×
Ad

ಮಂಗಳೂರು: ಖಾಸಗಿ ಆಸ್ಪತ್ರೆ ಕೊರೋನ ಹಾಟ್‌ಸ್ಪಾಟ್ !

Update: 2020-04-27 19:55 IST

ಮಂಗಳೂರು, ಎ.27: ಕೊರೋನ ಸೋಂಕಿಗೆ ಸಂಬಂಧಿಸಿ ದ.ಕ. ಜಿಲ್ಲೆಯಲ್ಲಿ ಮಂಗಳೂರು ಹೊರ ವಲಯದ ಖಾಸಗಿ ಆಸ್ಪತ್ರೆ ಹಾಟ್‌ಸ್ಪಾಟ್ ಆಗಿ ಪರಿಣಮಿಸಿದೆ. ಸೋಮವಾರ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕುಲಶೇಖರದ ಇಬ್ಬರಿಗೆ ಕೊರೋನ ಸೋಂಕು ದೃಢಗೊಳ್ಳುವುದರೊಂದಿಗೆ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಒಟ್ಟು ಸಂಖ್ಯೆ 20ಕ್ಕೆ ಏರಿಕೆಯಾಗಿದೆ.

ಮನಪಾ ವ್ಯಾಪ್ತಿಯ ಕುಲಶೇಖರ ನಿವಾಸಿ 80 ವರ್ಷದ ವೃದ್ಧೆ ಹಾಗೂ ಅವರ 45 ವರ್ಷದ ಪುತ್ರನಲ್ಲಿ ಕೊರೋನ ಸೋಂಕು ದೃಢಪಟ್ಟಿದೆ. ಇತ್ತೀಚೆಗೆ ಪಡೀಲ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊರೋನ ಸೋಂಕಿನಿಂದ ಮೃತಪಟ್ಟ ವೃದ್ಧೆಯ ಸಮೀಪದ ಬೆಡ್‌ನಲ್ಲಿ ಈ 80 ವರ್ಷದ ವೃದ್ಧೆ ಚಿಕಿತ್ಸೆ ಪಡೆಯುತ್ತಿದ್ದರು. ಪುತ್ರ ಅವರ ಆರೈಕೆ ಮಾಡುತ್ತಿದ್ದು, ಅವರಿಗೂ ಸೋಂಕು ದೃಢಪಟ್ಟಿದೆ. ಈ ನಡುವೆ ನಿನ್ನೆ ಆಸ್ಪತ್ರೆಯ ಸಿಬ್ಬಂದಿಯೊಬ್ಬರಿಗೂ ಕೊರೋನ ಸೋಂಕು ದೃಢಪಟ್ಟಿತ್ತು. ಆಸ್ಪತ್ರೆಯ 190 ಸಿಬ್ಬಂದಿ ಸಹಿತ 200ಕ್ಕೂ ಅಧಿಕ ಜನರ ತಪಾಸಣೆ ನಡೆಸಲಾಗಿದ್ದು, ಎಲ್ಲರನ್ನೂ ಕ್ವಾರಂಟೈನ್‌ಗೊಳಪಡಿಸಲಾಗಿದೆ.

ಎ.19ರಂದು ಬಂಟ್ವಾಳ ಪೇಟೆಯ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಈ ಮಹಿಳೆಯ ಅತ್ತೆ ಪಡೀಲ್ ಸಮೀಪದ ಈ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಆರೋಗ್ಯ ವಿಚಾರಿಸಲೆಂದು ಹೋಗಿದ್ದ ಸಂದರ್ಭ ಅತ್ತೆಗೂ ಸೋಂಕು ತಗಲಿದೆ ಎನ್ನಲಾಗಿದೆ. ಇದರಿಂದ ಅತ್ತೆ ಎ.23ರಂದು ಮೃತಪಟ್ಟಿದ್ದರು. ಅಂದೇ ಆಸ್ಪತ್ರೆಯನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿತ್ತು. ಈ ಮೂಲಕ ಬಂಟ್ವಾಳದ ಒಂದೇ ಕುಟುಂಬದ ಇಬ್ಬರು ಮೃತರಾಗಿದ್ದಾರೆ. ಪ್ರಥಮವಾಗಿ ಮೃತಪಟ್ಟ ಮಹಿಳೆಯಿಂದ ನೆರೆಮನೆಯ ಇಬ್ಬರಿಗೆ ಸೋಂಕು ತಗಲಿತ್ತು. ನಿನ್ನೆ ಆಸ್ಪತ್ರೆಯ ಸಿಬ್ಬಂದಿ ಹಾಗೂ ಇಂದು ದೃಢಗೊಂಡ ಇಬ್ಬರಿಗೆ ಆಸ್ಪತ್ರೆಯಲ್ಲಿ ಸೋಂಕು ತಗಲಿದೆ.

ಬಂಟ್ವಾಳದಿಂದ ಮಂಗಳೂರಿನತ್ತ !

ದ.ಕ. ಜಿಲ್ಲೆಯಲ್ಲಿ ಸದ್ಯ ಬಂಟ್ವಾಳ ಹಾಟ್‌ಸ್ಪಾಟ್ ಆಗಿತ್ತು. ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಕೊರೋನ ಸೋಂಕಿತರಿಬ್ಬರ ಸಾವು ಜಿಲ್ಲೆಯ ಪಾಲಿಗೆ ಸಾಕಷ್ಟು ಆತಂಕವನ್ನೇ ಸೃಷ್ಟಿಸಿತ್ತು. ಇದಕ್ಕೂ ಮೊದಲು ಮಂಗಳೂರು ಹೊರವಲಯದ ತೊಕ್ಕೊಟ್ಟಿನಲ್ಲೂ ಒಂದು ಪ್ರಕರಣ ಕಾಣಿಸಿಕೊಂಡಿತ್ತು. (ಸದ್ಯ ಅವರು ಆಸ್ಪತ್ರೆಯಿಂದ ಗುಣಮುಖರಾಗಿ ಮನೆ ಸೇರಿದ್ದಾರೆ.) ಇಂದು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕುಲಶೇಖರ ನಿವಾಸಿಗಳಿಬ್ಬರಲ್ಲಿ ಕೊರೋನ ಸೋಂಕು ದೃಢಪಡುವುದರೊಂದಿಗೆ ಮಂಗಳೂರು ನಗರಕ್ಕೂ ಸೋಂಕು ವ್ಯಾಪಿಸಿದಂತಾಗಿದೆ.

ಮಂಗಳೂರು ನಗರ ಹೊರ ವಲಯದ ಬೆಳ್ತಂಗಡಿ, ಬಂಟ್ವಾಳ, ತೊಕ್ಕೊಟ್ಟಿನಲ್ಲಿ ಕೊರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಹೇಳಿಕೊಳ್ಳುತ್ತಿದ್ದ ಮಂಗಳೂರಿಗರು ಇದೀಗ ತಮ್ಮ ಆಸುಪಾಸಿನಲ್ಲೇ ಪ್ರಕರಣಗಳು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗುತ್ತಿದೆ.
ಕುಲಶೇಖರ ಸಮೀಪದ ಶಕ್ತಿನಗರದ ಕಕ್ಕೆಬೆಟ್ಟು ಪ್ರದೇಶವನ್ನು ಕಂಟೈನ್ಮೆಂಟ್ ರೆನ್ ಆಗಿ ಜಿಲ್ಲಾಡಳಿತ ನಿರ್ಬಂಧಿಸಿದೆ. ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ಸೋಮವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಗಡಿ ಗುರುತು ಮಾಡಿದ್ದಾರೆ. ಬಳಿಕ ಮಂಗಳೂರು ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಭೇಟಿ ನೀಡಿ ಪರಿಶೀಲಿಸಿದರು.

ಶಕ್ತಿನಗರದ ಪದವು ಗ್ರಾಮದ 22 ಮನೆ ವ್ಯಾಪ್ತಿ ಪ್ರದೇಶಗಳು ಕಂಟೈನ್ಮೆಂಟ್ ವಲಯಕ್ಕೊಳಪಡುತ್ತವೆ. ಅಲ್ಲಿನವರಿಗೆ ಹಾಲು, ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಗೆ ಪಾಲಿಕೆಯಿಂದ ವ್ಯವಸ್ಥೆ ಮಾಡಲಾಗುವುದು.
- ಶಾನಾಡಿ ಅಜಿತ್ ಕುಮಾರ್ ಹೆಗ್ಡೆ,
ಆಯುಕ್ತರು, ಮನಪಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News