಿ ಹಿಡಿದು ಹೊರಟ ರಕ್ತದಾನಿಗಳು ಪೊಲೀಸರಿಗೆ ಉತ್ತರಿಸಲು, ಸಮಾಧಾನ ಪಡಿಸಲೂ ಆಗದೇ ರಸ್ತೆ ಮಧ್ಯೆ ಕಣ್ಣೀರು ಹಾಕಿದ ಘಟನೆಯೂ ನಡೆದು ಹೋಯಿತು. ಆದರೆ ಈ ಎಲ್ಲ ತೊಡಕುಗಳಿಗೆ ಸದ್ಯ ಪರಿಹಾರ ದೊರೆತಿದೆ.
ರಾಜ್ಯಗಳಲ್ಲಿರುವ ಎಲ್ಲ ರಕ್ತನಿಧಿಗಳನ್ನು ನಿಯಂತ್ರಿಸುವ State Blood Transfusion Council ಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಮತ್ತು N.B.T.C ಯಿಂದ ಸ್ವಷ್ಟ ನಿರ್ದೇಶನವನ್ನು ನೀಡಲಾಗಿದೆ. ಈ ನಿರ್ದೇಶನದಂತೆ ಇನ್ನು ಮುಂದೆ ಲಾಕ್ ಡೌನ್ ಅವಧಿ ಮುಗಿಯುವ ತನಕ ರಕ್ತದಾನ ಮಾಡುವ ಉದ್ದೇಶದಲ್ಲಿ ರಕ್ತನಿಧಿಗಳನ್ನು ಸಂದರ್ಶಿಸುವ ದಾನಿಗಳಿಗೆ ರಾಜ್ಯ ಸರ್ಕಾರದಿಂದ ವಿಶೇಷ ಪಾಸ್ ಏರ್ಪಾಡು ಆಗಲಿದೆ. ಲಾಕ್ ಡೌನಿನಿಂದ ರಕ್ತದಾನದಂತಹ ಚಟುವಟಿಕೆಗಳಿಗೆ ಅಡಚಣೆ ಉಂಟಾಗಬಾರದು. ಲಾಕ್ ಡೌನ್ ನಿರ್ಬಂಧ ಹಾಗೂ ಸಂಚಾರ ನಿಯಂತ್ರಣದಲ್ಲಿ ರಕ್ತದಾನದಂತಹ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ ಕರ್ತವ್ಯ ನಿರ್ವಹಿಸಬೇಕು ಎಂದಿದೆ. ರಕ್ತದಾನಿಗಳಿಗೆ ನೀಡಬೇಕಾದ ಪಾಸ್ ನಮೂನೆಯನ್ನು ನಿರ್ದೇಶನದಲ್ಲಿ ಕೇಂದ್ರ ಆರೋಗ್ಯ ಇಲಾಖೆಯು ಒದಗಿಸಿದೆ.
ಇದೇ ವಿಷಯದ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಕರ್ನಾಟಕದ ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಪತ್ರವೊಂದನ್ನು ಬರೆದು ರಕ್ತದ ಕೊರತೆ ಕಾಡದಂತೆ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂದು ಸ್ವಷ್ಟವಾಗಿ ತಿಳಿಸಿದ್ದಾರೆ. ಈಗಾಗಲೇ ಬಳಕೆಯಲ್ಲಿ ಇರುವ ಇ-ರಕ್ತಕೋಶ್ ಪೋರ್ಟಲಿನಲ್ಲಿ ರಕ್ತದ ದಾಸ್ತಾನಿನ ವಿವರ ಮತ್ತು ರಕ್ತದಾನಿಗಳ ಕುರಿತ ವಿವರಗಳನ್ನು ಸಾಧ್ಯವಿರುವಷ್ಟು ಅಧಿಕ ಸಂಖ್ಯೆಯಲ್ಲಿ ದಾಖಲಿಸಬೇಕು, ಕೋವಿಡ್ 19 ವಿಷಮ ಪರಿಸ್ಥಿತಿಯಲ್ಲಿ ರಕ್ತದಾನ ಮಾಡುವ ದಾನಿಗಳಿಗೆ ವಿಶೇಷ ಪ್ರಶಂಸಾಪತ್ರವನ್ನು ನೀಡುವುದು ಸೂಕ್ತ ಎಂದು ಪತ್ರದಲ್ಲಿ ಕೇಂದ್ರ ಸಚಿವರು ತಿಳಿಸಿದ್ದಾರೆ.
ಕೇಂದ್ರದ ಈ ನಡೆಯಿಂದ ರಕ್ತದ ಕೊರತೆ ನೀಗಿಸಲು ಸಾಧ್ಯವಾಗಿದೆ. ಇನ್ನು ಧೈರ್ಯದಲ್ಲಿ ಕೆಲಸ ಮಾಡಬಹುದು.. ಎಂದು ರೆಡ್ ಕ್ರಾಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಂಯೋಜಕ ಪ್ರವೀಣ್ ಸಂತಸ ವ್ಯಕ್ತಪಡಿಸಿದ್ದಾರೆ. ರೋಗಿಗಳಿಗೆ ಮಾತ್ರವಲ್ಲದೇ ರಕ್ತನಿಧಿಗಳ ಮಟ್ಟಿಗೂ ಈ ಸೂಚನೆಯು ಸಂಜೀವಿನಿಯಂತೆ ಪರಿಣಮಿಸಿದೆ.