×
Ad

ಮಂಡ್ಯ ಮೂಲದ ಕೊರೋನ ಸೋಂಕಿತ ತಂಗಿದ್ದ ಹಿನ್ನೆಲೆ: ತೆಕ್ಕಟ್ಟೆಯಲ್ಲಿ ಪೆಟ್ರೋಲ್ ಬಂಕ್ ಸೀಲ್‌ಡೌನ್

Update: 2020-04-28 14:28 IST

ಕುಂದಾಪುರ, ಎ.28: ಮುಂಬಯಿನಿಂದ ಖರ್ಜೂರ ಸಾಗಾಟದ ಲಾರಿಯಲ್ಲಿ ಬಂದಿದ್ದ ಮಂಡ್ಯ ಮೂಲದ ಕೊರೋನ ಸೋಂಕಿತ ವ್ಯಕ್ತಿಯೋರ್ವ ಬಂದು ಸ್ನಾನ ಮಾಡಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಕುಂದಾಪುರ ತಾಲೂಕಿನ ತೆಕ್ಕಟ್ಟೆಯ ಪೆಟ್ರೋಲ್ ಬಂಕ್ ಅನ್ನು ಸೀಲ್ ಡೌನ್ ಮಾಡಲಾಗಿದೆ.

ಸೋಂಕಿತ ವ್ಯಕ್ತಿ ತೆಕ್ಕಟ್ಟೆ ಪೆಟ್ರೋಲ್ ಬಂಕ್‌ಗೆ ಆಗಮಿಸಿರುವುದು ಎ.27ರಂದು ತಡರಾತ್ರಿ ಪರಿಶೀಲನೆ ಬಳಿಕ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಎ.28 ರಂದು ಪೆಟ್ರೋಲ್ ಬಂಕ್‌ನ್ನು ಸೀಲ್ಡೌನ್ ಮಾಡಲಾಗಿದೆ.

 ಸೋಂಕಿತ ವ್ಯಕ್ತಿಯ ಟ್ರಾವೆಲ್ ಹಿಸ್ಟರಿಯನ್ನು ಪರಿಶೀಲಿಸಿದಾಗ ಆತ ತೆಕ್ಕಟ್ಟೆ ಯಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿ ಸ್ನಾನ ಮಾಡಿ, ತಂಗಿರುವುದು ಅಲ್ಲಿನ ಸಿಸಿಟಿವಿ ಕ್ಯಾಮರಾದ ಮೂಲಕ ದೃಢಪಟ್ಟಿದೆ. ಈ ಸಂಬಂಧ ಪೆಟ್ರೋಲ್ ಬಂಕ್ ಮಾಲಕ, ಸಿಬ್ಬಂದಿ ಮತ್ತು ಲಾರಿ ಸಾಗಿ ಬಂದ ಸಾಸ್ತಾನ ಟೋಲ್ ಆರು ಮಂದಿ ಸಿಬ್ಬಂದಿಯನ್ನು ಕ್ವಾರೆಂಟೈನ್‌ನಲ್ಲಿ ಇರಿಸಲಾಗಿದೆ.

ಮುಂಜಾಗೃತಾ ಕ್ರಮವಾಗಿ ಜಿಲ್ಲಾಡಳಿತದಂತೆ ಮಂಗಳವಾರ ಬೆಳಗ್ಗೆ ತೆಕ್ಕಟ್ಟೆ ಪೆಟ್ರೋಲ್ ಬಂಕ್ ಸುತ್ತ ಕೋಟ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿ ಪೊಲೀಸ್ ಬ್ಯಾಂಡ್ ಹಾಕಿ ಸೀಲ್ ಮಾಡಿದ್ದಾರೆ. ಬಳಿಕ ಕುಂದಾಪುರ ಪುರಸಭೆ ಕಾರ್ಮಿಕರು ಪೆಟ್ರೋಲ್ ಪಂಪ್ ಸುತ್ತ ರಾಸಾಯನಿಕವನ್ನು ಸಿಂಪಡಿಸುವ ಕಾರ್ಯ ನಡೆಸಿದರು.

ಸೋಮವಾರ ತಡರಾತ್ರಿ ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ್ ಉಡುಪ, ಬೈಂದೂರು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಪ್ರೇಮಾನಂದ, ಕೋಟ ಠಾಣಾಧಿಕಾರಿ ನಿತ್ಯಾನಂದ ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಆರಂಭದಲ್ಲಿ ಈ ಸೋಂಕಿತ ವ್ಯಕ್ತಿ ಮರವಂತೆ ಪೆಟ್ರೋಲ್ ಬಂಕ್‌ನಲ್ಲಿ ಸ್ನಾನ ಮಾಡಿರುವುದಾಗಿ ಸುದ್ದಿ ಹಬ್ಬಿರುವ ಹಿನ್ನೆಲೆಯಲ್ಲಿ ಸ್ಥಳೀಯ ಪರಿಸರದಲ್ಲಿ ಆತಂಕ ಮೂಡಿದೆ. ಆದರೆ ಈ ಬಗ್ಗೆ ಯಾರು ಕೂಡ ಆತಂಕ ಪಡುವ ಅಗತ್ಯ ಇಲ್ಲ. ಈ ಪೆಟ್ರೋಲ್ ಬಂಕ್‌ನಲ್ಲಿ ಸೋಂಕಿತ ವ್ಯಕ್ತಿ ಬಂದಿಲ್ಲ ಎಂದು ಗಂಗೊಳ್ಳಿ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News