‘ಭಾರತೀಯರಿಗೆ ಅವಮಾನ’: ದುಪ್ಪಟ್ಟು ಬೆಲೆಗೆ ದೋಷಪೂರಿತ ಕೊರೋನ ಕಿಟ್ ಖರೀದಿ ಬಗ್ಗೆ ರಾಹುಲ್

Update: 2020-04-27 16:57 GMT

ಹೊಸದಿಲ್ಲಿ, ಎ.27: ಕೊರೋನ ಸೋಂಕು ಪರೀಕ್ಷಿಸುವ, ಚೀನಾದಲ್ಲಿ ತಯಾರಾದ ತ್ವರಿತ ಪರೀಕ್ಷಾ ಕಿಟ್‌ಗಳನ್ನು ಭಾರತದಲ್ಲಿ ದುಪ್ಪಟ್ಟು ದರದಲ್ಲಿ ಮಾರಲಾಗುತ್ತಿದೆ ಎಂಬ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಇದು ಭಾರತೀಯರಿಗೇ ಮಾಡಿದ ಅವಮಾನವಾಗಿದೆ ಎಂದಿದ್ದಾರೆ.

ಚೀನಾದಿಂದ ಆಮದು ಮಾಡಿಕೊಂಡಿರುವ ಕ್ಷಿಪ್ರ ಪರೀಕ್ಷೆಯ ಕಿಟ್‌ಗಳು ದೋಷಯುಕ್ತವಾಗಿರುವುದರಿಂದ ಹಲವು ರಾಜ್ಯಗಳಲ್ಲಿ ಇದರ ಬಳಕೆಯನ್ನು ಸ್ಥಗಿತಗೊಳಿಸಲಾಗಿದೆ. ಇಡೀ ದೇಶವೇ ಕೊರೋನ ಸೋಂಕಿನ ವಿರುದ್ಧ ಹೋರಾಟದಲ್ಲಿ ನಿರತವಾಗಿರುವಾಗಲೂ ಕೆಲವರು ನಿರ್ಲಜ್ಜ ರೀತಿಯಿಂದ ಭಾರೀ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಕೆಲವರ ಇಂತಹ ಭ್ರಷ್ಟ ಮನಸ್ಥಿತಿಯಿಂದಾಗಿ ತಲೆ ತಗ್ಗಿಸುವಂತಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

  ದೇಶದ ಮಿಲಿಯಾಂತರ ಸಹೋದರ ಸಹೋದರಿಯರು ಪಡುತ್ತಿರುವ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಕೆಲವರು ಅಕ್ರಮ ರೀತಿಯಲ್ಲಿ ಲಾಭ ಗಳಿಸಲು ಪ್ರಯತ್ನಿಸುತ್ತಿರುವುದನ್ನು ನಂಬಲೂ ಸಾಧ್ಯವಿಲ್ಲವಾಗಿದೆ. ಈ ಭ್ರಷ್ಟಾಚಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಧಾನಿಯನ್ನು ಆಗ್ರಹಿಸುವುದಾಗಿ ಮತ್ತೊಂದು ಟ್ವೀಟ್ ಮಾಡಿದ್ದಾರೆ.

  ಭಾರತದಲ್ಲಿ ಕೊರೋನ ಸೋಂಕು ಪರೀಕ್ಷೆಯ ಪ್ರಮಾಣ ಹೆಚ್ಚಬೇಕಿರುವ ಸಂದರ್ಭದಲ್ಲೇ ಚೀನಾದಿಂದ ದೋಷಪೂರಿತ ಕಿಟ್‌ಗಳನ್ನು ದುಪ್ಪಟ್ಟು ಹಣ ನೀಡಿ ಆಮದು ಮಾಡಿಕೊಳ್ಳಲಾಗಿದೆ. ಈ ಅವ್ಯವಹಾರಕ್ಕೆ ಯಾರು ಹೊಣೆ ಎಂಬುದನ್ನು ಕಂಡುಹಿಡಿದು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್‌ನ ಮತ್ತೊಬ್ಬ ಮುಖಂಡ ಗೌರವ್ ಗೊಗೋಯಿ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.

“245 ರೂ.ಗೆ ಆಮದು ಮಾಡಿಕೊಳ್ಳುತ್ತಿರುವ ಚೀನಾದ ಕಿಟ್‌ಗಳನ್ನು ಐಸಿಎಂಆರ್(ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್) 600 ರೂ. ಕೊಟ್ಟು ಖರೀದಿಸುತ್ತಿರುವುದು ಯಾಕೆ?, ಕೊರೋನ ಸೋಂಕಿನ ಮಧ್ಯೆಯೇ, ಬಡವರಿಗೆ ತೊಂದರೆ ಕೊಟ್ಟು ಯಾರೂ ಲಾಭ ಮಾಡಬಾರದು. ಸರಕಾರ ಈ ಬಗ್ಗೆ ಸ್ಪಷ್ಟನೆ ನೀಡುವುದಾಗಿ ನಿರೀಕ್ಷಿಸುತ್ತೇನೆ” ಎಂದು ಕಾಂಗ್ರೆಸ್‌ನ ಅಹ್ಮದ್ ಪಟೇಲ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News