ಬಂಟ್ವಾಳ : ದ್ವೇಷ ಹರಡುವ ಪೋಸ್ಟ್; ಯುವಕನ ವಿರುದ್ಧ ದೂರು ದಾಖಲು
ಬಂಟ್ವಾಳ, ಎ. 28: ಸಾಮಾಜಿಕ ಜಾಲತಾಣಗಳಲ್ಲಿ ಒಂದು ಸಮುದಾಯವನ್ನು ನಿಂದಿಸಿ ದ್ವೇಷ ಹರಡುವ ಪೋಸ್ಟ್ ಹಾಕಿರುವ ಆರೋಪದಲ್ಲಿ ಬಂಟ್ವಾಳ ನಗರ ಠಾಣೆಯಲ್ಲಿ ತಾಲೂಕಿನ ಆಲಂಪಾಡಿಯ ಯುವಕನ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರಾದ ಪಾಣೆಮಂಗಳೂರಿನ ಶೇಖಬ್ಬ ಎಂಬವರು ನೀಡಿದ ದೂರಿನಂತೆ ಸಜಿಪ ಮುನ್ನೂರು ಗ್ರಾಮದ ಆಲಂಪಾಡಿ ನಿವಾಸಿ ಯಶುಗಟ್ಟಿ ಎಂಬಾತನ ಮೇಲೆ ಪ್ರಕರಣ ದಾಖಲಾಗಿದೆ. ಕೊರೋನ ಸೋಂಕು ಹರಡಲು ಒಂದು ಸಮುದಾಯ ಕಾರಣ ಎಂದು ಮಸೀದಿ, ಧರ್ಮ ಗುರುಗಳು ಹಾಗೂ ಮುಸ್ಲಿಮರ ಪವಿತ್ರ ಸ್ಥಳಗಳನ್ನು ನಿಂದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿರುವ ಆರೋಪ ಈತನ ಮೇಲಿದೆ.
ಈತ ಈ ಹಿಂದೆಯೂ ಇದೇ ರೀತಿಯ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು ಆಲಂಪಾಡಿ ಪಿ.ಎಫ್.ಐ.ಯ ಶರೀಫ್ ಎಂಬವರು ಈತನ ವಿರುದ್ಧ ಬಂಟ್ವಾಳ ನಗರ ಠಾಣೆಗೆ ಎಪ್ರಿಲ್ 10ರಂದು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು. ಒಮ್ಮೆ ದೂರು ದಾಖಲಾದರೂ ಆತ ಮತ್ತೆ ದ್ವೇಷ ಹರಡುವ ಪೋಸ್ಟ್ ಹಾಕಿದ ಎರಡನೇ ಬಾರಿಗೆ ದೂರು ದಾಖಲಾಗಿದೆ.
ಕ್ರಮ ಆಗದಿರುವುದು ಕಾರಣ: ದ್ವೇಷ ಹರಡುವ ಪೋಸ್ಟ್ ಹಾಕಿರುವ ಆರೋಪದಲ್ಲಿ ಯಶುಗಟ್ಟಿ ವಿರುದ್ಧ ಒಮ್ಮೆ ಪ್ರಕರಣ ದಾಖಲಾದರೂ ಆತ ತನ್ನ ಚಾಲಿ ಮುಂದುವರಿಸಿ ಮತ್ತೆ ಕೋಮು ದ್ವೇಷ ಹರಡುವ ಪೋಸ್ಟ್ ಗಳನ್ನು ಹಾಕಿದ್ದಾನೆ. ಇದಕ್ಕೆ ಮೊದಲ ಬಾರಿ ದೂರು ನೀಡಿದಾಗ ಆತನ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸದೆ ಪೊಲೀಸರು ನಿರ್ಲಕ್ಷ್ಯ ತೋರಿರುವುದೇ ಕಾರಣ ಎಂದು ಪಿ.ಎಫ್.ಐ. ವಿಟ್ಲ ವಲಯ ಕಾರ್ಯದರ್ಶಿ ಹನೀಫ್ ಬೋಳಿಯಾರ್ ಆರೋಪಿಸಿದ್ದಾರೆ.