ಕೊರೋನ ಬಳಿಕ ಮೊದಲ ಬಾರಿಗೆ ಕೆಲಸಕ್ಕೆ ಹಾಜರಾದ ಬ್ರಿಟಿಶ್ ಪ್ರಧಾನಿ

Update: 2020-04-27 16:13 GMT

ಲಂಡನ್, ಎ. 27: ಕೊರೋನವೈರಸ್ ಸೋಂಕಿಗೆ ಒಳಗಾಗಿ ಮೂರು ವಾರಗಳ ಹಿಂದೆ ಆಸ್ಪತ್ರೆಗೆ ದಾಖಲಾದ ಬಳಿಕ ಮೊದಲ ಬಾರಿಗೆ ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಸೋಮವಾರ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ಡೌನಿಂಗ್ ಸ್ಟ್ರೀಟ್‌ನಲ್ಲಿರುವ ಕಚೇರಿಗೆ ಹಾಜರಾದ ಬಳಿಕ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ ಅವರು, ‘‘ನಾನು ಊಹಿಸಿರುವುದಕ್ಕಿಂತಲೂ ಹೆಚ್ಚು ಸಮಯ’’ ಗೈರುಹಾಜರಾಗಿರುವುದಕ್ಕಾಗಿ ಕ್ಷಮೆಯಾಚಿಸುವುದಾಗಿ ಹೇಳಿದರು. ಕಾಯಿಲೆಯಿಂದ ಬಳಲಿದ ಬಳಿಕ ಮೊದಲ ಬಾರಿಗೆ ಕಚೇರಿಗೆ ಹಾಜರಾದ ಅವರು ಸ್ವಲ್ಪ ತೆಳ್ಳಗಾದಂತೆ ಕಂಡುಬಂದರು.

ಸರಕಾರದ ಮಾತು ಕೇಳಿ ಒಂದು ತಿಂಗಳ ಕಾಲ ಮನೆಯಲ್ಲೇ ಉಳಿದಿರುವುದಕ್ಕಾಗಿ ಅವರು ಬ್ರಿಟಿಶ್ ಜನತೆಗೆ ಧನ್ಯವಾದ ಸಲ್ಲಿಸಿದರು. ಬ್ರಿಟನ್‌ನಲ್ಲಿ ಈಗಾಗಲೇ ಕೊರೋನವೈರಸ್‌ನಿಂದಾಗಿ ಮೃತಪಟ್ಟವರ ಸಂಖ್ಯೆ 20,000ವನ್ನು ದಾಟಿದೆ.

ಅವರು ಒಂದು ವಾರ ಆಸ್ಪತ್ರೆಯಲ್ಲಿ ಕಳೆದಿದ್ದರು. ಆ ಪೈಕಿ ಮೂರು ದಿನ ತುರ್ತು ನಿಗಾ ಘಟಕದಲ್ಲಿದ್ದರು. ‘‘ನನ್ನ ಪರಿಸ್ಥಿತಿ ಏನು ಬೇಕಾದರೂ ಆಗಬಹುದಿತ್ತು’’ ಎಂಬುದಾಗಿ ಅವರು ಬಳಿಕ ವೀಡಿಯೊ ಹೇಳಿಕೆಯೊಂದರಲ್ಲಿ ಹೇಳಿದ್ದರು.

ಬ್ರಿಟನ್‌ನಲ್ಲಿ ಕನಿಷ್ಠ ದೈನಂದಿನ ಸಾವು ದಾಖಲು

ಬ್ರಿಟನ್‌ನಲ್ಲಿ ನಾಲ್ಕು ವಾರಗಳಲ್ಲೇ ಮೊದಲ ಬಾರಿಗೆ ರವಿವಾರ ಕನಿಷ್ಠ ಕೊರೋನ ವೈರಸ್ ಸಾವುಗಳು ದಾಖಲಾಗಿವೆ. ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 413 ಮಂದಿ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ರವಿವಾರ ಹೇಳಿದ್ದಾರೆ.

ಇದಕ್ಕಿಂತ ಮೊದಲು, ಮಾರ್ಚ್ 31ರಂದು ದಾಖಲಾದ 381 ಸಾವುಗಳು ಕನಿಷ್ಠ ದೈನಂದಿನ ಸಾವಿನ ಸಂಖ್ಯೆಯಾಗಿತ್ತು. ಬ್ರಿಟನ್‌ನಲ್ಲಿ ಕೋವಿಡ್-19ರಿಂದಾಗಿ ಮೃತಪಟ್ಟವರ ಸಂಖ್ಯೆ 20,732ನ್ನು ತಲುಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News