ಲಾಕ್‌ಡೌನ್ ಸದುಪಯೋಗ: ಜಪ್ಪಿನಮೊಗರು ಬಳಿ ಕೆರೆ ಸ್ವಚ್ಛಗೊಳಿಸಿದ ಸ್ಥಳೀಯರು
ಮಂಗಳೂರು, ಎ. 27: ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಹುತೇಕರು ಮನೆಯಲ್ಲಿಯೇ ಉಳಿಯುವಂತಾಗಿದೆ. ಈ ಸಮಯದ ಸದುಪಯೋಗ ಪಡಿಸುವ ನಿಟ್ಟಿನಲ್ಲಿ ಜಪ್ಪಿನಮೊಗರು ಕಂರ್ಭಿಸ್ಥಾನದ ಕೆರೆಯನ್ನು ಸ್ಥಳೀಯರು ಸ್ವಚ್ಛಗೊಳಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪುರಾಣ ಪ್ರಸಿದ್ಧವಾದ ಈ ಕೆರೆಯನ್ನು ಸ್ಥಳೀಯ 20 ಮಂದಿಯ ತಂಡ ಸ್ವಚ್ಛಗೊಳಿಸಿದೆ. ಜಪ್ಪಿನಮೊಗರು ವೈದ್ಯನಾಥ ದೈವಸ್ಥಾನ ಹಾಗೂ ಅದರಿಂದ ಸುಮಾರು 100 ಮೀಟರ್ ದೂರದಲ್ಲಿರುವ ಕಂರ್ಭಿ ಕೆರೆಗೂ ನಿಕಟವಾದ ಸಂಬಂಧವಿದೆ. ಭಕ್ತರು ಈ ಕೆರೆಯ ನೀರಿಗೆ ದೇವರ ತೀರ್ಥದ ಸ್ಥಾನ ನೀಡಿದ್ದಾರೆ. ಇಂತಹ ಪವಿತ್ರ ಕೆರೆಯು ಹಲವಾರು ಕಾರಣಗಳಿಂದ ಮಲಿನಗೊಂಡಿತ್ತು. ಇದನ್ನರಿತ ಸ್ಥಳೀಯರ ತಂಡ ಲಾಕ್ ಡೌನ್ ಸಂದರ್ಭ ಸುರಕ್ಷಿತ ಅಂತರ ಕಾಯ್ದುಕೊಂಡು ಶ್ರಮದಾನದ ಮೂಲಕ ಕೆರೆ ಸ್ವಚ್ಚಗೊಳಿಸಿದೆ.
ಸುತ್ತಲಿನ ಕೆಲವು ಮನೆಗಳ ಶೌಚಗೃಹ, ಅಡುಗೆ ಮನೆಯ ನೀರು ಸಹಿತ ವಿವಿಧ ತ್ಯಾಜ್ಯ ನೀರು ಈ ಕೆರೆ ಸೇರುತ್ತಿತ್ತು. ಜತೆಗೆ ಕೆಸರು, ಪೊದೆ ಆವರಿಸಿ ಕೆರೆಯೇ ನಿಷ್ಪ್ರಯೋಜಕ ಸ್ಥಿತಿಯಲ್ಲಿತ್ತು. ಪರಿಣಾಮವಾಗಿ ಪುರಾಣ ಪ್ರಸಿದ್ಧ ಕೆರೆ ಕಾಣುತ್ತಲೇ ಇರಲಿಲ್ಲ.
ಇದೀಗ ಶ್ರಮದಾನ ಮಾಡಿದ ಬಳಿಕ ಕೆರೆ ಸಂಪೂರ್ಣ ಸ್ವಚ್ಚಗೊಂಡಿದ್ದು, ಕೆಸರು, ಹುಲ್ಲುಪೊದೆ ಕಾಣುತ್ತಿಲ್ಲ. ಮುಂದೆ ಸ್ಥಳೀಯ ಆಡಳಿತ ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸಿದರೆ ಕೆರೆ ಮತ್ತಷ್ಟು ಸುಧಾರಣೆಯಾಗಲಿದೆ ಎಂದು ಸ್ಥಳೀಯರು ತಿಳಿಸುತ್ತಾರೆ.